ಕೊನೆಯ ಪ್ರಶ್ನೆಯೊಂದು ಹಾಗೆ ಉಳಿದಿದೆ
ಹೃದಯದ ಕದ ತೆರೆದು
ಅಕ್ಕರೆಯ ಧಾರೆ ಎರೆದು
ಉಸಿರನ್ನೇ ಹೊದಿಕೆಯಾಗಿಸಿ,
ಹರಿಯುವ ಹೊಳೆಯ ಮೈ ತೊಳೆದಂತೆ
ಪ್ರೀತಿಯನು ತುಂಬಿದೆ ಹೇಗೆ?
ಗಾಯದಂಚಿಗೆ ನೆನಪಿನ ದಾರ ಹೊಲಿದು,
ಮಡಿಲಲಿ ಮುಗ್ಧ ಮುದ್ರೆಯನೊತ್ತಿ
ಆಯಾಸ ತಣಿಸುವ ನಿದಿರೆಯ ಬಿತ್ತಿ,
ಎದೆಯ ಮೇಲೆ ತಲೆಯಾನಿಸಿ
ಕನಸಿನ ಗುಚ್ಛವನು ಕಣ್ಣೊಳಗೆ ಕಟ್ಟಿ
ನಿನ್ನ ಧಮನಿಯ ರಾಗವನು ಸವರಿದೆ ಹೇಗೆ?
ಜತನದಲಿ ಒಲವ ಗೂಡನು ಕಟ್ಟಿ,
ಅಪವೇಳೆಯ ಕತ್ತಲನು ಮೆಟ್ಟಿ,
ನಿಶ್ಯಬ್ದದ ಕಂಪನು ಛೇಡಿಸಿ,
ಜುಮ್ಮೆನ್ನುವ ತಂಗಾಳಿಯ ಬೀಸಿ,
ದವದವಿಸುವ ಜೀವಕೆ ಉಸಿರ ತಂದು
ಏರಿಳಿತದ ಎದೆಬಡಿತದ ನಡುವೆ
ಬಿಸಿ ಬೆಳದಿಂಗಳನು ನೇವರಿಸಿದೆ ಹೇಗೆ?
ಕೊನೆಯ ಪ್ರಶ್ನೆಯೊಂದು ಇನ್ನೂ ಕಾಡುತ್ತಿದೆ;
ಅರಳಿ ನಿಂತ ಅಂತರಂಗ
ಪಿಸುಗುಟ್ಟುವ ಉಸಿರ ಮೇಲೆ ತೊದಲಿದೇಗೆ?
ಸುಲಿದ ಸಂಜೆಗತ್ತಲ ನೆರಳನು
ನೆತ್ತರಲಿ ನೆನೆಸಿಕೊಂಡು—
ನನ್ನನು ಮರೆತು ನೀನು ಬದುಕಿದ್ದಾದರೂ ಹೇಗೆ?
••••••••••••••••••••••
ಶರಣಪ್ಪ ತಳ್ಳಿ ಕುಪ್ಪಿಗುಡ್ಡ