ಬೀದರ – ಜಾತಿ ಆದಾಯ ಪ್ರಮಾಣ ಪತ್ರ ಬೇಕಾದರೆ ೪ ಸಾವಿರ ಲಂಚ ಕೊಡಬೇಕು, ಅಂಗನವಾಡಿ ಹೆಲ್ಪರ ಹುದ್ದೆ ಬೇಕಾದರೆ ೨ ಲಕ್ಷ ರೂ. ಕೊಡಬೇಕು ಎಂದು ಯುವಕರೊಬ್ಬರು ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಸ್ಫೋಟಕ ಆರೋಪ ಮಾಡಿದ್ದು ಬೀದರ ಜಿಲ್ಲೆಯಾದ್ಯಂತ ಚರ್ಚೆ ಶುರುವಾಗಿದೆ.
ಈ ಯುವಕ ಫೇಸ್ ಬುಕ್ ನಲ್ಲಿ ವಿಡಿಯೋ ಹರಿಬಿಟ್ಟಿದ್ದು, ಭಾಲ್ಕಿ ತಾಲೂಕಿನ ಹಲಬರ್ಗಾ ಗ್ರಾಮದಲ್ಲಿ ರೇಷನ್ ಕಾರ್ಡ್ ಕೆವೈಸಿ ಮಾಡಲು ಜಾತಿ ಆದಾಯ ಪ್ರಮಾಣ ಪತ್ರ ಕೇಳಲು ಹೋದರೆ ಬರೊಬ್ಬರಿ ನಾಲ್ಕು ಸಾವಿರ ಲಂಚ ಕೇಳುತ್ತಾರೆ. ನೇರವಾಗಿ ಆನ್ ಲೈನ್ ಅರ್ಜಿ ಸಲ್ಲಿಸಿದರೆ ತಿರಸ್ಕಾರ ಮಾಡುತ್ತಾರೆ ಎಂದು ಹೇಳಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಅಂಗನವಾಡಿ ಹೆಲ್ಪರ ಹುದ್ದೆಗೆ ಅರ್ಜಿ ಕರೆಯಲಾಗಿದ್ದು ಸದ್ಯಕ್ಕೆ ಎರಡು ಲಕ್ಷ ರೂ. ಲಂಚ ಕೇಳುತ್ತಿದ್ದಾರೆ. ಇವರಿಗೆ ಸಂಬಳ ಕೇವಲ ಆರು ಸಾವಿರ ಇದೆ ಇಂಥ ಕೆಲಸಕ್ಕೆ ಎರಡು ಲಕ್ಷ ಕೊಟ್ಟು ಬಡವರು ಹೇಗೆ ಜೀವನ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ತವರು ಜಿಲ್ಲೆಯಲ್ಲಿಯೇ ಈ ಲಂಚಾವತಾರ ನಡೆದಿದ್ದು ಸಚಿವರು ಇದಕ್ಕೆ ಉತ್ತರ ನೀಡಬೇಕಾಗಿದೆ. ಇದರಿಂದ ಜಿಲ್ಲಾಡಳಿತವನ್ನೇ ಪ್ರಶ್ನಿಸುವ ಗಂಭೀರ ವಿಚಾರ ಇದಾಗಿದ್ದು ಜನ ಸಾಮಾನ್ಯರ ಅರ್ಜಿಗಳಿಗೆ ಬೆಲೆಯೇ ಇಲ್ಲವೆ ? ಸರ್ಕಾರ ಇಷ್ಟೊಂದು ಭ್ರಷ್ಟ ಯಾಕಾಗಿದೆ ಎಂದು ಸಾರ್ವಜನಿಕರು ಕೇಳುವಂತಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ