ಬೆಂಗಳೂರಿನ ಬಾಗಲೂರು ಬಳಿಯ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಏರ್ಪೋರ್ಟ್ ರೋಡ್ ಕ್ಯಾಂಪಸ್ಸಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕ್ರಿಸ್ತು ಜಯಂತಿ ಸಂಶೋಧನ ಹಾಗೂ ವಿದ್ಯಾರ್ಥಿ ಕಲ್ಯಾಣ ಕೇಂದ್ರದ ನಿರ್ದೇಶಕರಾದ ಡಾ. ಮರಿಯಲಾಲ್ ಜೋಸೆಫ್ ಅವರು ಕನ್ನಡ ಧ್ವಜಾರೋಹಣ ಮಾಡಿ ಕನ್ನಡ ಸಂಸ್ಕೃತಿಯ ಅಸ್ಮಿತೆ ಕುರಿತು ಮಾತನಾಡಿದರು.
ಕನ್ನಡವು ಹಲವು ಸಂಸ್ಕೃತಿಗಳ ವೈವಿಧ್ಯತೆಯನ್ನು ತನ್ನೊಳಗೆ ಕಾಪಿಟ್ಟುಕೊಂಡಿರುವ ಹೆಮ್ಮೆಯ ತಾಣವಾಗಿದೆ. ಇಲ್ಲಿನ ಹಂಪಿ, ಬಾದಾಮಿ, ಮೈಸೂರು, ಬೆಂಗಳೂರು ಮೊದಲಾದ ತಾಣಗಳಲ್ಲಿ ಇಂದಿಗೂ ಕಾಣಸಿಗುವ ಐತಿಹಾಸಿಕ ಸ್ಮಾರಕಗಳು. ವೈವಿಧ್ಯತೆಯ ಏಕತೆಗೆ ಸಾಕ್ಷಿಯಾಗಿವೆ. ವಿಶ್ವಮಾನವ ಕವಿ ಕುವೆಂಪು ಅವರು ತಮ್ಮ ನಾಡಗೀತೆಯಲ್ಲಿ ಸಾರುವಂತೆ ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟವಾಗಿ ಕರ್ನಾಟಕ ಇಡೀ ಜಗತ್ತನ್ನು ತನ್ನತ್ತ ಸೆಳೆದಿದೆ ಎಂದರು.
ಕನ್ನಡ ಭಾಷೆಗೂ ತನ್ನದೇ ಆದ ಅಸ್ಮಿತೆ ಇದೆ. ಕನ್ನಡ ಭಾಷೆ, ಲಿಪಿ ಹಾಗೂ ಸಾಹಿತ್ಯದಲ್ಲಿಯೂ ವೈವಿಧ್ಯತೆ ಹಾಗೂ ಐತಿಹಾಸಿಕತೆ ಅಚ್ಚಳಿಯದಂತಿದೆ. ಜಗತ್ತಿನ ಯಾವ ಮೂಲೆಯಿಂದ ಇಲ್ಲಿಗೆ ಬಂದರೂ ಹೆಮ್ಮೆ ಪಡುವ ನೆಲೆ ಕರ್ನಾಟಕವಾಗಿದೆ. ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಗೌರವಿಸುವಂತೆ ಇತರ ಮಾತೃಭಾಷೆಗಳನ್ನು ಗೌರವಿಸುವುದು ಆದ್ಯ ಕರ್ತವ್ಯ ಎಂದು ತಿಳಿಸಿದರು.
ಕಾರ್ಯಕ್ರಮ ಆಯೋಜಕರು ಹಾಗೂ ಕನ್ನಡ ವಿಭಾಗದ ಸಂಯೋಜಕರಾದ ಪ್ರೊ.ಚಂದ್ರಶೇಖರ್ ಎನ್., ಉನ್ನತ ಭಾರತ್ ಅಭಿಯಾನದ ಸಂಯೋಜಕರಾದ ಪ್ರೊ. ಮಂಜುನಾಥ್, ಸಾಮಾಜಿಕ ಚಟುವಟಿಕೆಗಳ ಸಮಿತಿಯ ಸಂಯೋಜಕರಾದ ಡಾ.ವಿನೋದ್ ಬಾಬುರಾವ್ ಮೇಘಶ್ಯಾಮ್, ಕರ್ನಾಟಕ ನಾಗರಿಕ ರಕ್ಷಣಾ ಪಡೆಯ ಸಂಯೋಜಕರಾದ ಡಾ. ಈಶನ್ ಅವರು ಅವರು ಉಪಸ್ಥಿತರಿದ್ದರು.