Homeಸುದ್ದಿಗಳುಮೂಡಲಗಿಯ ₹2.68 ಕೋಟಿ ಕಪ್ಪು ಹಣದ ವಹಿವಾಟಿನ ಪ್ರಕರಣ ; ಐವರನ್ನು ವಶಕ್ಕೆ ಪಡೆದ ಪೊಲೀಸರು

ಮೂಡಲಗಿಯ ₹2.68 ಕೋಟಿ ಕಪ್ಪು ಹಣದ ವಹಿವಾಟಿನ ಪ್ರಕರಣ ; ಐವರನ್ನು ವಶಕ್ಕೆ ಪಡೆದ ಪೊಲೀಸರು

Published on

ಕಪ್ಪು ಹಣದ ಆನ್‌ಲೈನ್ ಪಾವತಿ ಹೆಸರಿನಲ್ಲಿ ಶೇ.30 ಕಮಿಷನ್ ಆಮಿಷ; ಖಾರದ ಪುಡಿ ಎರಚಿ ಹಣ ದೋಚಲು ಸಂಚು?

ಗೋಕಾಕ ಶಾಸಕರ ಗನ್‌ಮ್ಯಾನ್ ಎನ್ನಲಾದ ವ್ಯಕ್ತಿಯ ಹೆಸರು ಪ್ರಕರಣದಲ್ಲಿ ಕೇಳಿಬಂದಿದ್ದು, ಇಬ್ಬರಿಗೆ ಗಾಯ; ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟ ಘಟನೆ

ಮೂಡಲಗಿ: ಕಪ್ಪು ಹಣವನ್ನು ಆನ್‌ಲೈನ್ ಮೂಲಕ ಪಾವತಿಸುವುದಾಗಿ ನಂಬಿಸಿ, ನೇರವಾಗಿ ಹಣ ನೀಡಿದರೆ ಶೇ.30ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡಿ ಮೂಡಲಗಿ ಪಟ್ಟಣದ ಐವರು ವ್ಯಕ್ತಿಗಳಿಂದ ಬರೋಬ್ಬರಿ ₹2.68 ಕೋಟಿ ಸಂಗ್ರಹಿಸಿ, ಬಳಿಕ ಅದನ್ನು ದೋಚಲು ಸಂಚು ರೂಪಿಸಿದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಶುಕ್ರವಾರ ತಡರಾತ್ರಿ ಪಟ್ಟಣದ ಹೊರವಲಯದ ತೋಟದ ಶೆಡ್‌ನಲ್ಲಿ ನಡೆದ ಈ ಘಟನೆಯ ಹಿಂದೆ ದೊಡ್ಡ ಜಾಲವೇ ಇರುವ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣದ ಕಿಂಗ್‌ಪಿನ್ ಎನ್ನಲಾಗುತ್ತಿರುವ ವ್ಯಕ್ತಿ ಗೋಕಾಕ ಶಾಸಕರ ಗನ್‌ಮ್ಯಾನ್ ಚಿದಾನಂದ ಕುರಬೇಟ ಎಂದು ತಿಳಿದುಬಂದಿದೆ. ಈತ ಮೂಡಲಗಿ ಪಟ್ಟಣದ ಕಲ್ಮೇಶ ರಂಗಾಪೂರ, ಚನ್ನಬಸಪ್ಪ ಮೂಡಲಗಿ, ಬೀರಪ್ಪ ವನಶೆನ್ನಿ, ಗುರು ಕುರುಬೇಟ ಹಾಗೂ ಕಲ್ಮೇಶ್ ಗೋಕಾಕ ಎಂಬ ಐವರನ್ನು ಸಂಪರ್ಕಿಸಿ, ಕಪ್ಪು ಹಣವನ್ನು ಆನ್‌ಲೈನ್ ಮೂಲಕ ಪಾವತಿಸುವುದಾಗಿ ಹಾಗೂ ಅದಕ್ಕೆ ಪ್ರತಿಯಾಗಿ ನಗದು ರೂಪದಲ್ಲಿ ಹಣ ನೀಡಿದರೆ ಶೇ.30ರಷ್ಟು ಕಮಿಷನ್ ನೀಡುವುದಾಗಿ ಆಮಿಷವೊಡ್ಡಿದ್ದಾನೆ ಎನ್ನಲಾಗಿದೆ.

ಈ ಆಮಿಷಕ್ಕೆ ಒಳಗಾದ ಐವರು ಹೆಚ್ಚಿನ ಹಣ ಗಳಿಸುವ ಆಸೆಯಿಂದ ಒಟ್ಟು ₹2.68 ಕೋಟಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ. ಹಣದ ವಹಿವಾಟು ನಡೆಸಲು ಸೂಕ್ತ ಸ್ಥಳದ ಹುಡುಕಾಟ ನಡೆಸಿದ ಕಿಂಗ್‌ಪಿನ್, ಕೊನೆಗೆ ಪಟ್ಟಣದ ಹೊರವಲಯದಲ್ಲಿರುವ ಬೀರಪ್ಪ ವನಶೆನ್ನಿ ಅವರ ತೋಟದ ಶೆಡ್‌ನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಅದರಂತೆ ಶುಕ್ರವಾರ ತಡರಾತ್ರಿ ಕಿಂಗ್‌ಪಿನ್ ಸೇರಿದಂತೆ ಮೂಡಲಗಿಯ ಐವರು ವ್ಯಕ್ತಿಗಳು ತೋಟದ ಶೆಡ್‌ನಲ್ಲಿ ಹಣದ ಲೆಕ್ಕಾಚಾರ ನಡೆಸುತ್ತಿದ್ದ ಸಂದರ್ಭದಲ್ಲಿ, ಕಿಂಗ್‌ಪಿನ್‌ನ ಸಹಚರರೆನ್ನಲಾದ ಮಾರುತಿ ರಾಮಪ್ಪ ಅರಬಾವಿ (ಕಲ್ಲೋಳಿ), ಸಂಜು ರಾಮಪ್ಪ ಅರಬಾವಿ (ತುಕ್ಕಾನಟ್ಟಿ), ರಾಜಾರಾಮ ಸುರೇಶ ಮಾಳ್ಯಾಗೋಳ (ಸಂಗನಕೇರಿ) ಸೇರಿದಂತೆ 3-4 ಜನರು ಏಕಾಏಕಿ ಸ್ಥಳಕ್ಕೆ ನುಗ್ಗಿದ್ದಾರೆ. ಹಣ ನೀಡಲು ಬಂದಿದ್ದವರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಲು ಯತ್ನಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ದಾಳಿ ನಡೆಸಲು ಬಂದವರ ಪೈಕಿ ಮಾರುತಿ ರಾಮಪ್ಪ ಅರಬಾವಿ ಹಾಗೂ ಸಂಜು ರಾಮಪ್ಪ ಅರಬಾವಿ ಎಂಬ ಇಬ್ಬರು ವ್ಯಕ್ತಿಗಳು ಸ್ಥಳದಲ್ಲಿದ್ದವರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ನಡೆದ ಹಲ್ಲೆಯಲ್ಲಿ ಇಬ್ಬರೂ ಗಾಯಗೊಂಡಿದ್ದು, ಅವರನ್ನು ಮೂಡಲಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಾಸಕರ ಗನ್‌ಮ್ಯಾನ್ ಹೆಸರು ಕೇಳಿಬಂದಿದ್ದರಿಂದ ಹೆಚ್ಚಿದ ಕುತೂಹಲ!

ಕಪ್ಪು ಹಣದ ವಹಿವಾಟಿನ ಹೆಸರಿನಲ್ಲಿ ಶೇ.30ರಷ್ಟು ಕಮಿಷನ್ ನೀಡುವ ಆಮಿಷ, ಕೋಟ್ಯಂತರ ರೂಪಾಯಿ ನಗದು ಸಂಗ್ರಹ, ಬಳಿಕ ಖಾರದ ಪುಡಿ ಎರಚಿ ಹಣ ದೋಚಲು ನಡೆದ ಯತ್ನ ಹಾಗೂ ಪ್ರಕರಣದ ಕಿಂಗ್‌ಪಿನ್ ಎನ್ನಲಾದ ವ್ಯಕ್ತಿಯು ಗೋಕಾಕ ಶಾಸಕರ ಗನ್‌ಮ್ಯಾನ್ ಎಂದು ಹೇಳಲಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಶಾಸಕರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯ ಹೆಸರೇ ಈ ಪ್ರಕರಣದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಇಂತಹ ಹಣದ ವಹಿವಾಟುಗಳು ಈ ಹಿಂದೆಯೂ ನಡೆದಿವೆಯೇ? ಇದರ ಹಿಂದೆ ಇನ್ನೂ ಯಾರಾದರೂ ಪ್ರಭಾವಿಗಳ ಕೈವಾಡವಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಪ್ರಕರಣದ ಕುರಿತು ಪೊಲೀಸ್ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಹಣದ ಮೂಲ, ವಹಿವಾಟಿನ ಉದ್ದೇಶ, ಆರೋಪಿಗಳ ನಡುವಿನ ಸಂಪರ್ಕ ಹಾಗೂ ಹಣ ದೋಚುವ ಸಂಚಿನ ಹಿಂದಿರುವವರ ಕುರಿತು ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ತಿಳಿದುಬರಲಿದೆ.

Latest articles

More like this