ಘಟಪ್ರಭಾ-ಹಿಡ್ಕಲ್ ಜಲಾಶಯದಿಂದ ಘಟಪ್ರಭಾ ಎಡದಂಡೆ ಕಾಲುವೆಗೆ ನಾಳೆ ದಿ. 21 ರಿಂದ 10 ದಿನಗಳ ಕಾಲ ನೀರನ್ನು ಹರಿಸಲು ಉದ್ದೇಶಿಸಲಾಗಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ರವಿವಾರದಂದು ಘಟಪ್ರಭಾ ಎಡದಂಡೆ ಕಾಲುವೆಯ ಸ್ಥಳಕ್ಕೆ ಭೇಟಿ ನೀಡಿ ಸೇತುವೆಯ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ವಿಶೇಷ ಪ್ರಯತ್ನದಿಂದ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.
ಮಂಗಳವಾರದಿಂದ ಬೆಳಿಗ್ಗೆ 6.00 ರಿಂದ ಒಟ್ಟು ಹತ್ತು ದಿನಗಳವರೆಗೆ 2400 ಕ್ಯೂಸೆಕ್ಸ್ ನೀರನ್ನು ಬಿಡಿಸಲಾಗುತ್ತಿದೆ. ರೈತರು ಮತ್ತು ಮುಖಂಡರು ಈ ಬಗ್ಗೆ ತಮ್ಮನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಸೇತುವೆಯ ಕಾಮಗಾರಿಯು ಅತೀ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡಿದೆ. ಕಾಲುವೆಯ ಕಾಮಗಾರಿಯನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಕೇಶ್ವರ- ಸಂಗಮ ರಾಜ್ಯ ಹೆದ್ದಾರಿಯ ಘಟಪ್ರಭಾ ಮತ್ತು ಅರಭಾವಿ ಮಧ್ಯದಲ್ಲಿರುವ ಘಟಪ್ರಭಾ ಎಡದಂಡೆ ಮುಖ್ಯ ಕಾಲುವೆಯಲ್ಲಿ ಇತ್ತೀಚೆಗೆ ಸೇತುವೆಯು ಶಿಥಿಲಗೊಂಡಿದ್ದರಿಂದ ತುರ್ತಾಗಿ ಕಾಲುವೆಗೆ ನೀರು ಹರಿಸುವುದು ವಿಳಂಬವಾಗಿದೆ. ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಪರ್ಕವು ಕಡಿತಗೊಂಡಿದ್ದರಿಂದ ಸಚಿವ ಸತೀಶ ಜಾರಕಿಹೊಳಿಯವರ ಪ್ರಯತ್ನದಿಂದ ರೂಪಾಯಿ 5 ಕೋಟಿ ವೆಚ್ಚದಲ್ಲಿ ಹೊಸ ಸೇತುವೆಯ ಕಾಮಗಾರಿಯು ಮುಗಿದಿದೆ. ತ್ವರಿತ ಗತಿಯಲ್ಲಿ ಸೇತುವೆ ಕಾಮಗಾರಿಯನ್ನು ಕೈಗೊಂಡಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರ ಜೆ.ಎನ್.ಶೆಟ್ಟಿಯವರನ್ನು ಅಭಿನಂದಿಸಿದರು.
ಬರುವ ದಿ. 22 ರಿಂದ ಸೇತುವೆಯು ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ. ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಹೇಳಿದರು.
ಘಟಪ್ರಭಾ ಯೋಮನೀಬಸ ಸಂಘದ ಅಧ್ಯಕ್ಷ ಅಶೋಕ ಖಂಡ್ರಟ್ಟಿ, ಪ್ರಭಾ ಶುಗರ್ಸ್ ನಿರ್ದೇಶಕ ಲಕ್ಷ್ಮಣ ಗಣಪ್ಪಗೋಳ, ಶಿವು ಕುಡ್ಡೆಮ್ಮಿ, ನ್ಯಾಯವಾದಿ ಗಂಗಪ್ಪ ಭಟ್ಟಿ, ಲೋಕೋಪಯೋಗಿ ಇಲಾಖೆಯ ಎಇಇ ರಾಮಚಂದ್ರ ಅವತಾಡೆ, ಸುಧಾಕರ ಶೆಟ್ಟಿ, ಬಿ.ಬಿ.ದಾಸನವರ, ಎಡದಂಡೆ ಕಾಲುವೆಯ ರೈತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.