ಒಕ್ಕೂಟದ ಅನುದಾನದಲ್ಲಿ 2.40 ಕೋಟಿ ರೂಪಾಯಿ ವೆಚ್ಚದ ವಿವಿಧ ಉಪಕರಣಗಳ ವಿತರಣೆ
*ಬೆಳಗಾವಿ: ಜಿಲ್ಲಾ ವ್ಯಾಪ್ತಿಯ ಹಾಲು ಉತ್ಪಾದಕರ ಸದಸ್ಯರಿಗೆ 2.40 ಕೋಟಿ ರೂಪಾಯಿ ವೆಚ್ಚದ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಲಾಗುತ್ತಿದೆ. ಈ ಮೂಲಕ ಒಕ್ಕೂಟಕ್ಕೆ ಆದ ಲಾಭಾಂಶದಲ್ಲಿ ಹಾಲು ಪೂರೈಕೆ ಮಾಡುತ್ತಿರುವ ಹೈನುಗಾರರಿಗೆ ದೀಪಾವಳಿಯ ಕೊಡುಗೆಯನ್ನಾಗಿ ನೀಡಲಾಗುತ್ತಿದೆ ಎಂದು
ಅರಭಾವಿ ಶಾಸಕರೂ ಆಗಿರುವ ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ನಗರದ ಮಹಾಂತೇಶ ನಗರದಲ್ಲಿ ಪ್ರಸ್ತುತ ಸಾಲಿನಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವು ಗಳಿಸಿದ ಲಾಭಾಂಶದಲ್ಲಿ ಹಾಲು ಉತ್ಪಾದಕ ಸದಸ್ಯರಿಗೆ ಶೇ. 60 ರಷ್ಟು ಅನುದಾನದಲ್ಲಿ 2.40 ಕೋಟಿ ರೂಪಾಯಿ ವೆಚ್ಚದ ವಿವಿಧ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.
ಒಕ್ಕೂಟದ ಅನುದಾನದಲ್ಲಿ 100 ಸದಸ್ಯರಿಗೆ 13,47,500 ರೂಪಾಯಿ ವೆಚ್ಚದ ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರ ಸಿಂಗಲ್ ಬಕೆಟ್, 100 ಸದಸ್ಯರಿಗೆ 16 ಲಕ್ಷ ರೂಪಾಯಿ ವೆಚ್ಚದ ವಿದ್ಯುತ್ ಚಾಲಿತ 2 ಎಚ್.ಪಿ ಮೇವು ಕತ್ತರಿಸುವ ಯಂತ್ರ, 300 ಜನ ಫಲಾನುಭವಿಗಳಿಗೆ 85,71,300 ರೂಪಾಯಿ ವೆಚ್ಚದ ಡೀಸೆಲ್ ಚಾಲಿತ 5 ಎಚ್.ಪಿ ಮೇವು ಕತ್ತರಿಸುವ ಯಂತ್ರ ಮತ್ತು 1.25 ಕೋಟಿ ರೂಪಾಯಿ ವೆಚ್ಚದಲ್ಲಿ 10 ಸಾವಿರ ರಬ್ಬರ್ ಮ್ಯಾಟ್ ಗಳನ್ನು ರೈತ ಫಲಾನುಭವಿಗಳಿಗೆ ವಿತರಣೆ ಮಾಡಿದರು.
ಜಿಲ್ಲೆಯಲ್ಲಿ ಒಟ್ಟು 664 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ಆಕಳು ಮತ್ತು ಎಮ್ಮೆ ಹಾಲು ಸೇರಿ ದಿನಂಪ್ರತಿ ಸರಾಸರಿ 3.20 ಲಕ್ಷ ಹಾಲು ಶೇಖರಣೆಯಾಗುತ್ತಿದೆ. ಇದರಲ್ಲಿ ಸರಾಸರಿ 2.45 ಲಕ್ಷ ಲೀಟರ್ ಆಕಳು ಹಾಲು ಹಾಗೂ ಸರಾಸರಿ 71 ಸಾವಿರ ಕ್ಕೂ ಅಧಿಕ ಎಮ್ಮೆ ಹಾಲು ಸಂಗ್ರಹವಾಗುತ್ತಿರುವುದು ನಂದಿನಿ ಮೇಲೆ ರೈತರು ಇಟ್ಟಿರುವ ವಿಶ್ವಾಸವೇ ಕಾರಣವಾಗಿದೆ ಎಂದು ಅವರು ಹೇಳಿದರು.
ಇದೇ ನವೆಂಬರ್ ಒಂದರಿಂದ ಸರ್ಕಾರವು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ದರವನ್ನು ಪರಿಷ್ಕರಣೆ ಮಾಡಿದೆ. ಇದರಿಂದ ಹಾಲು, ಮೊಸರು, ಮಜ್ಜಿಗೆ ಮತ್ತು ಲಸ್ಸಿ ಉತ್ಪನ್ನಗಳ ಬೆಲೆ ಏರಿಕೆಯಾಗಿವೆ. ಲಕ್ಷಾಂತರ ಗ್ರಾಹಕರು ನಂದಿನಿ ಉತ್ಪನ್ನಗಳ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಗ್ರಾಹಕ ಬಂಧುಗಳ ಆರೋಗ್ಯದ ದೃಷ್ಟಿಯಿಂದ ನಿರಂತರವಾಗಿ ಕಲಬೆರಕೆ ರಹಿತ ಶುದ್ಧ ಮತ್ತು ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆಯನ್ನು ಮಾಡಲಾಗುತ್ತಿದೆ. ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಅವರ ಜೀವನೋಪಾಯವನ್ನು ಸುಸ್ಥಿರವಾಗಿರಿಸಲು ಮತ್ತು ಹಾಲು ಉತ್ಪಾದನಾ ಕ್ಷೇತ್ರ ನಿರಂತರವಾಗಿ ಅಭಿವೃದ್ಧಿ ಹೊಂದಬೇಕೆನ್ನುವ ಉದ್ದೇಶದಿಂದ ಅನಿವಾರ್ಯ ಕಾರಣಗಳಿಂದ ನಂದಿನಿ ಹಾಲಿನ ದರವನ್ನು ಪರಿಷ್ಕರಣೆ ಮಾಡಲಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರು, ಅಧಿಕಾರಿಗಳು ಮತ್ತು ಹೈನುಗಾರ ರೈತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂದಿನಿ ಎಂದರೆ ಕೇವಲ ಹಾಲಿನ ಬ್ರ್ಯಾಂಡ್ ಅಲ್ಲ. ಅದು ಲಕ್ಷಾಂತರ ಹೈನುಗಾರ ರೈತರ ಬದುಕಿನ ಆಧಾರ. ಗ್ರಾಮೀಣ ಆರ್ಥಿಕತೆಯ ಶಕ್ತಿ ಮತ್ತು ಗ್ರಾಹಕರ ವಿಶ್ವಾಸದ ಪ್ರತೀಕವಾಗಿದೆ. ಸಾವಿರಾರು ಹಾಲು ಉತ್ಪಾದಕ ರೈತರು, ಸಹಕಾರ ಸಂಘಗಳು, ವಿತರಕರು, ವ್ಯಾಪಾರಿಗಳು, ಲಕ್ಷಾಂತರ ಗ್ರಾಹಕರ ಜೀವನದೊಂದಿಗೆ ಉತ್ತಮ ಒಡನಾಟ ಹೊಂದಿದೆ. ಪ್ರಸಕ್ತ ವರ್ಷದಲ್ಲಿ ಮಳೆಯ ಅಭಾವದಿಂದ ಮೇವು, ಪಶು ಆಹಾರಗಳ ಕೊರತೆ ಹೆಚ್ಚಾಗಿದ್ದು, ಇದರಿಂದ ಹೈನುಗಾರ ರೈತರು ಜಾನುವಾರುಗಳ ನಿರ್ವಹಣೆ, ಮೇವು ಖರೀದಿ, ಹಾಲು ಉತ್ಪಾದನಾ ವೆಚ್ಚ ಅಧಿಕಗೊಂಡು ಜಿಲ್ಲೆಯ ರೈತರ ಹೆಚ್ಚಿನ ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಹೈನುಗಾರ ರೈತರು ಆರ್ಥಿಕವಾಗಿ ಸಬಲರಾಗಬೇಕು. ರೈತರ ಹಿತವೇ ನಂದಿನಿಯ ಹಿತವಾಗಿದ್ದು, ಗ್ರಾಹಕರ ವಿಶ್ವಾಸವೇ ನಂದಿನಿಯ ಶಕ್ತಿಯಾಗಿದೆ.
ಬಾಲಚಂದ್ರ ಜಾರಕಿಹೊಳಿ
ಶಾಸಕರು, ಅಧ್ಯಕ್ಷರು ಬೆಮುಲ್