ಬಯಲು ಬಳಲಿದೆ
ಜೀವನವೇ ದೊಡ್ಡ ಬಯಲು ನಾಟಕ,
ಅಲ್ಲಿಹವು ಹಲವು ಭಾವದ ನೂರೆಂಟು ಮಹಲುಗಳು.
ವಿಚಾರಕ್ಕೆ ಒಂದೆನ್ನುವ ಒಲವು,
ಆಚಾರದ ವಿಷಯದಲ್ಲಿ ಎಲ್ಲವೂ ಅದಲುಬದಲು.
ಒಂದೇ ಗರ್ಭದ ಬೇರುಗಳಲಿ ತಾರತಮ್ಯದ ನೀತಿಯೇ ವಿಪರ್ಯಾಸ…!
ನೆಲ ಮುಗಿಲಿನ ವ್ಯತ್ಯಾಸ
ಸಂಸ್ಕೃತಿಯ ಅಡಿಯಲ್ಲಿ ತಳಪಾಯವಿಲ್ಲದ ನುಡಿಯ ನಾಲಿಗೆ,
ಸಂಸ್ಕಾರ ಮಾಯವಾಯಿತು ಆಧುನಿಕತೆಯ ಮೋಡಿಗೆ.
ದುರಾಸೆಯ ಜಿಹ್ವೆಗೆ ಹಾಕುವವರಿಲ್ಲ ಕಡಿವಾಣ,
ಬರೀ ಮೋಹ, ಮೋಸದ ಜಾಲ ಹೆಣೆಯುವ ಪರಿಗೆ,
ಕುಸಿಯಿತೇ ಬದುಕಿನ ಬಯಲು…??
ಏನೇ ಸಾಧಿಸಿದರೂ ಮಾನವೀಯ ಮೌಲ್ಯಗಳ
ಅರಿಯದ ಜೀವಜಗಕೆ ನೆಮ್ಮದಿ ಉಂಟೆ…??
ಪ್ರಕೃತಿ ವಿಕೋಪಕ್ಕೆ ಕಾರಣ ತಾನಾದರೂ,
ಕಲಿಯದ ಬುದ್ಧಿಯೇ ಮನುಜನ ದುರಂತವಲ್ಲವೇ…?
ಸರ್ವಾಧಿಕಾರದ ದರ್ಪದಲಿ ಬೂದಿಯಾದ ಭಸ್ಮಾಸುರ,
ಆತನಿಗಿಂತಲೂ ಕನಿಷ್ಠ ಈ ದುರ್ಬುದ್ಧಿಯ ಮನುಜ.
ವಿನಾಶದ ಅಂಚಿನಲ್ಲಿ ನಿಂತು ನೋಡಿದಾಗ,
‘ನಾನೇಕೆ ಹೀಗೆ?’ ಎಂಬ ಜ್ಞಾನೋದಯವಾದ ಗಳಿಗೆಯಲ್ಲಿ…
ಎಲ್ಲವೂ ಬಯಲಾದಾಗ,
ಬದಲಾದಾಗ,
ಪಶ್ಚಾತ್ತಾಪದಲಿ ಬಳಲಿದ ಆರ್ತ ದನಿಗೆ,
ಕಿವುಡಾಯಿತು ಈ ಬಯಲು…!
________________________
ಶ್ರೀಮತಿ ಜಯಶ್ರೀ ನಿಜಗುಣಿ ಬೇವೂರ ಹುಬ್ಬಳ್ಳಿ