Homeಸುದ್ದಿಗಳುವಿದ್ಯಾರ್ಥಿಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಡಾ. ಸುರೇಶ ಹನಗಂಡಿ

ವಿದ್ಯಾರ್ಥಿಗಳು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ: ಡಾ. ಸುರೇಶ ಹನಗಂಡಿ

Published on

ಮೂಡಲಗಿ: ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿಗಳನ್ನು ಬೆಳೆಸಿಕೊಳ್ಳಬೇಕು. ಭವಿಷ್ಯದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮುವ ಮೂಲಕ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು. ಯಾವುದೇ ಆಶೆ-ಆಮಿಷಗಳಿಗೆ ಒಳಗಾಗದೆ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಕಲ್ಲೋಳಿ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ ಅವರು ತಿಳಿಸಿದರು.

ತಾಲೂಕಿನ ಕಲ್ಲೋಳಿ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ (ELC) ಆಶ್ರಯದಲ್ಲಿ ಶನಿವಾರ ಜರುಗಿದ “ಮತದಾನ ಜಾಗೃತಿ ಹಾಗೂ ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆ” ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿನಿಯರ ಮತ್ತು ಮಹಿಳಾ ಸಿಬ್ಬಂದಿಯ ಸುರಕ್ಷತೆಗೆ ಸದಾ ಆದ್ಯತೆ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ಮತದಾರರ ಸಾಕ್ಷರತಾ ಘಟಕದ ಸಂಯೋಜಕ ಎಂ.ಆರ್. ಕರಗಣ್ಣಿ ಅವರು ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ಪ್ರತಿಯೊಬ್ಬ ನಾಗರಿಕನ ಮತದಾನದ ಮೇಲೆ ನಿಂತಿದೆ. ಯುವಕರು ಪ್ರಬುದ್ಧತೆಯಿಂದ ನೈತಿಕ ಮತದಾನ ಮಾಡಬೇಕು. ಜೊತೆಗೆ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷಿತ ಹಾಗೂ ಗೌರವಯುತ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಆದ್ಯ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬರೂ ಲೈಂಗಿಕ ಕಿರುಕುಳ ತಡೆ ಕಾಯ್ದೆಗಳ ಬಗ್ಗೆ ಅರಿವು ಹೊಂದಿರಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ‘ನಿಮ್ಮ ಮತವೇ ನಿಮ್ಮ ಧ್ವನಿ’ ಮತ್ತು ‘ಪ್ರತಿಯೊಂದು ಮತವೂ ಅಮೂಲ್ಯ’ ಎಂಬ ಆಶಯದೊಂದಿಗೆ ಉಪನ್ಯಾಸಕ ವಿಲಾಸ ಕೆಳಗಡೆ ಅವರು ನೆರೆದಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ವೇದಿಕೆಯ ಮೇಲೆ ಐಕ್ಯೂಎಸಿ ಸಂಯೋಜಕ ಡಾ. ಎಂ.ಬಿ. ಕುಲಮೂರ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಶಂಕರ ನಿಂಗನೂರ, ಡಿ.ಎಸ್. ಹುಗ್ಗಿ, ಡಾ. ಕೆ.ಎಸ್. ಪರವ್ವಗೋಳ, ಅಕ್ಷತಾ ಮೇದಾರ, ಆರ್.ಎಸ್. ಪಂಡಿತ, ಅಪ್ಪಣ್ಣ ಮಿಶಿನಾಯಿಕ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ರಮೇಶ ಪೂಜಾರಿ ಅವರು ಸರ್ವರನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಡಾ. ರಾಜಶ್ರೀ ತೋಟಗಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಿ.ಸಿ. ಮಾಳಿ ಅವರು ವಂದನಾರ್ಪಣೆಗೈದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

Latest articles

More like this