ಹುನಗುಂದ: ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಅದ್ದೂರಿಯಾಗಿ ನಡೆಯಿತು.
ಈ ವರ್ಷದಿಂದ ನೂತನವಾಗಿ ಪ್ರಾರಂಭವಾಗುತ್ತಿರುವ ಎಲ್ ಕೆ ಜಿ, ಯು ಕೆ ಜಿ ಮತ್ತು ಒಂದನೇ ತರಗತಿಗೆ ದಾಖಲಾಗುವ ಮಕ್ಕಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ಕರೆದುಕೊಂಡು ಬಂದು ಶಾಲಾ ಮುಖ್ಯದ್ವಾರದಲ್ಲಿ ಸುಮಂಗಲೆಯರಿಂದ ಆರತಿ ಬೆಳಗಿಸಿ, ಸಿಹಿ ತಿನಿಸಿ, ಪುಷ್ಪವೃಷ್ಠಿಗೈದು ಸ್ವಾಗತಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ, ಪಠ್ಯಪುಸ್ತಕ ವಿತರಣೆ ಮತ್ತು ಈ ವರ್ಷದ ಮೊದಲ ಪಾಲಕ-ಶಿಕ್ಷಕರ ಸಭೆ ನಡೆಯಿತು.
ಶಿಕ್ಷಕ ಅಶೋಕ ಬಳ್ಳಾ ಮಾತನಾಡಿ, ಈ ವರ್ಷದಿಂದ ರಾಜ್ಯದ ಸರಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದಲ್ಲಿ ಶಿಕ್ಷಣ ಸಿಗಲಿದ್ದು, ಪಾಲಕರು ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಯ ವ್ಯಾಮೋಹ ಬಿಟ್ಟು ಸರಕಾರ ನೀಡುವ ಉಚಿತ ಮತ್ತು ಗುಣಮಟ್ಟದ ಶಿಕ್ಷಣದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮುಖ್ಯಗುರು ಪ್ರಭು ಮಾಲಗಿತ್ತಿ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಪಾಲಕ ಪೋಷಕರ ಸಹಭಾಗಿತ್ವ ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಪೋಷಕ -ಶಿಕ್ಷಕರ ಸಭೆ ಆಯೋಜಿಸುತ್ತಿದ್ದು, ಪ್ರತಿ ಮಗುವಿನ ಕಲಿಕಾ ಮಟ್ಟ ಮತ್ತು ಪ್ರಗತಿಗೆ ಕೈಗೊಳ್ಳಬೇಕಾದ ಚಟುವಟಿಕೆಗಳನ್ನು ಚರ್ಚಿಸಿ ಜಾರಿಗೆ ತರುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಸದಸ್ಯೆ ಬಸಮ್ಮ ಪವಾಡಿಗೌಡ್ರ, ಬಸವಂತಪ್ಪ ಕೊಣ್ಣೂರ, ವೀರಭದ್ರಪ್ಪ ಕೊಳ್ಳೊಳ್ಳಿ, ಎಸ್ಡಿಎಂಸಿ ಅಧ್ಯಕ್ಷ ರಾಮಣ್ಣ ಮುಳ್ಳೂರ, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಅಳ್ಳೊಳ್ಳಿ, ಸದಸ್ಯರಾದ ಸಂಗಪ್ಪ ಈರಣ್ಣವರ, ಯಲ್ಲಪ್ಪ ಕಡಿವಾಲ, ಗೌರಮ್ಮ ಹಿರೇಮಠ, ಮಲ್ಲಿಕಸಾಬ ನದಾಫ, ರೇಣುಕಾ ಚಲವಾದಿ, ಫಕೀರವ್ವ ಸಂಕಣ್ಣವರ, ಬಸಪ್ಪ ಬಾರಕೇರ, ಲಕ್ಷ್ಮಣ್ಣ ಈರಣ್ಣವರ, ಶಿಕ್ಷಕರಾದ ಮಹಾಂತೇಶ ವಂದಾಲಿ, ಸುಭಾಸ ಕಣಗಿ, ಬಸವರಾಜ ಬಗಲಿ ಉಪಸ್ಥಿತರಿದ್ದರು.