ಬಣ್ಣಗಳ ಬೆಡಗು
ನಿನ್ನ ಪ್ರೀತಿಯ ಮಿನುಗು ಕೆಂಪು ಬಣ್ಣದಲಿ ಮಿಂದ ಮನ ನಂದನವಾಯಿತು
ನಿನ್ನ ಸ್ನೇಹದ ಜಿನುಗು ಹಳದಿ ಬಣ್ಣದಲಿ ಮಿಂದ ಎದೆ
ಚಂದನವಾಯಿತು
ಮುಗಿಲ ನೀಲಿ ಬಣ್ಣ ಸೇರುವ ಕನಸುಗಳಲಿ ಮೀಯುತ
ಜೀವನ ಚೆಂದವಾಯಿತು
ನಗುವ ಹಸಿರು ಸಾಗರದಲಿ ಬೆರೆಯುತ ಮೌನಭಾವ ಆನಂದವಾಯಿತು
ಕರುಣೆಯ ಕಡಲಿನ ಕೇಸರಿಯ ಅಲೆಯಲಿ ತೇಲಿದ ಬಾಳು ಸಿರಿಗಂಧವಾಯಿತು
ಒಲವಿನ ಹಣತೆಯ ಶ್ವೇತ ಬೆಳಕಿನ ಹೊನಲಲಿ ಬದುಕು
ಜೀವಬಂಧವಾಯಿತು
ಮಳೆಬಿಲ್ಲ ಬಣ್ಣಗಳ ಬಾಂದಳದಿ ನಿತ್ಯ ಸತ್ಯ ಸಾಕ್ಷಾತ್ಕಾರ ಮಂದಾನಿಲವಾಯಿತು
ದೃಷ್ಟಿ ಬೊಟ್ಟಿನಂತೆ ಕಪ್ಪು ನಮ್ಮೀರ್ವರ ಜೊತೆ ಹೆಜ್ಜೆಗಳಿಗೆ
ಅಂದವಾಯಿತು
ಬಣ್ಣದ ಗರಿಬಿಚ್ಚಿ ಕುಣಿವ ನವಿಲಾಗಿ ಹೋಳಿಯ ರಂಗಿಗೆ ಕೆನ್ನೆ ಗುಲಾಬಿ ಸಿಂಧುವಾಯಿತು
ಕಾಮನಬಿಲ್ಲಾಗಿ ಬಾಗಿ ಬಣ್ಣ ಭುವಿಗೆ ಮುತ್ತಿಡುವ ರೀತಿ ಪ್ರೀತಿಯ ಬಿಂದುವಾಯಿತು
ಶಶಿ ಚೆಲ್ಲಿದ ಬೆಳ್ಳನೆಯ ಬಿಳಿನೊರೆ ಹಾಲ ಪ್ರೇಮ ಬೆಳದಿಂಗಳಲಿ ಕಂಗಳ ಕಾಂತಿ ಮಂದವಾಯಿತು
ನಿನ್ನ ನೇಹ ಕರಗಳ ಕರೆಯೇ ಕರಿಕಪ್ಪು ಕತ್ತಲಲಿ ಇಂದುವಿನ ಎದೆ ಬೆಳಕ ಇಂಧನವಾಯಿತು
– ಇಂದಿರಾ ಮೋಟೆಬೆನ್ನೂರ. ಬೆಳಗಾವಿ