Homeಕವನಕವನ : ಮುನ್ನಾ ಬಾಗವಾನ

ಕವನ : ಮುನ್ನಾ ಬಾಗವಾನ

Published on

ಮುನ್ನಾ ಬಾಗವಾನ

ಅರವತ್ತ್ಮೂರು ವಸಂತಗಳ ಹೆಜ್ಜೆಯಿಟ್ಟರೂ,
ಅದೇ ನಗು… ಅದೇ ಉತ್ಸಾಹ…
ಕಾಲವನ್ನೇ ಸೋಲಿಸುವ
ಚಿರಯುವಕ ನೀವು.

ಮುಖದಲ್ಲಿ ಮಂದಹಾಸ,
ಮನದಲ್ಲಿ ಮಮತೆ,
ಸ್ನೇಹದಲ್ಲಿ ನಿಷ್ಠೆ,
ಮಾತಿನಲ್ಲಿ ಆತ್ಮೀಯತೆ.

ಮಮತಾಜ್ ಎಂಬ ಮಮತೆಯ ನೆರಳಲ್ಲಿ,
ಸುಂದರ ಸಂಸಾರದ ಸಾರ್ಥಕ ಪಯಣ.
ಮೂವರು ಮಕ್ಕಳ ಹೆಮ್ಮೆಯ ತಂದೆ,
ಮೊಮ್ಮಗನ ನಗುವಿನಲ್ಲಿ
ಮತ್ತೆ ಬಾಲ್ಯ ಕಂಡ ತಾತ.

ಸಾಹುಕಾರರ ಗರಡಿಮನೆಯಲ್ಲಿ ಬೆಳೆದು,
ಕರದಂಟಿನ ಸವಿಯ ಗೋಕಾಕದ ಮಣ್ಣಿನಿಂದ,
ಕುಂದಾನಗರಿ ಬೆಳಗಾವಿಗೆ ಬಂದ ನಂಟು.
ಹತ್ತು ವರ್ಷಗಳ ಹಿಂದೆ ನೆಟ್ಟ ಆ ಹೆಜ್ಜೆ,
ಇಂದು ಸಾವಿರಾರು ಹೃದಯಗಳ ಬಂಧವಾಗಿದೆ.

ಹಿರಿಯ ಪತ್ರಕರ್ತರಾಗಿ,
ಕನ್ನಡದ ಕಾವಲುಗಾರರಾಗಿ,
ಹೋರಾಟದ ಹಾದಿಯಲ್ಲಿ ಮುಂಚೂಣಿಯಾಗಿ,
ರಾಜಕೀಯದ ನಾಡಿಮಿಡಿತ ಅರಿತ
ಅಪರೂಪದ ವಿಶ್ಲೇಷಕರಾಗಿ
ನಿಮ್ಮದೇ ಆದ ಛಾಪು ಮೂಡಿಸಿದ್ದೀರಿ.

ಸ್ನೇಹಿತನೆಂದರೆ ನೀವೇ ನೆನಪು,
ಸಹೋದರನೆಂದರೆ ನೀವೇ ಭರವಸೆ.
ಯಾರ ನೋವಿಗೂ ಮಿಡಿಯುವ ಹೃದಯ,
ಯಾರ ಸಂತೋಷಕ್ಕೂ ಹರ್ಷಿಸುವ ಮನ.

ನಾನು ನಿಮ್ಮನ್ನು
ಹತ್ತಿರದಿಂದಲೇ ನೋಡಿದ್ದೇನೆ…
ಯಾರಿಗೂ ಕೇಡು ಬಯಸದ
ನಿರ್ಮಲ ಮನಸ್ಸು ನಿಮ್ಮದು.
ಹಿತಶತ್ರುಗಳಿಗೂ ಹಿತವನ್ನೇ ಬಯಸುವ
ವಿಶಾಲ ಹೃದಯ ನಿಮ್ಮದು.

ಕ್ಷಮೆಯೇ ನಿಮ್ಮ ಆಭರಣ,
ಸರಳತೆಯೇ ನಿಮ್ಮ ಸೌಂದರ್ಯ,
ಸ್ನೇಹವೇ ನಿಮ್ಮ ಸಂಪತ್ತು,
ಪ್ರೀತಿಯೇ ನಿಮ್ಮ ಪರಿಚಯ.

ವರ್ಷಗಳು ಹೆಚ್ಚಾದಷ್ಟೂ
ನಿಮ್ಮ ವ್ಯಕ್ತಿತ್ವ ಮತ್ತಷ್ಟು ಅರಳಿದೆ.
ವಯಸ್ಸು ಅರವತ್ತ್ಮೂರು ಆದರೂ,
ಮನಸ್ಸು ಇನ್ನೂ ಹದಿನಾರರ ಚೈತನ್ಯ!

ಎಲ್ಲರೂ ಕೇಳುವ ಪ್ರಶ್ನೆ ಒಂದೇ…
ಈ ಉತ್ಸಾಹದ ಹಿಂದಿನ ರಹಸ್ಯವೇನು?

ನಗುತ್ತಲೇ ಹೇಳುವ ನಿಮ್ಮ ಉತ್ತರ
ಎರಡು ಪೆಗ್ಗಿನ ಗತ್ತು,
ಅದೇ ನನ್ನ ಆರೋಗ್ಯದ ಗುಟ್ಟು!

ಹಾಸ್ಯ ನಿಮ್ಮ ಹಣೆಬರಹ,
ಸ್ನೇಹ ನಿಮ್ಮ ಬದುಕಿನ ಪರಿಮಳ.

ಹೀಗೆ ಸದಾ ನಗುತ್ತಾ,
ಎಲ್ಲರ ಪ್ರೀತಿ ಗಳಿಸುತ್ತಾ,
ಆರೋಗ್ಯ, ಆಯುಷ್ಯ, ನೆಮ್ಮದಿ,
ಸಂತೋಷಗಳ ಸಾಗರದಲ್ಲಿ ತೇಲುತ್ತಾ,
ಇನ್ನೂ ನೂರಾರು ವಸಂತಗಳನ್ನು
ಸಂಭ್ರಮದಿಂದ ಆಚರಿಸಲಿ ನಿಮ್ಮ ಬದುಕು.

ಜನ್ಮದಿನದ ಹಾರ್ದಿಕ ಶುಭಾಶಯಗಳು,
ಆತ್ಮೀಯ ಮುನ್ನಾ ಬಾಗವಾನ ಅವರಿಗೆ.

ಇಂತಿ ನಿಮ್ಮ
ಶ್ರೀಶೈಲ ಮಠದ

Latest articles

More like this