Homeಕವನಶಶಿಕಾಂತ ಪಟ್ಟಣ ಮೂರು ಕವಿತೆಗಳು

ಶಶಿಕಾಂತ ಪಟ್ಟಣ ಮೂರು ಕವಿತೆಗಳು

Published on

 ಕಿರುಕುಳ ರಜೆ !
__________________

ನನ್ನವಳು ತನ್ನ
ಮೇಲಾಧಿಕಾರಿ ಕಂಡು
ತನಗೆ ನಾಳೆ ಕಿರುಕುಳ
ರಜೆ ಬೇಕೆಂದು
ಅರ್ಜಿ ಕೊಟ್ಟಳು
ಅವನು ಕೊಡಲಾಗುವುದಿಲ್ಲ
ಎಂದು ತಳ್ಳಿ ಹಾಕಿದನು.
ಸಿಡಿಮಿಡಿಗೊಂಡ ನನ್ನವಳು
ನನಗೆ ಫೋನಾಯಿಸಿ
ಏನ್ರಿ ಈ ಪುರುಷರಿಗೆ
ಎಷ್ಟು ದಿಮಾಕು
ನಿಮ್ಮ ಜೊತೆಗೆ ಒಂದು ದಿನ
ಕಾಲ ಕಳೆಯಲು
ರಜೆ ಕೇಳಿದರೆ ಕೊಡಲಿಲ್ಲ
ಎಂದು ಶಪಿಸುತ್ತಾ …..
ಫೋನ್ ಕುಕ್ಕಿದಳು.
ನಾನು ಅವನಿಗೆ ಫೋನ್
ಮಾಡಿ ಧನ್ಯವಾದ ಎಂದೇ
ಆಗ ಅವನು
ನಾನೂ ರಜೆ ತೆಗೆದುಕೊಳ್ಳುವುದಿಲ್ಲ
ಮತ್ತು ಮಹಿಳೆಯರಿಗೆ
ರಜೆ ಕೊಡುವುದಿಲ್ಲ
ಎನ್ನಬೇಕೇ?
ಆಗ ನನಗೆ ಅರ್ಥವಾದದ್ದು
ಕಿರುಕುಳ ರಜೆಯ ಅರ್ಥ
_______________________

ಸಂತೆಯೊಳಗಿನ ಸಂತೆ
______________________

ಅದೆಷ್ಟೋ ಭಾವಗಳ
ನಿನ್ನ ಮುಂದೆ
ಹರವಿಕೊಳ್ಳಬೇಕೆಂದು
ಒಳಗೊಳಗೆ
ಖುಷಿ ಪಟ್ಟಿದ್ದೆ
ನಿನ್ನಂತರಂಗದ ನೆಲೆ
ಹೊಕ್ಕು ನೋಡಿದೆ
ನೀನು ಸತ್ಯ ಸಮತೆ
ಶಾಂತ ಮೂರ್ತಿ
ಸಂತೆಯೊಳಗಿನ ಸಂತೆ

ಸ್ನೇಹದ ಸುವಿಶಾಲ
ಒಲವ ಪ್ರೀತಿಯ ಮರ
ಹಲವು ಕನಸುಗಳ
ಗೂಡು ಕಟ್ಟಿರುವೆ
ಗುಬ್ಬಿ ಪಾರಿವಾಳಗಳ
ನಾದ ಇಂಚರ
ಹಸಿರು ಭೂರಮೆಗೆ
ವಿಳಾಸ ನೀನು
ಸತ್ಯ ಶೋಧದ ಹೆಜ್ಜೆ
ಬುದ್ಧ ಬಸವರ ಮಗಳು
______________________

ಕಾಲ ಬದಲಾಗಿದೆ
______________

ಐದು ದಶಕದ ಹಿಂದೆ,
ಕಾಲ ಸರಳವಾಗಿತ್ತು,
ಬದುಕು ಹಸನಾಗಿತ್ತು;
ಮಣ್ಣ ಗೋಡೆಯ ತೊಲೆಯ
ಹಳೆ ಮನೆಯೊಳಗೆ,
ಬೆಳಕಿಂಡಿಯ ಪ್ರೀತಿ ಬೆಳಕು
ಬಡ ರೈತರ ಬದುಕು

ಮೊಬೈಲ್ ಇರದ ದಿನಗಳಲ್ಲಿ,
ಮಾತುಗಳು ಮನಸ್ಸನ್ನು
ಮುಟ್ಟುತ್ತಿದ್ದವು;
ಪತ್ರದ ಬರುವಿಕೆಗಾಗಿ
ಕಾಯುವ ಕಣ್ಣುಗಳು,
ಬಾಂಧವ್ಯದ ಆಳ
ಅಳೆಯುತ್ತಿದ್ದವು.

ಜಾತ್ರೆ ಪಾರಿಜಾತದ ಸದ್ದು
ಓಣಿ ತುಂಬಾ ಆಟದ ಗದ್ದಲ,
ಸಿಡಿಯಲು ಸಿದ್ಧ ಪಟಾಕಿ ಮದ್ದು
ಹಿರಿಯರ ಬಾಯಲ್ಲಿ ಕಥೆಗಳ ಹಬ್ಬ;
ಅಕ್ಕಿ-ಬೇಳೆ ಹಂಚಿ ಉಣ್ಣುವ ಪ್ರೀತಿ,
ಕೂಡು ಕುಟುಂಬವೇ ನಮಗೆ
ಒಂದು ದೊಡ್ಡ ನೀತಿ.

ಬೀದಿ ದೀಪದ ಕೆಳಗಿನ ಓದು,
ಚಿಮಣಿ ಬುಡ್ಡಿಯ ಸುತ್ತ
ಮಸುಕಾದ ಬೆಳಕು;
ಕಷ್ಟ ದುಃಖದ ಮಧ್ಯೆ
ಮಂದಹಾಸದ ನಗೆ ಇತ್ತು,
ಬರಿಗಾಲಲಿ ಶಾಲೆ ಪಾಠ
ನಿತ್ಯ ಕಸರತ್ತು

ಇಂದು ಕಾಲ ಬದಲಾಗಿದೆ,
ವೇಗ ಹೆಚ್ಚಾಗಿದೆ,
ಕೈಯಲ್ಲಿ ಜಗತ್ತಿದೆ, ಆದರೆ
ಮನುಜ ಒಂಟಿಯಾಗಿರುವ
ಐದು ದಶಕದ ಆ ದಿನಗಳು,
ನೆನಪಿನ ಪುಟಗಳಲ್ಲಿ
ಅಚ್ಚಳಿಯದೆ ಉಳಿದಿವೆ.

ಎಷ್ಟೋ ವರುಷಗಳ ಮೇಲೆ
ಅವಳ ಭೇಟಿ
ಕಣ್ಣಿನಲ್ಲಿ ಮಾತು ಹರಿದವು
ಮೌನ ಮುರಿದು ಮಾತು
ಸಂಜೆ ಬಾನಿನ ಚುಕ್ಕಿ ಮೂಡಿದವು
ಹುಣ್ಣಿಮೆಯ ಚಂದ್ರ ನಕ್ಕನು
ಮತ್ತೆ ಗೂಡು ಸೇರಿದೆವು
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this