ಸಿಂದಗಿ: ಮಹಿಳೆಯರ ಸಂವಿಧಾನಬದ್ಧ ಹಕ್ಕುಗಳು, ಗೃಹ ಹಿಂಸೆ ತಡೆಕಾಯ್ದೆ, ವರದಕ್ಷಿಣೆ ನಿಷೇಧ ಕಾಯ್ದೆ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಕಾನೂನು ನೆರವು ಪಡೆಯುವ ವಿಧಾನ, ಉಚಿತ ಕಾನೂನು ಸೇವೆಗಳ ಲಭ್ಯತೆ ಹಾಗೂ ಮಹಿಳೆಯರ ರಕ್ಷಣೆಗೆ ಜಾರಿಯಲ್ಲಿರುವ ವಿವಿಧ ಕಾನೂನುಗಳ ಕುರಿತು ಸಮಗ್ರ ಮಾಹಿತಿಗಳನ್ನು ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗಿ ಯಾವುದೇ ಅನ್ಯಾಯವನ್ನು ಧೈರ್ಯದಿಂದ ಎದುರಿಸಬೇಕೆಂದು ಸಂಪನ್ಮೂಲ ವ್ಯಕ್ತಿ ವಿನಾಯಕ ಬಡಿಗೇರ, ವಕೀಲರು, ಕರೆ ನೀಡಿದರು.
ನಗರದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ವತಿಯಿಂದ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ಗ್ರಾಮೀಣ ಸ್ವ-ಉದ್ಯೋಗ ಹಾಗೂ ಮಹಿಳಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಅಬ್ದುಲ್‌ಅಜೀಜ ಯಡ್ರಾಮಿ ಮಾತನಾಡಿ, ಭೂಮಿ ಹೋರಾಟಗಾರರು, ಗ್ರಾಮೀಣ ಸ್ವ-ಉದ್ಯೋಗದ ಮಹತ್ವ, ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಕೃಷಿ ಆಧಾರಿತ ಉದ್ಯಮಗಳು, ಹೈನುಗಾರಿಕೆ, ಕುರಿ ಸಾಕಾಣಿಕೆ, ಸಾವಯವ ಕೃಷಿ, ಮಹಿಳಾ ಸ್ವ-ಸಹಾಯ ಸಂಘಗಳ ಮೂಲಕ ಆದಾಯ ಗಳಿಕೆ ಹಾಗೂ ಸರ್ಕಾರದ ವಿವಿಧ ಸ್ವ-ಉದ್ಯೋಗ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಮಹಿಳೆಯರು ತಮ್ಮಕೌಶಲ್ಯವನ್ನು ಬಳಸಿಕೊಂಡು ಸ್ವಂತ ಉದ್ಯಮ ಆರಂಭಿಸುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಬಹುದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಸಿಸ್ಟರ್ ಪ್ರಿಯಾಂಕಾ ಮಾತನಾಡಿ, ಮಹಿಳೆಯರು ಶಿಕ್ಷಣ, ಕಾನೂನು ಅರಿವು ಹಾಗೂ ಆರ್ಥಿಕ ಸ್ವಾವಲಂಬನೆಯ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಪಡೆದುಕೊಳ್ಳಬೇಕು. ಮಹಿಳಾ ಸಂಘಗಳ ಮೂಲಕ ನಾಯಕತ್ವ ಬೆಳೆಸಿಕೊಂಡು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಗ್ರಾಮೀಣ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ೧೨೦ ಮಹಿಳಾ ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿ, ಸಂಪನ್ಮೂಲ ವ್ಯಕ್ತಿಗಳಿಂದ ನೀಡಲಾದ ಮಾಹಿತಿಯ ಪ್ರಯೋಜನ ಪಡೆದುಕೊಂಡರು.