ಯರಗಟ್ಟಿ: ಆಧುನಿಕ ಜಗತ್ತಿನ ಪ್ರತಿಷ್ಠೆಗಳೆನಿಸಿರುವ ಅಧಿಕಾರ, ಅಂತಸ್ತು, ವಿದ್ಯೆ ಹಾಗೂ ಪದವಿಗಳಿಗಿಂತ ಸಂಸ್ಕಾರ ಅಗತ್ಯ ಎಂದು ಕಟಕೋಳದ ವಿರಕ್ತಮಠದ ಸಚ್ಚಿದಾನಂದ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಮಹಾಂತ ದುರದುಂಡೇಶ್ವರ ಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ ವಿಶೇಷ ಶಿವಾನುಭವ ಗೋಷ್ಠಿ ಹಾಗೂ ಗುಡ್ಡಾಪುರದ ದಾನಮ್ಮದೇವಿಯ ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ವಹಿಸಿದ ಮುನವಳ್ಳಿಯ ಸೋಮಶೇಖರ ಮಠದ ಮುರಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮಕ್ಕಳಿಗೆ ಒಳ್ಳೆಯ ಶಿಕ್ಷಣದೊಂದಿಗೆ ನಮ್ಮ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳನ್ನು ತಿಳಿಸಿಕೊಡಬೇಕು ಎಂದು ಹೇಳಿದರು.
ಇದಕ್ಕೂ ಮೊದಲು ಶ್ರೀ ಸಿ.ಎಂ. ಮಾಮನಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ರಾಜಶೇಖರ ಬಿರಾದಾರ ಅವರು ದಾನಮ್ಮದೇವಿಯ ಜೀವನ ಹಾಗೂ ಸಾಧನೆಗಳನ್ನು ಕುರಿತು ಉಪನ್ಯಾಸ ನೀಡಿದರು. ಬಸವಾದಿ ಶಿವಶರಣರ ಸಮಕಾಲೀನಳಾದ ದಾನಮ್ಮದೇವಿಯು ಅಕ್ಕಮಹಾದೇವಿಯ ನಂತರ ಹೆಚ್ಚು ಜನಾನುರಾಗಿಯಾದ ಶರಣಾಗಿದ್ದಾಳೆ. ಉಳಿದ ಶರಣರಂತೆ ವಚನ ರಚನೆಯಲ್ಲಿ ತೊಡಗದೆ ಅನುಭವ ಮಂಟಪದಲ್ಲಿ ತಾನು ಪಡೆದ ಜ್ಞಾನವನ್ನು ಜನಮಾನಸದಲ್ಲಿ ಪಡಿಮೂಡಿಸುವ ಮಹತ್ವದ ಕೆಲಸವನ್ನು ಮಾಡಿದರು. ಲಿಂಗನಿಷ್ಠೆ, ಜಂಗಮ ಪ್ರೇಮ, ದಾನ, ಧರ್ಮ, ನೊಂದವರು, ಅಸಹಾಯಕರ ಸೇವೆಗೆ ತಮ್ಮ ತನು-ಮನಗಳನ್ನು ಸಮರ್ಪಸಿಕೊಂಡಿದ್ದರು. ನೆಮ್ಮದಿಯುತ ಬದುಕಿಗೆ ದಾನಮ್ಮದೇವಿಯ ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು.
ಅಶೋಕ ಹಾದಿಮನಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಮಾದೇವಿ ಪೂರ್ವಿಮಠ, ದುಂಡಯ್ಯ ಹಿರೇಮಠ, ಗೂಳಪ್ಪ ಗಾಣಿಗೇರ, ಬಸವರಾಜ ಕುರಬೇಟ, ಶಿವಾನಂದ ಪಟ್ಟಣಶೆಟ್ಟಿ, ರಾಜೇಂದ್ರ ವಾಲಿ, ಅಶೋಕ ಗಾಣಿಗಿ ಹಾಗೂ ಶಾರದಾ ಹೊಸೂರ ಅವರು ಉಪಸ್ಥಿತರಿದ್ದರು. ಸದಾನಂದ ಹಣಬರ ಅವರು ನಿರೂಪಿಸಿದರು, ವಿಜಯಕಾಂತ ಮರಡಿ ಸ್ವಾಗತಿಸಿದರು, ಉಮಾದೇವಿ ಪೂರ್ವಿಮಠ ಅವರು ವಂದಿಸಿದರು.