Homeಸುದ್ದಿಗಳುಕವನಮಕ್ಕಳ ಕವನ 'ನನ್ನ ಸಾಯಿಕಲ್'

ಮಕ್ಕಳ ಕವನ ‘ನನ್ನ ಸಾಯಿಕಲ್’

Published on

ನನ್ನ ಸಾಯಿಕಲ್

ನಮ್ಮ ಅಪ್ಪ ನನಗೆ ಒಂದು
ಚಿಕ್ಕ ಸಾಯಿಕಲ್ ಕೊಡಿಸಿದ
ಮನೆ ಮಂದಿಗೆಲ್ಲ ಇಂದು
ತುಂಬ ಹರುಷ ತರಿಸಿದ

ಎನಿತು ಚೆನ್ನ ನೀಲಿ ಬಣ್ಣ
ಮಿರಿ ಮಿರಿ ಮಿಂಚುವದು
ಕಣ್ಣು ಬಿಟ್ಟು ನೋಡಿದರೆ
ದೃಷ್ಟಿ ತಗಲುವಂತಿಹುದು

ಅಂದದ ಸುಂದರ ಸೀಟು ನೋಡು
ಚೆಂದದ ಚೆಲುವಿನ ಹ್ಯಾಂಡಲ್ ನೋಡು
ಗರಗರ ತಿರುಗುವ ಗಾಲಿಯ ನೋಡು
ತಿರುಗಿಸುತಿರುವ ಪ್ಯಾಡಲ್ ನೋಡು

ಲಾಕ್ ಉಂಟು ಬ್ರೇಕ್ ಉಂಟು
ಟ್ರಿನ್ ಟ್ರಿನ್ ನಾದದ ಗಂಟೆ ಉಂಟು
ಸ್ಕೂಲ ಬ್ಯಾಗ ಇರಿಸಲು
ಕ್ಯಾರಿಯರವೂ ಉಂಟು

ಟ್ರಿನ್ ಟ್ರಿನ್ ಗಂಟೆ ಬಾರಿಸಿ ನಾನು
ಲಗುಬಗೆ ಶಾಲೆಗೆ ಹೊರಡುವೆನು
ಎಲ್ಲರಿಗಿಂತ ಮೊದಲೆ ನಮ್ಮ
ಶಾಲೆಗೆ ಬಂದು ತಲುಪುವೆನು

 ಪರಿಸರ ರಕ್ಷಣೆಯ ಕೂಗು
…………………………….

ವಿಶ್ವ ಪರಿಸರ ದಿನ ಸಮೀಪಿಸಿದಂತೆ
ಪರಿಸರ ರಕ್ಷಣೆ ಕೂಗು ಅಬ್ಬರಿಸುತಿದೆ
ಬೋರ್ಗಲ್ಲ ಮೇಲೆ ಮಹಾಮಳೆ ಸುರಿದಂತೆ
ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ

ಈ ಕೂಗು ಹೇಗೆ ಹಾಸ್ಯಕ್ಕೆ ಈಡಾಗಿದೆಯೆಂದರೆ
ತಾನೇ ಕಳ್ಳತನ ಮಾಡುತ್ತ ಮಾಡುತ್ತ
ಕಳ್ಳನನ್ನು ಹಿಡಿಯಿರಿ ಹಿಡಿಯಿರಿ ಎಂದು
ಬೊಬ್ಬೆ ಹಾಕುತ್ತ ಓಡುತ್ತಿರುವವನಂತೆ

‘ಮದ್ಯಪಾನ ತುಂಬ ಹಾನಿಕರ’ ಎಂದು
ಮದ್ಯದ ಬಾಟ್ಲಿ ಮೇಲೆ ಲೇಬಲ್ ಹಚ್ಚಿದಂತೆ
‘ಧೂಮಪಾನ ಬಲು ಅಪಾಯಕರ’ ಎಂದು
ಸಿಗಾರ್ ಪ್ಯಾಕೆಟ್ ಮೇಲೆ ಛಾಪಿಸಿದಂತೆ

ಇಲಿಗಳೆಲ್ಲ ಕೂಡಿ ಮಾತಾಡಿಕೊಂಡವಂತೆ
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಬೇಕಂತೆ
ಕೊರಳಿಗೆ ಗಂಟೆ ಕಟ್ಟುವವರಾರು ಎಂದರೆ
ಇದಕ್ಕೆ ಉತ್ತರವೇ ಸಿಗಲಿಲ್ಲವಂತೆ

ಆರ್. ಎಸ್. ಚಾಪಗಾವಿ
ಬೆಳಗಾವಿ 8317404648

Latest articles

More like this