ಫಲವತ್ತಾದ ಭೂಮಿಯನ್ನು ರಿಯಲ್ ಎಸ್ಟೇಟ್ ಆಗಿ ಮಾಡಿದ್ದೇವೆ. ಹೊಲ-ಗದ್ದೆಗಳನ್ನು ಮುಚ್ಚಿ ಬಂಗಲೆಗಳು, ಬಾರ್‌ಗಳನ್ನು ಕಟ್ಟಿದ್ದೇವೆ. ಕೆರೆ-ಬಾವಿಗಳನ್ನು ಮುಚ್ಚಿ ಮೆಟ್ರೋ ಮಾಲ್‌ಗಳನ್ನು ಕಟ್ಟಿದ್ದೇವೆ.
“ಇನ್ವೆಸ್ಟ್ ಕರ್ನಾಟಕ” ಎಂಬ ಹೆಸರಿನಲ್ಲಿ ಬಂಡವಾಳಶಾಹಿಗಳಿಗೆ ಸಾವಿರಾರು ಎಕರೆ ಭೂಮಿಯನ್ನು ಕೊಟ್ಟಿದ್ದೇವೆ. ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು?
ವಿಂಡ್ ಪವರ್, ಸೋಲಾರ್, ರಿಯಲ್ ಎಸ್ಟೇಟ್, ರಿಸಾರ್ಟ್ ಮತ್ತು ಫ್ಯಾಕ್ಟರಿಗಳ ಹೆಸರಿನಲ್ಲಿ ಹೊಲಗಳನ್ನು ಬರಡಾಗಿಸಿದ್ದೇವೆ. ಅಭಿವೃದ್ಧಿಯ ಹೆಸರಿನಲ್ಲಿ ಸಿಕ್ಕಸಿಕ್ಕಲ್ಲಿ ಮರಗಳನ್ನು ಕಡಿದು ಹಾಕಿದ್ದೇವೆ. ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು? ಹಳ್ಳಿ ಯಾರಿಗೆ ಬೇಕಾಗಿದೆ?
ಊರಿನ ಗೌಡನಿಗೂ ನಗರದಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಸಿಕ್ಕಿದೆ. ನಾಯಕರು ನೀರಾವರಿ ಇಲಾಖೆ ಬೇಡ, ನಗರಾಭಿವೃದ್ಧಿ ಇಲಾಖೆ ಬೇಕು ಎನ್ನುತ್ತಿದ್ದಾರೆ.
ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು?
ದನ-ಕರುಗಳು, ಹೈನುಗಾರಿಕೆಯ ಚಿಂತೆಯೇನು?
ಹಾಲು, ಮೊಸರು, ತುಪ್ಪ ಎಲ್ಲವೂ ಪ್ಯಾಕೆಟ್‌ನಲ್ಲಿ ಸಿಗುತ್ತವೆ.
ಹಬ್ಬದ ಸಮಯದಲ್ಲಿ ಸೆಗಣಿ ಬೇಕಾದರೂ ಆನ್‌ಲೈನ್‌ನಲ್ಲಿ ಸಿಗುತ್ತದೆ. ಕೃಷಿ ಎಲ್ಲರಿಗೂ ಬೇಡವಾಗಿದೆ.
ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು?
ಯೋಚಿಸಲು AI, ChatGPT ಇದೆ. ಕೆಲಸ ಮಾಡಲು ರೋಬೋಟ್‌ಗಳಿವೆ. ಬದುಕಲು ಸರ್ಕಾರ ಉಚಿತ ಯೋಜನೆಗಳನ್ನು ಕೊಟ್ಟಿದೆ. ಮಹಿಳೆಯರು ತಿರುಗಾಡಲು ಬಸ್ ಉಚಿತವಾಗಿದೆ. ಅಡಿಗೆ ಮಾಡುವ ಅವಶ್ಯಕತೆಯೇ ಇಲ್ಲ; Zomato, Swiggy ಹೊಟ್ಟೆ ತುಂಬಿಸುತ್ತವೆ.
ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು?
ಕುಡಿಯಲು ನೀರು ಬೇಕಾದರೆ ಬಾಟಲ್ ನೀರು ಸಿಗುತ್ತದೆ.
ನೀರು ಸಿಗದಿದ್ದರೂ ಬಿಯರ್ ಸಿಗುತ್ತದೆ.
ಸರ್ಕಾರ ಮುಜರಾಯಿ ಮತ್ತು ಮದ್ಯದ ಆದಾಯದ ಮೇಲೆ ನಡೆಯುತ್ತದೆ ಎಂದಾದರೆ, ನಮಗೆ ಮಳೆ ಯಾಕೆ ಬೇಕು?
ಹಣ ಬೇಕಾದರೆ PhonePe, Google Pay ಇವೆ.
ಸಮಯ ಕಳೆಯಲು WhatsApp, Facebook, Instagram ಇವೆ; ರೀಲ್ಸ್ ಮಾಡಲು ಸೋಷಿಯಲ್ ಮೀಡಿಯಾ ಇದೆ. ಜನರು ಜಗಳವಾಡಲು ಜಾತಿ-ಧರ್ಮಗಳಿವೆ. ಹಸಿರು ಮತ್ತು ಕೆಸರಿನ ನಡುವೆ ನಾಯಕರಿಗೆ ಅಧಿಕಾರ ಸಿಗುತ್ತದೆ. ಬರಗಾಲ ಬಂದರೂ ಅನುದಾನ ಸಿಗುತ್ತದೆ. ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು?
ಜ್ವರ, ಕೆಮ್ಮು, ನೋವಿಗೆ ಮಾತ್ರೆಗಳು ಅಂಗಡಿಗಳಲ್ಲಿ ಸಿಗುತ್ತವೆ. ಸಣ್ಣಪುಟ್ಟ ಕಾಯಿಲೆಗಳಿಗೂ ಗೂಗಲ್ ವೈದ್ಯರ ಸಲಹೆ ನೀಡುತ್ತದೆ. ಔಷಧಿಗಳು ಮನೆ ಬಾಗಿಲಿಗೇ ಆನ್‌ಲೈನ್ ಮೂಲಕ ತಲುಪುತ್ತವೆ. ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು?
ನಡೆದು ಹೋಗುವ ಕಾಲ ಹೋಗಿದೆ. ಪ್ರತಿ ಮನೆಯಲ್ಲೂ ಬೈಕ್, ಕಾರುಗಳಿವೆ. ಎಲ್ಲಿಗೆ ಹೋಗಬೇಕಾದರೂ ರಸ್ತೆಗಳು, ಫ್ಲೈಓವರ್‌ಗಳು, ಎಕ್ಸ್‌ಪ್ರೆಸ್‌ವೇಗಳು ನಿರ್ಮಾಣವಾಗಿವೆ.
ಹೀಗಿರುವಾಗ ನಮಗೆ ಮಳೆ ಯಾಕೆ ಬೇಕು?
ಡಾ. ಸುದರ್ಶನ ಶರ್ಮ ಮೊಗಸಾಲೆ, ಮಂಗಳೂರು