ಸಿಂದಗಿ: ಪಠ್ಯ ಆಧಾರಿತ ನಾಟಕಗಳು ವಿದ್ಯಾರ್ಥಿಗಳ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಕಲ್ಪವೃಕ್ಷ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಬಿ. ಸಿಂದಗಿ ಹೇಳಿದರು.
ಸಮೀಪದ ಮೋರಟಗಿ ಗ್ರಾಮದ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ರಂಗನಯನ ಸಾಂಸ್ಕೃತಿಕ ಸಂಸ್ಥೆ ಕಲಬುರ್ಗಿ ಅವರು ಹಮ್ಮಿಕೊಂಡಿದ್ದ ಪಿಯುಸಿ ಪಠ್ಯ ಪುಸ್ತಕ ಆಧಾರಿತ ಬೋಳೇಶಂಕರ ಮತ್ತು ಕೃಷ್ಣೇ ಗೌಡರ ಆನೆ ನಾಟಕಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿ ಒಬ್ಬ ಶಿಕ್ಷಕ ಪಾಠ ಮಾಡುವುದಕ್ಕಿಂತ ಆ ಪಾಠವನ್ನು ನಾಟಕ ಚಟುವಟಿಕೆಗಳ ಮೂಲಕ ಹೇಳುವುದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಉತ್ತಮ ಪರಿಣಾಮ ಬೀರಲಿದೆ ಇದರಿಂದ ವಿದ್ಯಾಭ್ಯಾಸದಲ್ಲೂ ಸಾಕಷ್ಟು ಧನಾತ್ಮಕ ಬದಲಾವಣೆಯನ್ನು ಕಾಣಬಹುದು ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಶರಣಗೌಡ ಬಿರಾದಾರ ಮಾತನಾಡಿ ನಾಟಕಗಳು ವಿದ್ಯಾರ್ಥಿಗಳಿಗೆ ಮನರಂಜನೆ ನೀಡುವುದರ ಜೊತೆಗೆ ಮಾನವೀಯ ಮೌಲ್ಯಗಳ ಜೊತೆಗೆ ಜೀವನದ ಪ್ರೀತಿಯ ಹಿರಿದಾದ ಸಂದೇಶ ಸಾರುತ್ತದೆ ಇಂದಿನ ಯುವ ಸಮುದಾಯಕ್ಕೆ ಪಠ್ಯ ಆಧಾರಿತ ಈ ಎರಡು ನಾಟಕಗಳು ಶಿಕ್ಷಣದ ಮಹತ್ವ ಮತ್ತು ಸಂಸ್ಕಾರದ ಹಿರಿಮೆಯನ್ನು ಆದರ್ಶ ಸಮಾಜದ ನಿರ್ಮಾಣದ ಕುರಿತು ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿವೆ ಈ ಕಲಾ ತಂಡದ ಕಲಾವಿದರು ಡಾ.ಚಂದ್ರಶೇಖರ ಕಂಬಾರ ರಚಿಸಿದ ಬೋಳೇಶಂಕರ, ಪೂರ್ಣ ಚಂದ್ರ ತೇಜಸ್ವಿ ರಚಿಸಿದ ಕೃಷ್ಣೇಗೌಡರ ಆನೆ ನಾಟಕ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರುವಂತೆ ಮಾಡಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಲಾ ತಂಡದ ಸಂಯೋಜಕ ಅರವಿಂದ ಕುಲಕರ್ಣಿ,ನಿರ್ದೆಶಕ ಧೀಮಂತರಾಮ, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ಬಿ. ಬಿರಾದಾರ, ಪ್ರಾಚಾರ್ಯ ಭಾರತಿ ಚಿಕ್ಕಲಗಿ, ಐಟಿ ಅಧಿಕಾರಿಗಳಾದ ಅಶೋಕ ಸಂಗೊಂಡ, ಹಿರಿಯ ಉಪನ್ಯಾಸಕ ಸಿ.ಸಿ. ಬಿರಾದಾರ, ಎಸ್.ಎಸ್. ನಿಗಡಿ, ಕನ್ನಡ ಉಪನ್ಯಾಸಕ ಶ್ರೀಶೈಲ ನಾಟೀಕಾರ, ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಇದ್ದರು.