Homeಸುದ್ದಿಗಳುಗೋಮಾಳ ಜಾಗೆಯಲ್ಲಿ ಗರಸು ತೆಗೆಯುವ ವಿಚಾರಕ್ಕೆ ತಹಶೀಲ್ದಾರ ಮತ್ತು ಗ್ರಾಮಸ್ಥರ ಮಧ್ಯೆ ವಾಕ್ಸಮರ

ಗೋಮಾಳ ಜಾಗೆಯಲ್ಲಿ ಗರಸು ತೆಗೆಯುವ ವಿಚಾರಕ್ಕೆ ತಹಶೀಲ್ದಾರ ಮತ್ತು ಗ್ರಾಮಸ್ಥರ ಮಧ್ಯೆ ವಾಕ್ಸಮರ

Published on

ಸರ್ಕಾರದ ಆದೇಶದಂತೆ ಗರಸು ತಗೆಯಲು ಬಿಡಿ : ತಹಶೀಲ್ದಾರ ಮಾತಿಗೆ ಗ್ರಾಮಸ್ಥರ ವಿರೋಧ

ಹುನಗುಂದ: ಗುಡ್ಡದ ಪ್ರದೇಶದಲ್ಲಿರುವ ಗೋಮಾಳದ ಜಾಗೆಯಲ್ಲಿ ಗರಸು ಎತ್ತುವ ವಿಚಾರಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ ಮತ್ತು ಗ್ರಾಮಸ್ಥರ ಮಧ್ಯೆ ವಾಕ್ಸಮರವೇ ನಡೆದು ತಹಶೀಲ್ದಾರ ಮಾತಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ಶುಕ್ರವಾರ ತಾಲೂಕಿನ ಹೊನ್ನರಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹೊನ್ನರಹಳ್ಳಿ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಗ್ರಾಮಸ್ಥರೊಂದಿಗೆ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರು ಸಭೆ ನಡೆಸಿ ಮಾತನಾಡಿ, ಗ್ರಾಮದ ಗುಡ್ಡದ ಗೋಮಾಳ ಜಾಗೆ ಸರ್ಕಾರಕ್ಕೆ ಸೇರಿದ್ದು, ಸರ್ಕಾರದ ಆದೇಶದಂತೆ ಕಾಮಗಾರಿ ಕೈಗೊಳ್ಳಲು ಗೋಮಾಳದಲ್ಲಿನ ಗರಸು ತಗೆಯಲು ಅವಕಾಶ ಮಾಡಿಕೊಡಿ ಅಡ್ಡಿಪಡಿಸಬೇಡಿ ಹೊನ್ನರಹಳ್ಳಿ,ಬೇವಿನಮಟ್ಟಿ, ಚಿಕ್ಕಯರನಕೇರಿ ಹಾಗೂ ಹಿರೇಯರನಕೇರಿ ಗ್ರಾಮದ ವ್ತಾಪ್ತಿಯಲ್ಲಿ ಒಟ್ಟು ೪೮ ಎಕರೆ ಪ್ರದೇಶಲ್ಲಿ ಗೋಮಾಳವಿದೆ. ಗ್ರಾಮಸ್ಥರ ಮನವಿಯಂತೆ ಗೋಮಾಳದಲ್ಲಿನ ೬ ಎಕರೆ ಪ್ರದೇಶದಲ್ಲಿ ಮಾತ್ರ ಗರಸು ತಗೆಯಲು ಸರ್ಕಾರ ಆದೇಶಿಸಿದ್ದು, ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಸರ್ಕಾರದ ಆದೇಶದಂತೆ ಗರಸು ತಗೆಯಲು ಅವಕಾಶ ಮಾಡಿಕೊಡಿ ಎನ್ನುತ್ತಿದ್ದಂತೆ ತಹಶೀಲ್ದಾರ್ ಸೇರಿದಂತೆ ಇತರೆ ಅಧಿಕಾರಿಗಳ ಮಾತಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಗೋಮಾಳ ಜಾನುವಾರುಗಳನ್ನು ಮೇಯಿಸಲು ಅನುಕೂಲವಾಗಿದೆ. ಇಲ್ಲಿನ ಗಿಡ ಮರಗಳು ಪ್ರಾಣಿ, ಪಕ್ಷಿಗಳಿಗೆ ಆಸರೆಯಾಗಿವೆ. ಗೋಮಾಳದಲ್ಲಿ ಗರಸು ತಗೆಯುವುದರಿಂದ ನಮ್ಮಲ್ಲ ಗ್ರಾಮಸ್ಥರಿಗೆ ತೊಂದರೆ ಆಗುತ್ತದೆ. ಹೀಗಾಗಿ ಯಾವದೇ ಕಾರಣಕ್ಕೂ ನಾವು ಗರಸು ತಗೆಯಲು ಅವಕಾಶ ಕೊಡುವುದಿಲ್ಲ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಪಿಎಸ್ಐ ಎಸ್.ಜಿ.ಆಲದಕಟ್ಟಿ, ಮುಖಂಡರಾದ ಶಿವಪ್ರಸಾದ ಗದ್ದಿ, ಮಹಾಂತೇಶ ಅಮತಿಗೌಡರ, ಮಹಾಂತೇಶ ಈರಣ್ಣವರ, ರುದ್ರಗೌಡ ಅಮತಿಗೌಡರ, ಬಸವಂತಪ್ಪ ಕೊಣ್ಣೂರ, ಮಹಾಂತೇಶ ಕೊಳ್ಳೊಳ್ಳಿ, ಗುರುಬಸಯ್ಯ ಹಿರೇಮಠ, ಸಂಗಪ್ಪ ಮೂಲಿಮನಿ ಬೊಮ್ಮೇಶ ಹುಗ್ಗಿ, ವಾಲಪ್ಪ ನಾಯಕ, ಬಸವ್ವ ಹಾವರಗಿ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಇದ್ದರು.

ಸರ್ಕಾರಿ ಜಾಗೆಗೆ ಗ್ರಾಮಸ್ಥರ ವಿರೋಧ ಸಲ್ಲದು

ಗೋಮಾಳ ಜಾಗೆ ಸರ್ಕಾರಕ್ಕೆ ಸೇರಿದ್ದು.ಇದಕ್ಕೆ ಗ್ರಾಮಸ್ಥರ ವಿರೋಧ ಮಾಡುವ ಪ್ರಶ್ನೆಯೇ ಬರೋದಿಲ್ಲ. ಈಗಾಗಲೇ ಆ ಗೋಮಾಳ ಜಾಗದಲ್ಲಿ ಗರಸು ಎತ್ತಲಿಕ್ಕೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದು.ಆದೇಶದಂತೆ ಗರಸು ತೆಗೆಯಲಾಗುವುದು.

– ಪ್ರದೀಪಕುಮಾರ ಹಿರೇಮಠ ತಹಶೀಲ್ದಾರ,  ಹುನಗುಂದ.

Latest articles

More like this