ಶ್ರೀ ಪೇಜಾವರ ಶ್ರೀ ಚಾತುರ್ಮಾಸ್ಯ ನವದೆಹಲಿ 2026 : ಕೇಂದ್ರೀಯ ಸಂಸ್ಮೃತ ವಿವಿ ಯಿಂದ ಗೌರವಾರ್ಪಣೆ
ನವದೆಹಲಿ – ಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯ ಹಿಂದಿ ಆವೃತ್ತಿ ಲೋಕಾರ್ಪಣೆ ಋಷಿ ಋಣ ತೀರಿಸುವ ಬದ್ಧತೆ ಎಲ್ಲರಿಗೂ ಇರಬೇಕು . ಪ್ರಾಚೀನ ಋಷಿಮುನಿಗಳು ಜ್ಞಾನದ ದ್ರಷ್ಟಾರರು. ಇವತ್ತು ಭಾರತೀಯ ಜ್ಞಾನ ಸಂಪತ್ತುಗಳೆಲ್ಲ ಅವರ ಕೊಡುಗೆಯೇ ಆಗಿದೆ ಆದ್ದರಿಂದ ಅಂಥ ಋಷಿಗಳ ಋಣ ಭಾರವನ್ನು ತೀರಿಸುವ ಬದ್ಧತೆ ಸಮಾಜದ ಎಲ್ಲರಿಗೂ ಇರಲೇಬೇಕು ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿವಿಯಿಂದ ತಮಗೆ ಕೊಡಮಾಡಲ್ಪಟ್ಟ ಸನಾತನ ಧರ್ಮಪ್ರವರ್ತನಾಚಾರ್ಯ ಉಪಾಧಿ ಸಹಿತ ಗುರುವಂದನೆಯನ್ನು ಸ್ವೀಕರಿಸಿ ಹಾಗೂ ವಿವಿಯಿಂದ ಪ್ರಕಾಶನಗೊಂಡ ಜಗದ್ಗುರು ಶ್ರೀ ಮಧ್ವಾಚಾರ್ಯರ ಬ್ರಹ್ಮಸೂತ್ರ ಭಾಷ್ಯದ ಹಿಂದಿ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಿ ಸಂಸ್ಕೃತ ಭಾಷೆಯಲ್ಲಿಯೇ ಅನುಗ್ರಹ ಸಂದೇಶ ನೀಡಿದರು.
ವಿವಿ ಕುಲಪತಿ ಡಾ ವರಖೇಡಿ ಶ್ರೀನಿವಾಸ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಲಾಲ್ ಬಹಾದ್ದೂರ್ ಶಾಸ್ತ್ರಿ ಸಂಸ್ಕೃತ ವಿವಿ ಕುಲಪತಿ ಪ್ರೊ ಮುರಳೀಮನೋಹರ ಪಾಠಕ್ ಮುಖ್ಯ ಅಭ್ಯಾಗತರಾಗಿದ್ದರು. ವಿದ್ವಾಂಸರುಗಳಾದ ಸುಕಾಂತ ಕುಮಾರ ಸೇನಾಪತಿ, ಡಾ ಪೂರಣ್ ಮಲಗುಪ್ತಾಶ್ರೀಧರ ಮಿಶ್ರಾ ಲಲಿತಕುಮಾರ ತ್ರಿಪಾಠಿ , ಸಂಜೀವ ಗೋಯಲ್ , ಲೀನ್ ಸಕ್ಕರ್ ವಾಲ , ರಾ ಗಾ ಮುರಳೀಕೃಷ್ಣ ಡಾ ವಿಠೋಬಾಚಾರ್ಯ, ಪವನಕುಮಾರ ಮೊದಲಾದವರು ಉಪಸ್ಥಿತರಿದ್ದರು.
ಡಾ ಮಧುಕೇಶ್ವರ ಭಟ್ಟರು ಮಾನಪತ್ರವಾಚಿಸಿದರು. ಡಾ ಗಣೇಶ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು.