ಮನೆಮನೆಗೆ ಮನಮನಕ್ಕೆ ಅಂಬೇಡ್ಕರರು ಅಭಿಯಾನದಲ್ಲಿ ಅಭಿಮತ
ಮೂಡಲಗಿ : ಭಾರತದ ಸಮನ್ವಯತೆಯಲ್ಲಿ ಅಂಬೇಡ್ಕರರ ಸೇವೆ ಅವಿಸ್ಮರಣೀಯವಾಗಿದ್ದು ಸಂವಿಧಾನ ಶಿಲ್ಪಿಯಾಗಿ ಭಾರತದ ಪ್ರತಿಯೊಬ್ಬ ನಾಗರಿಕನ ಜೀವನಕ್ಕೆ ಸ್ಪೂರ್ತಿ ಮತ್ತು ಆಶಾಕಿರಣದ ಚಿಂತನೆಯನ್ನು ಅಭಿವ್ಯಕ್ತ ಪಡಿಸಿದ ಮಹಾ ಮಾನವತಾವಾದಿಯಾಗಿ ಡಾ. ಬಿ. ಆರ್. ಅಂಬೇಡ್ಕರರು ಗುರ್ತಿಸಲ್ಪಟ್ಟಿದ್ದು ಮಾನವಕುಲದ ಕಲ್ಯಾಣಕ್ಕಾಗಿ ಇಡೀ ಅಖಂಡ ಭಾರತಕ್ಕೆ ಉತ್ತಮ ಸಂವಿಧಾನ ರಚಿಸಿಕೊಟ್ಟರುವಂತಹ ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಆರ್.ಡಿ.ಎಸ್. ಪದವಿ ಕಾಲೇಜಿನ ಉಪನ್ಯಾಸಕ ಸಂಜೀವ ಮಂಟೂರ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ರಾಣಿಚೆನ್ನಮ್ಮಾ ವಿಶ್ವವಿದ್ಯಾಲಯ ಬೆಳಗಾವಿ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮನೆಮನೆಗೆ ಮನಮನಕ್ಕೆ ಅಂಬೇಡ್ಕರರು ಎಂಬ ಅಭಿಯಾನದಲ್ಲಿ ಅವರು ಮಾತನಾಡಿ, ಅಂಬೇಡ್ಕರರು ಚಿಕ್ಕವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ಜೀವನದಲ್ಲಿ ಸಾಮಾಜಿಕ ತೊಂದರೆಯನ್ನು ಅನುಭವಿಸಿ ಸಾಮಾಜಿಕ ಐಕ್ಯತೆಯನ್ನು ಮನಗಂಡು ಭಾರತದಲ್ಲಿ ಇರುವ ಸರ್ವಜನಾಂಗಕ್ಕೂ ಆಶಾದಾಯಕ ಸಂವಿದಾನವನ್ನು ರಚಿಸಿದರು ಅಂತಹವರ ವ್ಯಕ್ತಿತ್ವವನ್ನು ಪ್ರತಿಯೊಬ್ಬ ವ್ಯಕ್ತಿ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದರು.
ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ಅಂಬೇಡ್ಕರರೆಂಬ ಮಹಾತ್ಮರ ಚಿಂತನೆ ವಿಚಾರಧಾರೆ ವ್ಯಕ್ತಿತ್ವ ವಿದ್ಯಾರ್ಥಿಗಳಲ್ಲಿ ಬೆಳಸುವಲ್ಲಿ ಇಂತಹ ಅಭಿಯಾನಗಳು ಮಹತ್ವದ ಪಾತ್ರ ವಹಿಸುತ್ತಿದ್ದು ಪ್ರತಿಯೊಬ್ಬ ಭಾರತೀಯರು ಅಂಬೇಡ್ಕರರ ಚಿಂತನೆ ಬೆಳಸಿಕೊಳ್ಳುವುದರ ಜೊತೆಗೆ ಅವರು ಹಾಕಿಕೊಟ್ಟ ಭಾರತೀಯ ಸಂವಿಧಾನದ ವಿಚಾರಗಳನ್ನು ಗೌರವಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಸತ್ತಿಗೇರಿ ಸಂಗಮೇಶ ಕುಂಬಾರ ಎನ್.ಎಸ್.ಎಸ್. ಘಟಕಾಧಿಕಾರಿ ರಾಜು ಪತ್ತಾರ ರೆಡ್ ಕ್ರಾಸ ಘಟಕಾಧಿಕಾರಿ ಮುತ್ತಣ್ಣ ಒಡೆಯರ ಇನ್ನುಳಿದ ಉಪನ್ಯಾಸಕರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು ವಿದ್ಯಾರ್ಥಿಗಳು ಊರಿನ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರರನ್ನು ಕುರಿತು ಘೋಷ್ಯ ವಾಕ್ಯಗಳೊಂದಿಗೆ ಸಂಚರಿಸಿ ಕಾಲೇಜಿನಲ್ಲಿ ಆಶುಭಾಷಣ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲೆ ಸ್ಪರ್ಧೆ ಗಳಲ್ಲಿ ಭಾಗವಹಿಸಿ ಅಂಬೇಡ್ಕರರ ವಿಚಾರಧಾರೆಗಳನ್ನು ಅಭಿವ್ಯಕ್ತಪಡಿಸಿದರು.