Homeಕವನಕವನ : ಮಳೆ ಇಳೆ ಹಾಡು

ಕವನ : ಮಳೆ ಇಳೆ ಹಾಡು

Published on

ಮಳೆ ಇಳೆ ಹಾಡು

ವರುಣ ಸುರಿದ ಮುತ್ತಿನ ಮಳೆಯ
ಮತ್ತಿನಲಿ ತೇಲಿಹೋಗಿಹಳು ಇಳೆ
ಅರುಣ ಬೀರಿದ ಕಿರಣ ಕೆನ್ನೆಯ
ಸೋಕಲು ನಾಚಿ ನೀರಾಗಿಹಳು ಇಳೆ

ಬಿಸಿಲ ಬೇಗೆಯಲಿ ಬಳಲಿ ಬಾಯಾರಿ                      ಬಿರುಬಿಟ್ಟ ಭುವಿಯ ಒಡಲು
ಸುರಿವ ವರ್ಷ ಧಾರೆಯಲಿ ಜಳಕ
ಮಾಡುತ ಪುಳಕಿತಳಾಗಿಹಳು ಇಳೆ

ಮುಸಲ ಧಾರೆಯ ಸಲಿಲ ಗಾನಕೆ
ಭುವಿಯ ಒಡಲಲಿ ನವಪಲ್ಲವ
ಹರಿವ ನೀರಿನ ಕಲಕಲ ನಿನಾದಕೆ
ಸೋಲುತ ಶರಣಾಗಿಹಳು ಇಳೆ

ಕಣ್ಣ ತೆರೆದು ಮಣ್ಣ ಕಣಕಣ
ಹೊನ್ನ ಮುಡಿಯುತ ಬಣ್ಣ ತಳೆಯಿತು
ಹಸಿರು ಸೀರೆಯ ಧರಿಸಿ ಹೊಸ ಉಸಿರ                      ಪಡೆದು ನಗುತಿಹಳು ಇಳೆ

ಮಳೆಯ ಸಿಂಚನ ಇಳೆಗೆ ರೋಮಾಂಚನ                      ಬೀಜ ಮೊಳಕೆ ಸಂಭ್ರಮ
ಇಂದು ಎಲ್ಲೆಡೆ ರಂಗು ರಂಗಿನ ಹಸಿರು                          ಕಿರಣ ಧರಿಸಿಹಳು ಇಳೆ

ಬಾನು ಬೀರಿದ ಮೋಡ ತೂರಿದ
ಹನಿ ಹಾಡಿಗೆ ಹೆಜ್ಜೆ ತಾಳ ಹಾಕಿದೆ
ಬಾಗಿ ಬಳುಕುತ ಕೆರೆ ತೊರೆಯಾಗಿ
ನದಿ ನವಿಲಾಗಿ ಕುಣಿದಿಹಳು ಇಳೆ

ನೆಲ ಮುಗಿಲಿನ ಪ್ರೇಮ ಬಂಧನ
ಮಳೆ ಇಳೆಯ ಚೆಲುನಂದನ
ಸುರಿದ ಸೋನೆ ಮಳೆಯ ಮಡಿಲಲಿ
ಮಗುವಾಗಿ ನೆನೆದಿಹಳು ಇಳೆ

ಮಣ್ಣಿನಲ್ಲಿ ಬೆಚ್ಚಗೆ ಅವಿತು ಕುಳಿತ
ಬೀಜ ಮೆಲ್ಲ ಕಣ್ಣ ತೆರೆದಿದೆ
ಭರದಿ ಬರುವ ಮಳೆಯ ಹಾಡಿಗೆ
ನಲಿದು ಅರಳಿಹಳು ಇಳೆ

ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Latest articles

More like this