ಲಗೂನ ಬಾ ಮಳೆರಾಯಾ…
ಅಗದಿ ಛಲೋ ಆತ ನೋಡ
ಮೂರ ದಿನಾ ಆತೂ..
ನೀ ಕನಸಿನ್ಯಾಗ ಬಂದ
ಕರಿಕಟ್ಟಿ ಕಾಡತಿದ್ದಿ!
ನೀ ಬರೂ ದಾರಿಯೊಳಗ
ಮಲ್ಲಿಗಿ ಚೆಲ್ಲಿ ಮೆಲ್ಲಕ ಬಾ ಅಂತ
ನಾ ಕರಿತಿದ್ರ..ನೀ
ಒಲ್ಲಿ ಅಂತ ಓಡತಿದ್ದಿ.
ಓಡುದಾದ್ರ ಮತ್ತ ಕಾಡುದ್ಯಾಕ?
ನೀ ಕನಸಿನೊಳಗ ಬಂದ್ರ
ನನಗ ನಿದ್ದಿಲ್ಲಾ ನೀರಡಿಕಿಲ್ಲಾ
ಇಲ್ಲ ಸಲ್ಲದ ಕನಸ ಬಿತ್ತಿ
ನೀ ನಿನಗ ತಿಳದ್ಹಾಂಗ ಮಾಡುದಾದ್ರ ಬೆಳ್ಳಮುಗಲ
ಚಂದ್ರಾ ಮುಸಕ ಹಾಕಿ
ಅತ್ತಂಗ ಆಗತದ ನನ್ನ ತಬ್ಬಿ
ಗುಬ್ಬಿಯಂಗ ನಾನಂತು
ಇಣುಕಿ ತಿಣಕಿ ನೋಡಿ
ನನ್ನ ಕಣ್ಣಿಗಿ ನಾನ
ಮಣ್ಣ ಹಾಕೊಂದಂಗ್ಹಾತು!
ಇಂದ ಬಂದಿ..ನಾಳಿ ಬಂದಿಯಂತ
ಹಣಿಗಿ ಕೈ ಹಚ್ಚಿ ಹುಬ್ಬ ಕಮರುವಂತಹ ಬಿಸಲೊಳಗ
ಮುಗಲ ನೋಡತಿದ್ರ ನಿನ್ನ ಸುಳಿವ ಇಲ್ಲ.
ಬಟ್ಟಬಯಲೊಳಗ
ಬೆಟ್ಟದಂತಥಾ ಕನಸಿತ್ತ
ಏನಾದ್ರಾಗಲಿ ನಿನ್ನ ಕೆಳಗಿಳಿಸಿ
ಕರಿ ಮಣ್ಣಾಗೊಂದಿಷ್ಟ.
ನನ್ನ ಕನಸಿಗೆ ಕಸುವ ಕೊಟ್ಟ
ಉಸರಾಡಲಿಕ್ಕಾದ್ರೂ..
ಹಸರ ಬೆಳ್ದು; ಹೊಸಾ ಬದ್ಕು
ಬಾಳಬೇಕಂತ ತಾಳೆ ಹಾಕಿದ್ದೆ!
ಏನ ನಿನ್ನ ಅಬ್ಬರಾ!
ಅಬ್ಬಬ್ಬಾ..ನೀ ಘರ್ಜಿಸೋದ
ನೋಡಿ ಈಗ ಸದ್ಯಾ
ಇಳೆಗೆ ಇಳದ ಬರ್ತಿ ಅನಕೊಂಡ್ರ
ಸರ್ರಂತ ಸರದ ಹ್ವಾದಿ
ಹೋದರ ಹೋಗವಲ್ಲ್ಯಾಕ
ನನ್ನೆದ್ಯಾಗ ನೀ ಯಾಕ
ಬದುಕು ಭರವಸೆ ತುಂಬಿ
ಮುಂದಿನೂರಿಗೆ ನಡದಿ?
ನಾ ಅತ್ತ ಬಿತ್ತಿದ್ರ…
ಇಲ್ಲಿ ತನಕಾ ನನ್ನ ಕಣ್ಣಿರೊಳಗ
ಜ್ವಾಳದ ದಂಟಾ ತೆನಿ ಹಾಕತಿತ್ತು
ಅವರಿ ಬಳ್ಳಿ ಹೂವ್ವಾಡತಿತ್ತು!
ಖರೇ ಹೇಳತನ ಕೇಳ
ತೆಲಿ ಕೆಟ್ಟರ..ನಾ ಬಾಳ ಕೆಟ್ಟ
ದಯಮಾಡಿ ಬಾ..ಹುಯ್ಯ ಬಾ
ಬಿತ್ತಿದ ಬೀಜಾ ನೆಲಾ ಬಿಟ್ಟ ಹೊರಗ ಬರಲಿ…
ದುಡಿಕಿ ನಿನ್ನ ದೂರಿದ್ರ
ತಪ್ಪಾತೋ ನನ್ನೊಡೆಯಾ
ಮನಸಿಗೊಪ್ಪುವ್ಹಾಂಗ ಹನಿ ನೀರ
ಭೂಮಿಗೆ ಹಣಿಸಿ; ನನ್ನ ಬೆವರ ವರಸಿ ಹೋಗ ಬಾ..
ಸರ್ರಂತ ಹೀಂಗ ಬಂದ
ಹಾಂಗ್ಹ ಹ್ವಾದ್ರೂ ಚಿಂತಿಲ್ಲಾ
ಕಟ್ಟಿದ ಕನಸಿಗೆ ಮೋಸಮಾಡಬ್ಯಾಡ
ಲಘೂನ ಬಾ.. ಮಳಿರಾಯಾ..
ಚನಬಸಪ್ಪ ಚೌಗಲಾ
ವಿಶ್ವಾರಾಧ್ಯಪ್ರಿಯ
೮೮೬೭೬೬೫೦೪೪