Homeಲೇಖನಲೇಖನ : ಸೋಲಿನ ಬೆನ್ನೇರಿ ಗೆಲುವು ಸಾಧಿಸುವ ದಾರಿ

ಲೇಖನ : ಸೋಲಿನ ಬೆನ್ನೇರಿ ಗೆಲುವು ಸಾಧಿಸುವ ದಾರಿ

Published on

ಹೋದ ಕಡೆಗಳೆಲ್ಲೆಲ್ಲ ಸೋಲು ಕಾಲುಗಳಿಗೆ ತೊಡರು ಬಳ್ಳಿಯಾಗಿ ನನ್ನನ್ನು ಬೀಳಿಸುತ್ತಿದೆ. ಹೀಗಾಗಿ ಮುಂದೆ ಹೆಜ್ಜೆ ಇಡುವುದೇ ಬೇಡವಾಗಿದೆ. ಹೆಜ್ಜೆ ಇಟ್ಟರೂ ಸೋಲಿನ ಭಯದಿಂದಲೇ ಇಡುತ್ತಿದ್ದೇನೆ. ನನ್ನ ಹಣೆಬರಹದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಬರೆದಿರಬಹುದು. ನಾನು ದುರದೃಷ್ಟವಂತ, ನನಗೆ ವಿಜಯ ಲಕ್ಷ್ಮಿ ಒಲಿಯಳು ಎಂದು ಸದಾ ನಕಾರಾತ್ಮಕವಾಗಿಯೇ ಮಾತನಾಡುತ್ತಿರುತ್ತೇವೆ.

ವಿಜ್ಞಾನ ತಂತ್ರಜ್ಞಾನದಲ್ಲಿ ಬಾನೆತ್ತರಕ್ಕೆ ಹಾರುವಷ್ಟು ಸಾಧನೆ ಮಾಡಿದ್ದರೂ ನಮ್ಮ ಮನಸ್ಸೇಕೆ ಹೀಗೆ ನಕಾರಾತ್ಮಕ ಯೋಚನೆಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ…. ಎಂದು ಹಲವು ಬಾರಿ ಅನ್ನಿಸುವುದು. ಉಳಿದವರೆಲ್ಲ ನಮ್ಮ ಮುಂದೆ ಎಷ್ಟು ಸಲೀಸಾಗಿ ವಿಜಯದ ಪತಾಕೆ ಹಾರಿಸುತ್ತಿದ್ದಾರೆ ಎಂಬ ಅಸೂಯೆಯ ಭಾವನೆ ಸಣ್ಣಗೆ ಮನದಲ್ಲಿ ಕೊರೆಯುತ್ತಿರುತ್ತದೆ. ‘ಯಾರಿಗೆ ಕೀರ್ತಿ ಸಿಗುತ್ತದೆ ಎಂದು ಚಿಂತೆ ಇರದಿದ್ದರೆ ನೀವು ನಿಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.’ ಎಂದು ಹ್ಯಾರಿ ಟ್ರುಮನ್ ಅದೆಷ್ಟು ಸೊಗಸಾಗಿ ಹೇಳಿದ್ದಾನೆ.

ನಮ್ಮ ಸೋಲಿಗೆ ಕಾರಣಗಳೇನು? ಎಂಬುದನ್ನು ಚಿಂತಿಸುವ ಗೋಜಿಗೇ ಹೋಗುವುದಿಲ್ಲ. ಒಬ್ಬ ವ್ಯಕ್ತಿ ಸೋಲಿಸಲ್ಪಟ್ಟಾಗ ಅವನು ಮುಕ್ತಾಯವಾಗುವುದಿಲ್ಲ. ಆದರೆ ಅವನು ಕೈಚೆಲ್ಲಿ ಕುಳಿತಾಗ ಮುಕ್ತಾಯವಾಗುತ್ತಾನೆ ಹಾಗೂ ಬುದ್ಧಿವಂತನಾದವನು ಅವಕಾಶವನ್ನು ಒಳ್ಳೆಯ ಭಾಗ್ಯವನ್ನಾಗಿ ಬದಲಾಯಿಸುತ್ತಾನೆ. ಎಂಬುದು ಸಾಬೀತಾದ ಸಂಗತಿ. ಬನ್ನಿ ದಿನ ನಿತ್ಯ ಕಾಡುತ್ತಿರುವ ಸೋಲಿನ ಬೆನ್ನೇರಿ ಗೆಲುವು ಸಾಧಿಸುವ ದಾರಿ ಹೇಗೆ ಎಂದು ನೋಡೋಣ.

ಒಂದು ಬಾರಿ ಒಂದೇ ಕೆಲಸ
ನಾವು ಬಹಳಷ್ಟು ಬಾರಿ ಬಹಳ ಕೆಲಸಗಳನ್ನು ಒಂದೇ ಬಾರಿ ಮಾಡುವುದರಿಂದ ಯಶಸ್ಸು ಬೇಗ ಸಿಗುವುದು ಎಂದು ಆಲೋಚಿಸುತ್ತೇವೆ. ಆದರೆ ಒಂದೇ ಬಾರಿ ಎರಡು ಮೂರು ಕೆಲಸಗಳನ್ನು ಆರಂಭಿಸುವುದರಿಂದ ಯಾವ ಒಂದು ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಒಂದೇ ಸಮಯದಲ್ಲಿ ಎರಡು ಕೆಲಸಗಳ ಬಗೆಗೆ ಯೋಚಿಸುವುದು ಪರಿಣಾಮಕಾರಿಯಾಗದು. ಮಾಡಬೇಕಿರುವ ಕೆಲಸಗಳ ಪಟ್ಟಿ ಮಾಡಿ ಆದ್ಯತೆಯ ಪ್ರಕಾರ ಒಂದೊಂದನ್ನೇ ಮಾಡುತ್ತಾ ಸಾಗುವುದು ಉತ್ತಮ ವಿಧಾನ. ರೋಮನ್ ತತ್ವಜ್ಞಾನಿ ಮಾರ್ಕಸ್ ಬರೆಲಿಯಸ್ ಹೀಗೆ ಹೇಳಿದ್ದಾನೆ. ‘ಒಂದು ಪ್ರಶಾಂತವಾದ ಬದುಕು ನಡೆಸಬೇಕಾದರೆ ನಿಮ್ಮ ವೃತ್ತಿಗಳು ಕೆಲವೇ ಆಗಿರಬೇಕು.” ಇದನ್ನೇ ಕನಫ್ಯೂಷಿಯಸ್ ‘ಎರಡು ಮೊಲಗಳನ್ನು ಅಟ್ಟಿಸಿಕೊಂಡು ಹೋಗುವ ವ್ಯಕ್ತಿ ಯಾವುದನ್ನೂ ಹಿಡಿಯಲಾರನು.’ ಎಂದು ಸರಳ ಪದಗಳಲ್ಲಿ ಹಿಡಿದಿಟ್ಟಿದ್ದಾನೆ.

ಸಣ್ಣ ಪುಟ್ಟ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬೇಡಿ
ನಿಜ ಹೇಳಬೇಕೆಂದರೆ ನಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿನ ಪ್ರತಿ ಸಣ್ಣ ವಿಷಯಗಳನ್ನು ತಿಳಿದುಕೊಂಡಿರಬೇಕು ಎಂದು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಅಂಥ ಚಿಕ್ಕ ಪುಟ್ಟ ವಿಷಯಗಳಿಗಾಗಿ ಹೆಚ್ಚು ಕಾಲ ಹರಣ ಮಾಡುವುದು ಬೇಡ, ನಿರ್ದಿಷ್ಟ ಯೋಜನೆಯ ಮೇಲೆ ಹದ್ದಿನ ಹಾಗೆ ಗುರಿಯಿಡಿ. ಗುರಿಯ ಮೇಲೆ ಸಂಪೂರ್ಣ ಮನಸ್ಸನ್ನಿಟ್ಟು ಸಾಗಿ’ ನಾವು ಏನೇ ಮಾಡಲು ಕಲಿತರೆ ಮಾಡುತ್ತಾ ಕಲಿಯುತ್ತೇವೆ.ಉದಾಹರಣೆಗೆ ಮನುಷ್ಯರು ನಿರ್ಮಾಣ ಮಾಡುತ್ತ ನಿರ್ಮಾಣಕಾರರಾದರು. ವಾದ್ಯ ನುಡಿಸುವವನು ಅದನ್ನೇ ನುಡಿಸುತ್ತ ವಾದ್ಯಕಾರನಾದನು. ನ್ಯಾಯಬದ್ಧ ಕೆಲಸಗಳನ್ನು ಮಾಡುತ್ತ ನಾವು ನ್ಯಾಯ ಪರರಾಗುತ್ತೇವೆ. ಸ್ವಯಂ ನಿಗ್ರಹದ ಕೆಲಸಗಳನ್ನು ಮಾಡುತ್ತ ನಾವು ಸ್ವಯಂ ನಿಗ್ರಹಿಗಳಾಗುತ್ತೇವೆ. ಸಾಹಸದ ಕಾರ್ಯಗಳನ್ನು ಮಾಡುತ್ತ ಸಾಹಸಿಗಳಾಗುತ್ತೇವೆ ಎಂದು ಅರಿಸ್ಟಾಟಲ್ ನಮ್ಮ ಕಲಿಕೆ ಮತ್ತು ಮಾಡುವಿಕೆಯ ಕುರಿತಾಗಿ ಸವಿವರವಾಗಿ ಹೇಳಿದ್ದಾನೆ. ಹಾಗಾಗಿ ಮಾಡುತ್ತಾ ಕಲಿತು ಗೆಲುವು ಸಾಧಿಸೋಣ.

ತಪ್ಪು ಸರಿಪಡಿಸಿಕೊಳ್ಳಿ
ತಪ್ಪು ಮಾಡಿರುವ ವ್ಯಕ್ತಿ ಅದನ್ನು ಸರಿಪಡಿಸಿಕೊಳ್ಳದಿದ್ದರೆ ಮತ್ತೊಂದು ತಪ್ಪು ಮಾಡುತ್ತಿದ್ದಾನೆ ಅಂತಲೇ ಅರ್ಥ. ತಪ್ಪು ಮಾಡುವುದು ತಪ್ಪಲ್ಲ ತಿದ್ದಿಕೊಳ್ಳದಿರುವುದು ತಪ್ಪು.ಒಮ್ಮೆ ಮುಗ್ಗರಿಸುವಿಕೆ ಒಂದು ಬೀಳುವಿಕೆಯನ್ನು ತಡೆಯಬಹುದು. ‘ಬೀಳದಿರುವಲ್ಲಿ ಗೌರವವಿಲ್ಲ ಆದರೆ ಬಿದ್ದು ಏಳುವುದರಲ್ಲಿದೆ’ಎಂಬ ಡಾ ಗೋಲ್ಡ್ ಸ್ಮಿತ್‌ನ ನುಡಿ ಎಷ್ಟು ಚೆನ್ನಾಗಿದೆಯಲ್ಲವೇ? ತಪ್ಪುಗಳನ್ನು ಮಾಡುತ್ತಿದ್ದೇವೆ ಎಂದರೆ ನಾವು ಕ್ರಿಯಾಶೀಲರಾಗಿದ್ದೇವೆ ಎಂದರ್ಥ. ಒಂದು ಸಲ ತಪ್ಪಾಯಿತು ಎಂದು ಹೆದರಿ ಮುನ್ನುಗ್ಗಲು ಹಿಂಜರಿಯದಿರಿ. ‘ಬಹು ದೊಡ್ಡ ಮತ್ತು ಬಹಳಷ್ಟು ತಪ್ಪುಗಳನ್ನು ಮಾಡದೇ ಯಾವನೂ ದೊಡ್ಡವನಾಗುವುದಿಲ್ಲ.’ಎಂದು ಗ್ಲೇಡ್ ಸ್ಟೋನ್ ಅದೆಷ್ಟು ವಿವೇಕಯುತವಾಗಿ ನುಡಿದಿದ್ದಾನೆ. ತಪ್ಪನ್ನು ಶತ್ರು ಎಂದು ಭಾವಿಸದಿರಿ.ತಪ್ಪು ಸ್ವಾಭಾವಿಕ ಆದರೆ ಅದರ ಸಮರ್ಥನೆ ಮಾಡಿಕೊಳ್ಳುವುದು ಚಾರಿತ್ರ್ಯಹೀನತೆ.ವಿಶೇಷ ಸಾಧಕರೆಸಿಸಿಕೊಂಡ ಥಾಮಸ್ ಅಲ್ವಾ ಎಡಿಸನ್ ಅಲ್ಬರ್ಟ್ ಐನ್‌ಸ್ಟೀನ್ ಮಹಾತ್ಮಾ ಗಾಂಧೀಜಿಯವರೂ ಸಾವಿರಾರು ತಪ್ಪುಗಳನ್ನು ಮಾಡಿದವರೇ ಆಗಿದ್ದಾರೆ. ‘ಇತರರ ತಪ್ಪುಗಳನ್ನು ಹುಡುಕುವುದು ಸುಲಭ. ಒಳ್ಳೆಯದನ್ನು ಮಾಡುವುದು ಕಠಿಣ.’ ಎಂದಿದ್ದಾನೆ. ಪ್ಲುಟಾರ್ಕ್ ನಿಮ್ಮ ತಪ್ಪುಗಳನ್ನು ಒಪ್ಪಿಕೊಂಡು ಅಪ್ಪಿಕೊಂಡು ಸರಿಪಡಿಸಿಕೊಳ್ಳಿ.

ಸಮಸ್ಯೆಗಳಿಗೆ ಹೆದರದಿರಿ
ಸಮಸ್ಯೆಗಳ ಸರಮಾಲೆಯೇ ಜೀವನವೆಂದು ಕೆಲವರು ಜೀವನವನ್ನು ವ್ಯಾಖ್ಯಾನಿಸಿದ್ದಾರೆ. ಅದು ದಿಟವೂ ಹೌದು. ಯಾರ ಬದುಕೂ ಸುಳಿಯಿಲ್ಲದ ನೀರಲ್ಲಿ ಸುಗಮವಾಗಿ ಸಾಗುವ ದೋಣಿಯಲ್ಲ. ಸಂಕಷ್ಟ ಪರಿಸ್ಥಿತಿಗಳನ್ನೆದುರಿಸಿ ನಿರ್ಣಯಗಳನ್ನು ತೆಗೆದುಕೊಳ್ಳಬೇಕಾದಾಗ ಕಠಿಣವೆನ್ನಿಸುವುದು. ಮನಸ್ಸು ತಲ್ಲಣಗೊಳ್ಳುವುದು. ಬದುಕಿನಲ್ಲಿ ಕಾರ್ಗತ್ತಲು ಕಾಡುವುದು.ಇಂಥ ಸಂದರ್ಭದಲ್ಲಿ ಒಳ್ಳೆಯ ವಿವೇಕದ ದೀಪದ ಬೆಳಕು ಬೆಳಗಿಸಿದರೆ ಸಾಕು ಸಮಸ್ಯೆಗಳು ಮಂಗಮಾಯ. ಬದುಕು ನಮಗೆ ಅನೇಕ ಬಾರಿ ನಮ್ಮ ಶಕ್ತಿಗೆ ಮೀರಿದ ಪರೀಕ್ಷೆಗಳನ್ನು ಒಡ್ಡುತ್ತದೆ. ಅಂಥ ಸನ್ನಿವೇಶಗಳಲ್ಲಿ ಮನಸ್ಸನ್ನು ಒಳಗಡೆ ತಿರುಗಿಸಿ ನೋಡಿದರೆ ನಮ್ಮಲ್ಲಿ ಅಡಗಿರುವ ಅದಮ್ಯ ಚೇತನ್ದದ ಝರಿ ಕಾಣಿಸುತ್ತದೆ. ಚೈತನ್ಯದ ಝರಿಯಿಂದ ಸಮಸ್ಯೆಗೆ ಪರಿಹಾರ ಸಲೀಸಾಗಿ ಸಿಗುವುದು. ತುಳಿಯಲ್ಪಟ್ಟಿರುವ ದಾರಿಗಳು ಸೋತಿರುವವರಿಗೆ ಮಾತ್ರ ವಿಭಿನ್ನ ದಿಕ್ಕಿನಲ್ಲಿ ಆಲೋಚಿಸಿದರೆ ಪರಿಹಾರದ ಬೆಳಕು ಹೊಳೆಯುವುದು.’ಸಂಕಟ ಸಮಯವು ಬಹುತರ ವಿಜಯದ ಸಮಯದಲ್ಲಿ ಬರುವುದು ಎಂಬ ನೆಪೋಲಿಯನ್ನನ ನುಡಿಯಲ್ಲಿ ವಿಶ್ವಾಸವನ್ನಿಟ್ಟರೆ ಸಮಸ್ಯೆಗಳು ಅವಕಾಶಗಳಾಗಿ ಬದಲಾಗುವವು.

ಮುಗುಳ್ನಗುತ್ತ ಹೆಜ್ಜೆ ಹಾಕಿ
ಗೆಲುವಿನ ಹಾದಿಯಲ್ಲಿ ಸಾಗುವಾಗ ಜವಾಬ್ದಾರಿ ಹೆಚ್ಚಿದಂತೆನಿಸುತ್ತದೆ. ಒತ್ತಡ ಚಿಂತೆಯ ಕಾರ್ಮೋಡಗಳು ಸುತ್ತ ಮುತ್ತಲೂ ಕವಿದಂತೆನಿಸುತ್ತವೆ. ಇವೆಲ್ಲ ಸಾಧನೆಯ ಮಾರ್ಗದಲ್ಲಿ ಅತಿ ಸಾಮಾನ್ಯ. ಆಗ ನೆಪದ ರೋಗದ ಸೋಗು ಹಾಕಿ, ಅವುಗಳಿಗೆ ವಿಪರೀತ ಮನ್ನಣೆ ನೀಡುವ ಗೋಜಿಗೆ ಹೋಗಬೇಡಿ. ಅವುಗಳೊಂದಿಗೆ ಮುಗುಳ್ನಗುತ್ತ ಹೆಜ್ಜೆ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿ. ಗುರಿಯಿಂದ ವಿಚಲಿತಗೊಳಿಸುವ ಯಾವುದೇ ವಿಷಯಗಳು ಮನಸ್ಸನ್ನು ತಾಕದಿರಲಿ. ಅಂತಿಮವಾಗಿ ಗುರಿಯೆಡೆಗೆ ಗುರಿಯಿಟ್ಟು ಖುಷಿಯಿಂದ ಮಾಡುವ ಎಲ್ಲ ಕೆಲಸಗಳಿಂದ ನೀವು ಗೆಲುವಿನ ಶಿಖರದ ತುದಿಗೆ ಹತ್ತಿರವಾಗುತ್ತೀರಿ.

ಗಾಳಿಪಟ- ಧೈರ್ಯದ ಕೋಲು
ಸೋಲಿನ ಬೆನ್ನೇರಿ ಗೆಲುವಿನ ಸಾಗರವನ್ನು ತಲುಪಿಸುವ ತೆಪ್ಪಕ್ಕೆ ಒಂದು ಗುರಿಯೆಂಬ ಗಾಳಿಪಟ.ಅದರ ಜೊತೆಗೆ ಹುಟ್ಟು ಹಾಕುವ ಧೈರ್ಯದ ಕೋಲು ಬಲವನ್ನು ಹೆಚ್ಚಿಸುತ್ತವೆ.ಭೂಮಿಗಿಳಿದ ಬೇರುಗಳು ಆಕಾಶದೆತ್ತರಕ್ಕೆ ಮೈ ಚಾಚಿಕೊಂಡ ರೆಂಬೆ ಕೊಂಬೆಗಳು ರಾತ್ರೋ ರಾತ್ರಿ ಸೃಷ್ಟಿಯಾಗಿಲ್ಲ. ಒಂದು ಕಡೆ ಚಿಗುರುತ್ತ ಮತ್ತೊಂದು ಕಡೆ ಬಾಡುತ್ತ ಕೊಂಬೆಗಳು ಕಾಂತಿ ಹೀನವಾದರೂ ಮತ್ತೆ ಮತ್ತೆ ಮಿಡಿಯುವಿಕೆ ಚಿಗುರುವಿಕೆ ಇದ್ದೇ ಇರುತ್ತದೆ. ಹೀಗೆ ಚಿಗುರಿಕೊಳ್ಳಲು ಎಚ್ಚೆತ್ತುಕೊಳ್ಳಲು ಒಂದು ಅರ್ಥಪೂರ್ಣವಾದ ಸಿಂಹಾವಲೋಕನ ಸಾಕು.ಬೇರಾವ ಸಲಹೆಗಳು ಬೇಕಿಲ್ಲ ಗೊಂದಲ ಎದುರಾದಾಗ ಒಬ್ಬರೇ ಕುಳಿತು ಯೋಚಿಸಿದರೆ ಸಾಕು. ಸೋಲಿನ ಬೆನ್ನೇರಿ ಗೆಲುವನ್ನು ಸಾಧಿಸುವ ದಾರಿ ತಾನಾಗಿಯೇ ತೆರೆದುಕೊಳ್ಳುತ್ತದೆ.

ಜಯಶ್ರೀ ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಸ ಪ ಪೂ ಕಾಲೇಜು ಹಿರೇಬಾಗೇವಾಡಿ
ತಾ:ಜಿ: ಬೆಳಗಾವಿ
೯೪೪೯೨೩೪೧೪೨

Latest articles

More like this