Homeಅಭಿಪ್ರಾಯಮೂಡಲಗಿಯಲ್ಲಿ ನಕಲಿ ಪತ್ರಕರ್ತರ ಹಾವಳಿ ಜೋರು - ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ!

ಮೂಡಲಗಿಯಲ್ಲಿ ನಕಲಿ ಪತ್ರಕರ್ತರ ಹಾವಳಿ ಜೋರು – ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ!

Published on

ಮೂಡಲಗಿ : ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ನಕಲಿ ಪತ್ರಕರ್ತರ ಹಾವಳಿ ಮಿತಿ ಮೀರಿದ್ದು, ನಿಜವಾದ ಪತ್ರಕರ್ತರಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವುದೇ ಮಾನ್ಯತೆ ಪಡೆದ ಪತ್ರಿಕೆ ಇಲ್ಲ, ಪ್ರೆಸ್ ಕಾರ್ಡ್ ಇಲ್ಲ, ಸುದ್ದಿ ಬರೆಯುವ ಜ್ಞಾನವಂತೂ ಮೊದಲೇ ಇಲ್ಲ ಆದರೂ ದೊಡ್ಡ ದೊಡ್ಡ ಪತ್ರಕರ್ತರು ಎಂದು ಹೇಳಿಕೊಂಡು ಸರ್ಕಾರಿ ಕಚೇರಿಗಳಿಗೆ ನುಗ್ಗಿ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಅನಧಿಕೃತ ಕಟ್ಟಡ, ನಕಲಿ ವೈದ್ಯರ ಬಳಿ ಹಣಕ್ಕೆ ಬೇಡಿಕೆ ಇಡುವುದು ಇವರ ನಿತ್ಯದ ಕಾಯಕವಾಗಿದೆ. ಯಾರಾದರೂ ಪ್ರಶ್ನೆ ಮಾಡಿದರೆ “ನಿನ್ನ ವಿರುದ್ಧ ಸುದ್ದಿ ಮಾಡ್ತೀನಿ” ಎಂದು ಬ್ಲಾಕ್ ಮೇಲ್ ಮಾಡುವುದು ಇವರ ಅಸ್ತ್ರವಾಗಿದೆ.

ಇಂತಹ ನಕಲಿ ಪತ್ರಕರ್ತರಿಂದಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಸರ್ಕಾರಿ ಅಧಿಕಾರಿಗಳು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ ಹಾಗೂ ವರ್ಷಗಳಿಂದ ಶ್ರಮಪಟ್ಟು ಪತ್ರಿಕೋದ್ಯಮವನ್ನು ಉಳಿಸಿಕೊಂಡು ಬಂದಿರುವ ನಿಜವಾದ ಪತ್ರಕರ್ತರಿಗೂ ಕೆಟ್ಟ ಹೆಸರು ಬರುತ್ತಿದೆ.

ಕೆಲವು ಭ್ರಷ್ಟಾಚಾರ ಮಾಡುವ ಸಹಕಾರ ಸಂಘದವರು, ಅವುಗಳಲ್ಲಿ ಕೆಲಸ ಮಾಡುವ ಕಾರ್ಯದರ್ಶಿ, ಸಿಬ್ಬಂದಿಯವರು,  ನಿಯಮ ಉಲ್ಲಂಘಿಸಿರುವ ಖಾಸಗಿ ಶಾಲೆಗಳ ಮಾಲೀಕರು ಕೂಡ ಅನಧಿಕೃತವಾಗಿ ಪ್ರೆಸ್ ಕಾರ್ಡ್ ಕೊರಳಿಗೆ ಹಾಕಿಕೊಂಡು ತಮ್ಮಲ್ಲಿ ವಿಚಾರಣೆಗೆ ಬಂದ ಅಧಿಕಾರಿಗಳಿಗೆ ತೋರಿಸುತ್ತ ಒಂದು ರೀತಿಯ ಧಮಕಿ ಹಾಕುತ್ತಾರೆ. ಒಂದು ಸಹಕಾರ ಸಂಘದಲ್ಲಿ ಸಿಬ್ಬಂದಿ ಹುಡುಗರ ಮೇಲೆ ದಬ್ಬಾಳಿಕೆ ಮಾಡುವ ಒಬ್ಬ ಅಧ್ಯಕ್ಷನಂತೂ ‘ ಮಾನವ ಹಕ್ಕು ಆಯೋಗ’ ಕಾರ್ಡ್ ಮಾಡಿಸಿರುವ ವಿಚಿತ್ರ ಹಾಗೂ ವಿಪರ್ಯಾಸಕರ ಘಟನೆ ಕೂಡ ನಡೆದಿದೆ. ಇವರೆಂದೂ ಯಾವ ವಿಷಯದ ಬಗ್ಗೆಯೂ ಪತ್ರಿಕೆಗಳಲ್ಲಿ ಬರೆದ ಉದಾಹರಣೆ ಇಲ್ಲ. ಹೀಗಾಗಿ ಇದು ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಮಾಡಿಕೊಂಡ ವ್ಯವಸ್ಥೆಯೇ ?

ಸಂಬಂಧಿಸಿದ ಅಧಿಕಾರಿಗಳು ಯಾವುದಕ್ಕೂ ಭಯಪಡದೇ  ಇಂಥವರ ವಿರುದ್ಧ ಹೆಚ್ಚಿನ ತನಿಖೆ ಮಾಡಿ ಇವರ ಬಣ್ಣ ಬಯಲು ಮಾಡಬೇಕಾಗಿದೆ. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು, ಮೂಡಲಗಿ ವ್ಯಾಪ್ತಿಯಲ್ಲಿ ಓಡಾಡುತ್ತಿರುವ ಪತ್ರಕರ್ತರ ಪ್ರೆಸ್ ಕಾರ್ಡ್ ಪರಿಶೀಲನೆ ಮಾಡಿ, ಅವರು ಸಾಮಾಜಿಕ ಜಾಗೃತಿಗಾಗಿ ಬರೆಯುವ ವರದಿಗಳನ್ನು ಪರಿಶೀಲಿಸಿ, ಅಕ್ರಮವಾಗಿ ಪತ್ರಿಕೋದ್ಯಮದ ಹೆಸರಿನಲ್ಲಿ ದಂಧೆ ನಡೆಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿಜವಾದ ಪತ್ರಕರ್ತರು ಮತ್ತು ನಾಗರಿಕರು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ಮೌನ ಮುರಿದು, ನಕಲಿ ಮುಖವಾಡ ಕಳಚುವ ಕೆಲಸ ಮಾಡಬೇಕಿದೆ.

ವರದಿ : ಈಶ್ವರ ಢವಳೇಶ್ವರ, ಮೂಡಲಗಿ

Latest articles

More like this