Homeಅಭಿಪ್ರಾಯಸಚಿವ ಬಸವರಾಜ ರಾಯರೆಡ್ಡಿಯವರಿಗೊಂದು ಕಿವಿ ಮಾತು

ಸಚಿವ ಬಸವರಾಜ ರಾಯರೆಡ್ಡಿಯವರಿಗೊಂದು ಕಿವಿ ಮಾತು

Published on

ಮಾನ್ಯರೇ

ತಾವು ಇತ್ತೀಚೆಗೆ ಕುಕುನೂರಿನಲ್ಲಿ ಮೊಹಮ್ಮದ್ ಪೈಗಂಬರ ಜಯಂತಿಯಲ್ಲಿ.ಮಾತನಾಡುತ್ತಾ ಇಸ್ಲಾಂ ಧರ್ಮ ಸರ್ವ ಶ್ರೇಷ್ಠ ಧರ್ಮ ನಾನು ಹಜ್ ಯಾತ್ರೆಯಲ್ಲಿ ಪಾಲ್ಗೊಳ್ಳ ಬೇಕು ಎಂದಿರುವೆ ಎನ್ನುವ ನಿಮ್ಮ ಬಾಲಿಶತನದ ಮಾತುಗಳು ನಮಗೆ ನಾಚಿಕೆ ತಂದಿದೆ. ಇತ್ತೀಚೆಗೆ ಶ್ರೀ ನಿಜಗುಣಾನಂದ ಸ್ವಾಮಿಗಳ ಕೈಯಲ್ಲಿ ಸತ್ಕಾರ ಸ್ವೀಕರಿಸಿದ್ದು ಇಷ್ಟು ಬೇಗ ಮರೆತು ಬಿಟ್ಟೀರಾ ಹೇಗೆ?ಅಥವಾ ಮುಸ್ಲಿಂ ಸಮುದಾಯದ ಓಲೈಕೆಗೆ ಮುಂದಾಗಿ ವೋಟ್ ರಾಜಕಾರಣಕ್ಕಾಗಿ ನೀವು ಹೀಗೆ ಹೇಳಿದಿರೋ ಹೇಗೆ?

ಒಬ್ಬ ಸಮಾಜವಾದಿ ಹಿನ್ನೆಲೆಯಿಂದ ಬಂದ ನೀವು ಇಂತಹ ಸಣ್ಣ ಪುಟ್ಟ ವಿಚಾರಗಳಿಗೆ ನಿಮ್ಮ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವದು ಸರಿ ಅಲ್ಲ. ನೀವು ಬಸವ ಧರ್ಮದಲ್ಲಿ ಹುಟ್ಟಿಕೊಂಡು ಹೀಗೆ ಹೇಳಿದರೆ ನಿಮಗೆ ಅದು ಶೋಭೆಯೇ? ನಾನು ನಿಮ್ಮನ್ನು 43 ವರ್ಷಗಳಿಂದ ಬಲ್ಲೆನು . ಜೆಪಿ ಚಳವಳಿಯ ಮೂಲಕ ಸಮಾಜವಾದಿ ಚಿಂತನೆಯನ್ನು ಕರ್ನಾಟಕದಲ್ಲಿ ಪ್ರಸಾರ ಮಾಡಿದವರು.

ನಿಮ್ಮ ಗಮನಕ್ಕೆ ಇನ್ನೊಮ್ಮೆ ಬಸವ ತತ್ವ ಮತ್ತು ತಿಳಿವಳಿಕೆ ಬಗ್ಗೆ ನಾಲ್ಕು ಸಾಲು ಬರೆದಿರುವೆ.

ಹನ್ನೆರಡನೆಯ ಶತಮಾನದ ಕಲ್ಯಾಣ ನಾಡಿನ ಬಸವಾದಿ ಶರಣರು ಸಾರ್ವಕಾಲಿಕ ಸಮತೆ ಸಾರುವ ಕಾಯಕ ದಾಸೋಹ ತತ್ವಗಳ ಅಡಿಯ ಮೇಲೆ ಲಿಂಗಾಯತ ಎಂಬ ಹೊಸ ಧರ್ಮದ ವೈಚಾರಿಕ ಸಿದ್ಧಾಂತವನ್ನು ಜಗತ್ತಿಗೆ ಕೊಟ್ಟರು

ಅಷ್ಟಾವರಣಗಳು -ತತ್ವಕ್ಕೆ ಸೀಮಿತವಾದ ಸಂಕೇತಗಳು.ಗುರು ಲಿಂಗ ಜಂಗಮ ರುದ್ರಾಕ್ಷಿ ವಿಭೂತಿ ಮಂತ್ರ ಪಾದೋದಕ ಪ್ರಸಾದ ಎಂಬ ಎಂಟು ಅವತರಣಿಕೆಗಳು ಭೌತಿಕ ವಸ್ತುಗಳಲ್ಲ ಪಂಚ ಮಹಾಭೂತಗಳ ಒಂದೊಂದು ತತ್ವ ಮಾತ್ರ
ಇದನ್ನು ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ

” ಕಾಯದೊಳು ಗುರು ಲಿಂಗ ಜಂಗಮ
ದಾಯತವನರಿಯಲ್ಕೆ ಸುಲಭೋ
ಪಾಯದಿಂದಿದಿರಿಟ್ಟು ಬಾಹ್ಯಸ್ಥಲಕೆ ಕುರುಹಾಗಿ |
ದಾಯದೋರಿ ಸಮಸ್ತ ಭಕ್ತ ನಿ
ಕಾಯವನು ಪಾವನವ ಮಾಡಿದ
ರಾಯ ಪೂರ್ವಾಚಾರ್ಯ ಸಂಗನಬಸವ ಶರಣಾರ್ಥಿ|| ಚಾಮರಸ ( ಪ್ರಭು ಲಿಂಗ ಲೀಲೆ )

ಶರೀರದಲ್ಲಿಯೇ ಇರುವ ಗುರು ಲಿಂಗ ಜಂಗಮ ತತ್ವವವನ್ನು ವಿಸ್ತಾರಗೊಳಿಸಿ ಆಚರಿಸುವ ಸಲುವಾಗಿ, ಸುಲಭ ಸಾಧನವೆಂಬ ಇಷ್ಟಲಿಂಗ (ಕುರುಹು) ವನ್ನು ಪರಿಕಲ್ಪಿಸಿಕೊಟ್ಟು, ಸಮಸ್ತ ಜನವರ್ಗವನ್ನು ಪಾವನ ಮಾಡಿದವನು ಬಸವಣ್ಣ.

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಮ ಸಮಾಜದ ಪರಿಕಲ್ಪನೆಯನ್ನು ಕೊಟ್ಟ ಬಸವಣ್ಣನವರನ್ನು ಮರೆತು ಅನ್ಯ ಧರ್ಮದ ಗುಣ ಗಾನ ಮಾಡುವ ನಿಮ್ಮ ಮೂರ್ಖತನದ ಪರಮಾವಧಿ ಬಗೆ ನಮಗೆಲ್ಲಾ ಕನಿಕರ ತಂದಿದೆ.
ಈ ಕೂಡಲೇ ನಿಮ್ಮ ತಪ್ಪು ಹೇಳಿಕೆ ಹಿಂಪಡೆದು ಲಿಂಗಾಯತ ಧರ್ಮದ ಬಸವ ಭಕ್ತರಲ್ಲಿ ಕ್ಷಮೆ ಕೇಳಿ ಮತ್ತು ಮುಂದೆ ಇಂತಹ ಗೊಂದಲ ಎಬ್ಬಿಸುವ ಮಾತುಗಳನ್ನು ಆಡ ಬೇಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ.
_______________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this