ಮೂಡಲಗಿ : ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸರಕಾರ ಕೊಡುತ್ತಿರುವ ಅನೇಕ ಶೈಕ್ಷಣಿಕ ಸೌಲಭ್ಯಗಳನ್ನು ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಒಳ್ಳೆಯ ಭವಿಷ್ಯ ಕಟ್ಟಿಕೊಳ್ಳುವಲ್ಲಿ ಪಾಲಕರೂ ಕೂಡ ಸಹಕರಿಸಬೇಕು ಎಂದು ತುಕ್ಕಾನಟ್ಟಿಯ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಪ್ರೌಢಶಾಲೆಯ ಮುಖ್ಯಗುರು ಎ.ವಿ ಗಿರೆಣ್ಣವರ ಹೇಳಿದರು.
ಅವರು ತಾಲ್ಲೂಕಿನ ತುಕ್ಕಾನಟ್ಟಿ ಸರಕಾರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಸಂದರ್ಭದಲ್ಲಿ ಪಾಲಕರನ್ನು ಕುರಿತು ಮಾತನಾಡಿ, ಪ್ರತಿ ವರ್ಷ ಶಿಕ್ಷಣ ಇಲಾಖೆ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಅನೇಕ ಯೋಜನೆಗಳನ್ನು, ಕಲಿಸೋಕರಣಗಳನ್ನು, ಪೌಷ್ಟಿಕ ಆಹಾರವನ್ನು ನೀಡಿ ಮಕ್ಕಳು ಆರೋಗ್ಯದೊಂದಿಗೆ ಉತ್ತಮ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುತ್ತದೆ. ಅದರಲ್ಲೂ ಈ ಶೈಕ್ಷಣಿಕ ವರ್ಷದಿಂದ ಹಲವಾರು ಶಾಲೆಗಳಲ್ಲಿ ದ್ವಿಭಾಷಾ ಯೋಜನೆ ಜಾರಿಗೆ ತಂದು ವಿದ್ಯಾರ್ಥಿಗಳಿಗೆ ಎಲ್.ಕೆ.ಜಿ.ಯಿಂದಲೇ ಕನ್ನಡ ಹಾಗೂ ಆಂಗ್ಲ ಮಾದ್ಯಗಳಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಅದರಲ್ಲೂ ಈ ಸಲ ತುಕ್ಕಾನಟ್ಟಿಯ ಶಾಲೆಯಲ್ಲಿ ಎಲ್.ಕೆ.ಜಿ. ತರಗತಿಯನ್ನು ಹಾಗೂ 5 ತರಗತಿಯವರೆಗೆ ದ್ವಿ ಭಾಷಾ ಮಾದ್ಯಮ ಜಾರಿಗೆ ತರಲಾಗಿದೆ ಹಾಗೂ ಕಳೆದ ವರ್ಷದಿಂದ ಅರಬಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಿ.ಎಸ್.ಆರ್ ಅನುದಾನದಿಂದ ಪ್ರೌಢಶಾಲೆ ಕೂಡ ಪ್ರಾರಂಭವಾಗಿದೆ.
ಅದಕ್ಕಾಗಿ ಗ್ರಾಮಸ್ಥರು ಇಲ್ಲಿ ತಮ್ಮ ಮಕ್ಕಳಿಗೆ ಹಲವಾರು ಸೌಲಭ್ಯಗಳೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬಹುದಾಗಿದೆ ಎಂದರು
ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಸುನಂದಾ ಭಜಂತ್ರಿ ಮಾತನಾಡಿ ಸರಕಾರಿ ಶಾಲೆಯಲ್ಲಿ ಪ್ರಾರಂಭದಿಂದಲೇ ಉಚಿತ ಸಮವಸ್ತ್ರ ಪಠ್ಯ ಪುಸ್ತಕ ಅಕ್ಷರದಾಸೋಹ ಯೋಜನೆ ಪ್ರಾರಂಭಿಸಿರುವದರಿಂದ ವಿದ್ಯಾರ್ಥಿಗಳು ಇದರ ಲಾಭ ಪಡೆದು ಎಲ್ಲ ಮಕ್ಕಳು ಉತ್ತಮ
ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದರು.
ರೈತ ಮುಖಂಡರಾದ ಸತ್ತೆಪ್ಪ ಮಲ್ಲಾಪೂರ ಗ್ರಾಮದಲ್ಲಿಯ ಎಲ್ಲ ಮಕ್ಕಳು ಶಿಕ್ಷಣ ಪಡೆಯಬೇಕು ಎಲ್ಲರೂ ಸಾಕ್ಷರರಾದಾಗ ಗ್ರಾಮದ ದೇಶದ ಅಭಿವೃದ್ಧಿ ಸಾದ್ಯ ಎಂದರು. ಅಲ್ಲದೇ ವಿದ್ಯೆಯ ಜೊತೆಗೆ ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ ನಡೆ ನುಡಿ ಕಲಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು ತುಕ್ಕಾನಟ್ಟಿಯಲ್ಲಿ ಪ್ರೌಢಶಾಲೆ ಮಂಜೂರಾಗಿದ್ದು, ಕಿರಿಯ ಮಹಾವಿದ್ಯಾಲಯದ ಅವಶ್ಯಕತೆ ತುಂಬಾ ಇದೆ. ಇದನ್ನೂ ಕೂಡ ಜನಪ್ರತಿನಿಧಿಗಳು ನೆರವೇರಿಸಿಕೊಡಬೇಕು ಎಂದು ಹೇಳಿದರು.
ಶಾಲಾ ಪ್ರಾರಂಭ ದಿನದಂದೇ ಶಾಲೆಯಲ್ಲಿ ಮಕ್ಕಳ ಕಲರವ ಹಾಜರಾತಿ ಹೆಚ್ಚಾಗಿತ್ತು. ಶಾಲಾ ಮುಖ್ಯದ್ವಾರಕ್ಕೆ ಹಾಗೂ ವಿದ್ಯಾದೇವತೆಗೆ ನಮಸ್ಕರಿಸಿ ಒಳಗೆ ಬಂದ ಮಕ್ಕಳನ್ನು ಗ್ರಾಮಸ್ಥರು ಶಿಕ್ಷಕರು ಪುಷ್ಪ ಹಾಗೂ ಸಿಹಿ ನೀಡಿ ಸ್ವಾಗತಿಸಿದರು. ಮಕ್ಕಳ ಮೇಲೆ ಪುಷ್ಪವೃಷ್ಟಿ ಮಾಡಿದರು. ಈ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಈ ಶಾಲೆಯಲ್ಲಿ ಹೊಸ ತರಗತಿಗೆ ಸುಮಾರು 100 ಮಕ್ಕಳು ದಾಖಲಾದರು. ವಿದ್ಯಾರ್ಥಿಗಳಿಗೆ ಸಿಹಿ ಭೋಜನದೊಂದಿಗೆ ಉಚಿತ ಸಮವಸ್ತ್ರ ಪಠ್ಯ ಪುಸ್ತಕ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾ. ಪಂ ಮಾಜಿ ಅಧ್ಯಕ್ಷೆ ಗಾಯತ್ರಿ ಬಾಗೇವಾಡಿ, ಮಾಜಿ ಉಪಾದ್ಯಕ್ಷ ಸುನಂದಾ ಭಜಂತ್ರಿ, ರೈತ ಮುಖಂಡರಾದ ಸತ್ತೆಪ್ಪಾ ಮಲ್ಲಾಪೂರ, ಭರಮಪ್ಪ ಹರಿಜನ, ಶಾನೂರ ಮರ್ದಿ, ಆನಂದ ಉಪ್ಪಾರ, ಕರವೇ ಅಧ್ಯಕ್ಷ ಬಸವರಾಜ ಹುಲಕುಂದ, ಸಿ.ಆರ್.ಪಿ ಬಸವರಾಜ ಅಂಗಡಿ ಹಾಗೂ ಶಿಕ್ಷಕರಾದ ಬಸವರಾಜ ನಾಯಿಕ, ಸೋಮಶೇಖರ ವಾಯ್. ಆರ್. ಮಹಾದೇವ ಗೋಮಾಡಿ, ವಿಮಲಾಕ್ಷಿ ತೋರಗಲ, ಸುಜಾತಾ ಕೋಳಿ ಪ್ರೌಢ ವಿಭಾಗದ ವಾಯ್.ಬಿ ಭಾವಿಮನಿ, ಸಾವಿತ್ರಿ ಗಂಟೆ, ಮುಂತಾದವರು ಉಪಸ್ಥಿತರಿದ್ದರು.