Homeಸುದ್ದಿಗಳುಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಶ್ರೀಕೃಷ್ಣ ಕಾಲೇಜಿಗೆ ಪದಕಗಳ ಸಾಧನೆ

ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಶ್ರೀಕೃಷ್ಣ ಕಾಲೇಜಿಗೆ ಪದಕಗಳ ಸಾಧನೆ

Published on

ಕರಾಟೆ ಮತ್ತು ಪೆನ್ಕಾಕ್ ಸಿಲಾಥ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳ ಜಯ; ಹರಿಕಿರಣ್ ರಾಷ್ಟ್ರಮಟ್ಟಕ್ಕೆ ಆಯ್ಕೆ

 

ಬೆಂಗಳೂರು: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳ ವತಿಯಿಂದ ನ. 13 ಮತ್ತು 14ರಂದು ಆಯೋಜಿಸಲಾಗಿದ್ದ ಅಂತರ್ ಕಾಲೇಜು ಮಟ್ಟದ ಕರಾಟೆ ಹಾಗೂ ಪೆನ್ಕಾಕ್ ಸಿಲಾಥ್ ಪಂದ್ಯಾವಳಿಗಳಲ್ಲಿ ಬನಶಂಕರಿ 3ನೇ ಹಂತದ ಐಟಿಐ ಬಡಾವಣೆಯ ಶ್ರೀಕೃಷ್ಣ ಪದವಿ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ರಾಜಾಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಈ ಪಂದ್ಯಾವಳಿಗಳಲ್ಲಿ ಶ್ರೀಕೃಷ್ಣ ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕರಾಟೆ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕ ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದ ವಿದ್ಯಾರ್ಥಿಗಳು, ಪೆನ್ಕಾಕ್ ಸಿಲಾಥ್ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕ, ಒಂದು ಬೆಳ್ಳಿ ಪದಕ ಮತ್ತು ಒಂದು ಚಿನ್ನದ ಪದಕವನ್ನು ಜಯಿಸಿದ್ದಾರೆ.

ಪೆನ್ಕಾಕ್ ಸಿಲಾಥ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ದ್ವಿತೀಯ ವರ್ಷದ ಬಿಬಿಎ ವಿದ್ಯಾರ್ಥಿ ಹರಿಕಿರಣ್ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ಸಂಗತಿಯಾಗಿದೆ.

ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಂ. ರುಕ್ಮಾಂಗದ ನಾಯ್ಡು, ಪ್ರಾಂಶುಪಾಲರಾದ ಡಾ. ಎನ್. ಉಷಾಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಶ್ರೀಮಂತರಾಯ, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ, ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.

Latest articles

More like this