ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಕ್ರಿಸ್ತು ಜಯಂತಿ ಸೇವಾ ಕೇಂದ್ರದ ನಿರ್ದೇಶಕರಾದ ಫಾ. ಅನೂಪ್ ಕುರಿಯನ್ ಅವರು ಕನ್ನಡ ಧ್ವಜಾರೋಹಣ ಮಾಡಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಮಾತನಾಡಿದರು.
ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದಿರುವ ಭಾರತೀಯ ಭಾಷೆಗಳಲ್ಲಿ ಕನ್ನಡವು ಮುಖ್ಯವಾಗಿದೆ. ಕನ್ನಡ ಸಂಸ್ಕೃತಿ ವೈವಿಧ್ಯತೆಯಿಂದ ಕೂಡಿದ್ದು ಜಗತ್ತಿನ ಸರ್ವರನ್ನೂ ಸೆಳೆಯುತ್ತಿದೆ. ಕರ್ನಾಟಕದಲ್ಲಿ ಬೇರೆ ಬೇರೆ ದೇಶದವರು ಹಾಗೂ ಭಾಷೆಯವರು ಸಹಬಾಳ್ವೆಯಿಂದ ಬಾಳುತ್ತಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆಯೂ ಅಪಾರವಾದುದು. ಮಂಗಳೂರಿನಲ್ಲಿ ದುಡಿದ ಹರ್ಮನ್ ಮೊಗ್ಲಿಂಗ್ ಅವರಿಂದ ಹಿಡಿದು ಇಂದಿನ ಫಾ.ಪ್ರಶಾಂತ್ ಮಾಡ್ತಾ ಅವರ ವರೆಗೂ ಕನ್ನಡ ನುಡಿ ಸೇವೆಯೂ ಶ್ಲಾಘನೀಯ. ಕನ್ನಡ ನಾಡು ಮತ್ತು ನುಡಿ ಸೇವೆಯಲ್ಲಿ ಸದಾ ಸಕ್ರಿಯರಾಗಿರುವ ಸರ್ವರನ್ನೂ ನಾವು ಸ್ಮರಿಸಬೇಕು ಎಂದರು.
ಕನ್ನಡ ರಾಜ್ಯೋತ್ಸವ ದಿನದ ಮಹತ್ವ ಕುರಿತು ಕನ್ನಡ ಪ್ರಾಧ್ಯಾಪಕರಾದ ಡಾ.ರವಿಶಂಕರ್ ಎ.ಕೆ. ಅವರು ಮಾತನಾಡಿದರು. ಕನ್ನಡ ಪ್ರಾಧ್ಯಾಪಕರಾದ ಡಾ. ಸೈಯದ್ ಮುಯಿನ್ ಅವರು ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ. ಕಿರಣಕುಮಾರ್ ಎಚ್.ಜಿ ಅವರು ಉಪಸ್ಥಿತರಿದ್ದರು. ಕ್ರಿಸ್ತು ಜಯಂತಿ ಸೇವಾ ವಿಸ್ತರಣಾ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ವೇದಿಕೆಯ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.