ಬೆಳಗಾವಿ: ಮಹಾನಗರದ ರಾಯ್ ರಸ್ತೆಯಲ್ಲಿರುವ ಕ್ರಿಷ್ ರಾಯಲ್ ಆಪಾರ್ಟಮೆಂಟದಲ್ಲಿ ದೊಡಗೌಡರ ಮತ್ತು ಬೆಟಗೇರಿ ಪ್ರತಿಷ್ಠಾನದಿಂದ ನಿಸ್ವಾರ್ಥ ಸೇವೆಗೈದ ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯರು, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಹಾಗೂ ಪದ್ಮಶ್ರೀ ಫೌಂಡೇಶನ್ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು ಬೈಲಹೊಂಗಲ ತಾಲೂಕು ಘಟಕದ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಶಿವಮೊಗ್ಗ ಉಪವಿಭಾಗದ ನಿವೃತ್ತ ಉಪವಿಭಾಗಾಧಿಕಾರಿಗಳಾದ ಶಿವಲಿಂಗಪ್ಪ ದೊಡಗೌಡರ ಮಾತನಾಡಿ ಮೋಹನ ಬಸನಗೌಡ ಪಾಟೀಲರು ಕೇಂದ್ರ ಸಮಿತಿಯಿಂದ ಪ್ರಕಟಗೊಳ್ಳುವ ವಚನ ಸಾಹಿತ್ಯ, ಬಸವಪಥನ್ನು ನಾಡಿನ ಮನೆ ಮನಗಳಿಗೆ ತಲುಪಿಸುವ ಕಾರ್ಯವನ್ನು ಸೇವಾ ಮನೋಭಾವದಿಂದ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಬಸವಪಥದಲ್ಲಿನ ಸಂಶೋಧನಾತ್ಮಕ ಹಾಗೂ ಮೌಲಿಕ ಲೇಖನಗಳು 12 ನೇ ಶತಮಾನದ ಶರಣರ ವಚನಗಳಿಂದ ವ್ಯಕ್ತಿತ್ವ ವಿಕಸನ ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಚನ ಸಾಹಿತ್ಯವನ್ನು ಎಲ್ಲರಿಗೂ ತಲುಪಿಸಿ ವೈಚಾರಿಕ ಕ್ರಾಂತಿಯನ್ನು ಮಾಡುತ್ತಿರುವ ಮೋಹನ ಪಾಟೀಲರ ನಿಸ್ವಾರ್ಥ ಸೇವೆ ಅಭಿನಂದನೀಯ ಎಂದು ಅವರು ಅಭಿಪ್ರಾಯಪಟ್ಟರು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ 25 ಗುಂಟೆ ನಿವೇಶನ ನೋಂದಣಿ ಮಾಡುವಲ್ಲಿ ಪಾಟೀಲರ ಕೊಡುಗೆ ಅಪಾರವಾದುದು ಎಂದು ಅವರು ಹೇಳಿದರು.
ನಿವೃತ್ತ ಜೀವ ವೀಮಾ ಅಧಿಕಾರಿಗಳಾದ ದಾಕ್ಷಾಯಣಿ ಬಸವಣ್ಣೆಪ್ಪ ಬೆಟಗೇರಿ ( ದೊಡಗೌಡರ) ಮಾತನಾಡಿ ರಾಜ್ಯದಲ್ಲಿಯೇ ಅತೀ ಹೆಚ್ಚು ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರನ್ನು ಮಾಡಿ ದಾಖಲೆ ನಿರ್ಮಿಸಿದ ಬೈಲಹೊಂಗಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಅವರ ಸೇವೆ ಗಣನೀಯವಾದುದು ಎಂದರು. ಸದಸ್ಯತ್ವ ಅಭಿಯಾನದ ಮೂಲಕ ತಾಲೂಕಿನ ಚಿಕ್ಕ ಗ್ರಾಮವಾದ ಬೂದಿಹಾಳದಲ್ಲಿ 500 ಕ್ಕೂ ಹೆಚ್ಚು ಆಜೀವ ಸದಸ್ಯರನ್ನಾಗಿ ಮಾಡಿದ್ದು ಒಂದು ಇತಿಹಾಸವೇ ಸರಿ. ಠಕ್ಕಾಯಿ ಅವರ ಕ್ರಿಯಾಶೀಲತೆ, ಕನ್ನಡದ ಬಗೆಗಿನ ಪ್ರೀತಿ, ಅಭಿಮಾನ ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ ಘನತೆವೆತ್ತ ಮಾಜಿ ರಾಷ್ಟ್ರಪತಿಗಳಾದ ಬಿ.ಡಿ.ಜತ್ತಿಯವರ ಕನಸಿನ ಕೂಸಾದ ಬಸವ ಸಮಿತಿಯು ಅವರ ಪುತ್ರರಾದ ಅರವಿಂದ ಜತ್ತಿಯವರ ನೇತೃತ್ವದಲ್ಲಿ ವಚನ ಸಂಸ್ಕೃತಿಯನ್ನು ಪಸರಿಸುವ ಸತ್ಯ ಶುದ್ಧ ಕಾಯಕ ಮಾಡುತ್ತಿದೆ ಎಂದರು. ವಚನಗಳು ಉತ್ತಮ ಜೀವನವನ್ನು ರೂಪಿಸುವ ಶಕ್ತಿ ಹೊಂದಿವೆ. ಯುವಕರು ವಚನ ಸಾಹಿತ್ಯವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಬೈಲಹೊಂಗಲ ಕಸಾಪ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಮಾತನಾಡಿ ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಲವರ್ಧನೆಗಾಗಿ 1915 ರಲ್ಲಿ ಸ್ಥಾಪನೆಯಾದ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯತ್ವ ಪಡೆಯುವುದು ಅಭಿಮಾನದ ಸಂಕೇತ ಎಂದರು. ಸದಸ್ಯತ್ವ ಅಭಿಯಾನದ ಯಶಸ್ಸಿಗೆ ಬೈಲಹೊಂಗಲ ತಾಲೂಕಿನ ಪರಿಷತ್ತಿನ ಮಾರ್ಗದರ್ಶನ ಮಂಡಳಿಯ ಸದಸ್ಯರು ಹಾಗೂ ಎಲ್ಲ ಪದಾಧಿಕಾರಿಗಳು ಬಹಳ ಸಹಕಾರ ನೀಡಿದ್ದಾರೆ ಎಂದು ಅವರು ಹೇಳಿದರು.
ವೈದ್ಯರಾದ ದಾನೇಶ್ವರಿ ದೊಡಗೌಡರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಾಸ್ತುಶಿಲ್ಪಿ ವಿನಾಯಕ ದೊಡಗೌಡರ ವಂದಿಸಿದರು.