Homeಲೇಖನಬಸವ ಜಯಂತಿ ಆರಂಭ ಮತ್ತು ಹರ್ಡೇಕರ ಮಂಜಪ್ಪನವರ ಸಾಧನೆ

ಬಸವ ಜಯಂತಿ ಆರಂಭ ಮತ್ತು ಹರ್ಡೇಕರ ಮಂಜಪ್ಪನವರ ಸಾಧನೆ

Published on

ಇವ ನಾರವ, ಇವ ನಾರವ, ಇವ ನಾರವ? ಎಂದೆನಿಸದರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವ, ಎಂದೆನಿಸಯ್ಯಾ
ಕೂಡಲಸಂಗಮದೇವಾ, ನಿಮ್ಮ ಮನೆಯ ಮಗನೆನಿಸಯ್ಯಾ
-ವಿಶ್ವಗುರು ಬಸವಣ್ಣನವರು. (ಶಿವಶರಣರ ವಚನ ಸಂಪಟ, ವಚನ ಸಂಖ್ಯೆ: ೬೨)

ಈ ವಚನವು ‘ನಾನು’ ಎಂಬ ಅಹಂಕಾರವನ್ನು ತ್ಯಜಿಸುವ ಮಹತ್ವವನ್ನು ಹೇಳುತ್ತದೆ. “ಇವನು, ಇವನು” ಎಂದು ಬೇರೆ ತನವನ್ನು ನೋಡುವುದು ಅಜ್ಞಾನ. “ಇವನೇ ನಾನು” ಎಂದು ಏಕತ್ವವನ್ನು ಅರಿತಾಗ ಅಹಂಕಾರ ಕಳೆಯುತ್ತದೆ. ಕೊನೆಯಲ್ಲಿ ನಾನು-ನೀನು ಎಂಬ ಭೇದವೇ ಇಲ್ಲ, ಎಲ್ಲವೂ ಒಂದೇ ಎಂಬ ಜ್ಞಾನಕ್ಕೆ ಬರಬೇಕು ಎಂದು ಈ ವಚನದ ಸಾರವಾಗಿರುತ್ತದೆ.

ರಾಷ್ಟ್ರಕವಿ ಕುವೆಂಪು ಅವರು ಇವರಿಗೆ “ಕರ್ನಾಟದ ಮಹಾತ್ಮ” ಎಂದು ಬಿರುದು ಕೊಟ್ಟಿದ್ದರು, ನಂತರ ಅವರಿಗೆ ಕರ್ನಾಟಕದ ಗಾಂಧಿ ಎಂದೂ ಕರೆಯಲಾಯಿತು. ಅವರೆ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಬಸವ ಜಯಂತಿಯ ಆಚರಣೆಯನ್ನು ಜಾರಿಗೆ ತಂದ ರೂವಾರಿ. ಅವರು ಹೆಸರು ಹರ್ಡೇಕರ ಮಂಜಪ್ಪ.

ಹುಟ್ಟಿದ್ದು ಫೆಬ್ರವರಿ ೧೮,೧೮೮೬ರಂದು ಶಿರಸಿಯ ಬನವಾಸಿಯಲ್ಲಿ. ತಂದೆ ಮಧುಕೇಶ್ವರಪ್ಪ ಶ್ರೇಷ್ಠ ಸಮಾಜ ಸುಧಾರಕ, ತಾಯಿ ಮಧುಕೇಶ್ವರ ದೇವಸ್ಥಾನದ ಕಸ ಗುಡಿಸುವ ಕಾಯಕದಲ್ಲಿ ನಿರತಳಾಗಿದ್ದಳು. ಅಣ್ಣ ಮಧುಲಿಂಗಪ್ಪ, ಮೂಲತಃ ಲಿಂಗಾಯತ ಸಮಾಜದವರು. ಮಂಜಪ್ಪನವರು ಕ್ರಿ.ಶ. ೧೯೦೩ ರಲ್ಲಿ ಮುಲ್ಕೀ ಪರೀಕ್ಷೆ ತೇರ್ಗಡೆಯಾದರು. ೧೯೦೫ರಲ್ಲಿ ಶಾಲಾ ಶಿಕ್ಷಕರಾಗಿ ನೇಮಕವಾದಾಗ ಅವರಿಗೆ ಮಾಸಿಕ ವೇತನ ಕೇವಲ ಏಳು ರೂ. ಮಾತ್ರ.

“ನೆಲವೊಂದೆ ಹೊಲಗೇರಿ ಶಿವಾಲಯಕ್ಕೆ;
ಜಲವೊಂದೆ ಶೌಚಾಚಮನಕ್ಕೆ;
ಕುಲವೊಂದೆ ತನ್ನ ತಾನರಿದವಂಗೆ;
ಫಲವೊಂದೆ ಷಡುದರುಶನ ಮುಕ್ತಿಗೆ;
ನಿಲವೊಂದೆ, ಕೂಡಲಸಂಗಮದೇವಾ, ನಿಮ್ಮನರಿದವಂಗೆ”/
-ವಿಶ್ವಗುರು ಬಸವಣ್ಣನವರು. (ಶಿವಶರಣರ ವಚನ ಸಂಪಟ, ವಚನ ಸಂಖ್ಯೆ: ೮೭೯)

ಈ ವಚನದಲ್ಲಿ ಮಾನವನ ಅಹಂಕಾರ ಮತ್ತು ಅಸ್ಥಿರತೆಯನ್ನು ತೋರಿಸಲಾಗಿದೆ. ಮಾನವನು ನೆಲದ ಮೇಲೆ ಮನೆ ಕಟ್ಟಿದಂತೆ, ಜಲದ ಮೇಲೆ ಗುರುತು ಮಾಡಿದಂತೆ, ಕಾಲದ ಮುಂದೆ ಏನೂ ಶಾಶ್ವತವಲ್ಲ. ಜೀವನದ ಸಾಧನೆಗಳು, ಸಂಪತ್ತು, ಹೆಸರು, ಗೌರವ, ಪ್ರತಿಷ್ಠೆಗಳು ನಾಶವಾಗುವವು. ಆದ್ರೆ ಸದ್ಭಕ್ತಿ ಮಾತ್ರ ಶಾಶ್ವತವಾದದ್ದು. ಹಾಗೂ ದೇವರ ಅಸ್ಥಿತ್ವ, ನೆನೆಪು ಚಿರಕಾಲ ಎಂಬ ಸಂದೇಶವನ್ನು ಈ ವಚನವು ನೀಡುತ್ತದೆ.

ಅಂತೆಯೇ ಬಾಲಗಂಗಾಧರ ತಿಲಕರ ಸ್ವಾತಂತ್ರ್ಯ ಚಳವಳಿಯ ಪ್ರೇರಣೆಯಿಂದ ಹರ್ಡೇಕರ ಮಂಜಪ್ಪನವರು ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದರು. ೧೯೦೬ರಲ್ಲಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದರು. ತಿಲಕರ ಕೃಪೆಯಿಂದಾಗಿ ಅದೇ ವರ್ಷ ಸಪ್ಟಂಬರ್ ೨ರಂದು “ಧರ್ನುಧಾರಿ” ವಾರ ಪತ್ರಿಕೆ ಆರಂಭಮಾಡಿದರು. ಲಿಂಗಾಯತ ಧರ್ಮದ ಒಳ ಪಂಗಡಗಳ ಕಿತ್ತಾಟಕ್ಕೆ ಬೇಸತ್ತು, ಅಪಮಾನಗೊಂಡ ಮಂಜಪ್ಪನವರು ವಿವಾಹವೆ ಬೇಡವೆಂದು ನಿರ್ಧರಸಿದರು. ತಮ್ಮ ಸಮಾಜ ಸೇವೆಗೆ ವಿವಾಹ ಅಡ್ಡಿಯಾಗುತ್ತದೆ ಎಂದೂ ಭಾವಿಸಿ, ೧೯೧೦ ರಲ್ಲಿ ತಮ್ಮ ೨೫ನೆ ವಯಸ್ಸಿನಿಂದ ಜೀವನ ಪರ್ಯಂತರ ಬ್ರಹ್ಮಚಾರಿಯಾಗಿ ಉಳಿಯಲು ದೃಢ ನಿರ್ಧಾರ ಹೊಂದಿದರು. ಆವಾಗಿನಿಂದ ಅವರ ಆಹಾರ ಸಂಸ್ಕೃತಿಯಲ್ಲಿ ಪರಿವರ್ತನೆಯಾಯಿತು. ಉಪ್ಪು, ಖಾರ, ಹುಳಿ, ಸಿಹಿ ಎಲ್ಲವನ್ನೂ ತ್ಯಜಿಸಿದರು. ಕೇವಲ ಸಪ್ಪೆ ಆಹಾರ ಸೇವನೆಗೆ ಒಗ್ಗಿಕೊಂಡರು. ೧೯೧೧ರಿಂದ “ಶ್ರಾವಣ ಮಾಸದ ಉಪನ್ಯಾಸ ಮಾಲೆಯ” ಕಾರ್ಯಕ್ರಮ ಆರಂಭಿಸಿದರು. ಇದೇ ಸಂದರ್ಭದಲ್ಲಿ ಅಥಣಿ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದು ಪಾವನರಾದರು. ಶರಣ ಧರ್ಮದ ಪ್ರತಿಪಾದಕರಾದರು.

ಬಸವ ಜಯಂತಿ ಹಿನ್ನೆಲೆ:

ದಾವಣಗೆರೆ ವಿರಕ್ತ ಮಠವು ಚಿತ್ರದುರ್ಗ ಬೃಹನ್ಮಠದ ಶಾಖಾ ಮಠವಾಗಿತ್ತು. ತಮ್ಮ ತಾಯಿ ತೀರಿ ಹೋದ ಬಳಿಕ, ಬ್ರಹ್ಮಚಾರಿಗಳಾಗಿದ್ದ ಹರ್ಡೇಕರ ಮಂಜಪ್ಪನವರು ಆ ಮಠದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದರು. ಆ ಮಠದಲ್ಲಿದ್ದು ಶರಣ ಧರ್ಮ ಪಾಲಿಸಲು ಹಾಗೂ ಬಸವ ತತ್ವ ಆಚರಣೆಯಲ್ಲಿ ತೊಡಗಿದ್ದರು. ಪಾಲ್ಕುರಿಕೆ ಸೋಮನಾಥರ ತೆಲುಗಿನ ಬಸವ ಪುರಾಣವನ್ನು ಪ್ರಥಮ ಬಾರಿಗೆ ಕನ್ನಡಕ್ಕೆ ಅನುವಾದಿಸಿದ ಭೀಮಕವಿಯ ಪುರಾವೆ ಆಧರಿಸಿ, ಹರ್ಡೇಕರ ಮಂಜಪ್ಪನವರು ಅಂದಿನ ಖ್ಯಾತ ಜ್ಯೋತಿಷಿಗಳಾದ ಕರಿಬಸವಶಾಸ್ತ್ರಿ ಸೇರಿದಂತೆ ಅನೇಕರಿಗೆ ಪತ್ರ ಬರೆದು ಬಸವಣ್ಣನವರ ಜನ್ಮ ಜಾತಕ ಹಾಗೂ ನಿಖರವಾದ ಜನ್ಮ ದಿನ ಗುರುತಿಸಲು ಕೇಳಿಕೊಂಡಿದ್ದರು. ಭೀಮಕವಿಯ ಬಸವ ಪುರಾಣದ ಷಟ್ಪದಿಯ ಆಧಾರದ ಮೇಲೆ ಬಸವಣ್ಣನವರು ಆನಂದನಾಮ ಸಂವತ್ಸರದಲ್ಲಿ ಚಾಂದ್ರಮಾನ ವೈಶಾಖ ಮಾಸ,ರೋಹಿಣಿ ನಕ್ಷತ್ರದಲ್ಲಿ ಹುಟ್ಟಿದ್ದರು. ಅಂದು ಅಕ್ಷಯ ತೃತಿಯ ಇತ್ತು ಎಂದು ಜ್ಯೋತಿಷಿಗಳಿಂದ ಕಂಡುಕೊಂಡರು. ಹೀಗಾಗಿ ಮಾರ್ಚ ೩೦,೧೧೩೪ ಬಸವಣ್ಣ ಹುಟ್ಟಿದ ವರ್ಷವೆಂದು ಪರಿಗಣಿಸಲಾಯಿತು. ಅದಕ್ಕೆಂದು ಚಿತ್ರದುರ್ಗ ಬೃಹನ್ಮಠದ ಅಂದಿನ ಜಗದ್ಗುರುಗಳಾದ ಜಯದೇವ ಮಹಾಸ್ವಾಮಿಗಳಿಂದ ಪ್ರಥಮ ಬಸವ ಜಯಂತಿ ಆಚರಣೆಗೆ ಅನುಮತಿ ಪಡೆದರು. ಅದರ ಇನ್ನೊಂದು ಶಾಖಾ ಮಠವಾಗಿದ್ದ ಧಾರವಾಡದ ಮುರುಘಾ ಮಠದ ಅಂದಿನ ಪೀಠಾದಿಪತಿಗಳಾಗಿದ್ದ ಮೃತ್ಯುಂಜಯ ಸ್ವಾಮಿಗಳ ಉಪದೇಶ ಹಾಗೂ ಮಾರ್ಗದರ್ಶನದಂತೆ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಬಸವ ಜಯಂತಿ ಆಚರಣೆಯನ್ನು ಸಾರ್ವಜನಿಕವಾಗಿ ಜಾರಿಗೊಳಿಸಿದರು. ಕ್ರಿ. ಶ.೧೯೧೩ರಿಂದ ಜಾಗತಿಕ ಮಟ್ಟದಲ್ಲಿ ಪ್ರಥಮ ಬಸವ ಜಯಂತಿ ಕಾರ್ಯಕ್ರಮ ಆರಂಭಿಸಿದ ಕೀರ್ತೀ ಹರ್ಡೇಕರ ಮಂಜಪ್ಪನವರಿಗೆ ಸಲ್ಲುತ್ತದೆ.

ಎಲ್ಲೆಲ್ಲಿ ಬಸವ ಜಯಂತಿ ಆಚರಣೆ?
ಪ್ರಸಕ್ತ ವರ್ಷ ಆಚರಣೆ ಮಾಡುತ್ತಿರುವುದು ೮೯೩ನೆ ಬಸವ ಜಯಂತಿ. ಈಗ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶ, ತಮಿಳುನಾಡು ಹಾಗೂ ನವದೆಹಲಿ ರಾಜ್ಯಗಳಲ್ಲಿ ಬಸವ ಭಕ್ತರು ಅಪಾರ ಶ್ರದ್ಧೆಯಿಂದ ಬಸವ ಜಯಂತಿ ಆಚರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಲಂಡನ್ ನಗರದ ಥೇಮ್ಸ್ ನದಿಯ ತೀರದಲ್ಲಿ, ಲ್ಯಾಂಬೆತ್ ನಗರದಲ್ಲಿ ಹಾಗೂ ಜರ್ಮನಿ ದೇಶದ ಎರ್‌ಲಾಂಗ್‌ನಲ್ಲಿ, ಯುಎ, ದುಬೈನಲ್ಲೂ ಬಸವ ಜಯಂತಿ ಆಚರಣೆಗೆ ಬಂದಿದೆ.

ಹೇಗೆ ಆಚರಣೆ?
ಭಾವಚಿತ್ರ ಮೆರವಣಿಗೆ, ಪುತ್ಥಳಿಗೆ ಮಾಲಾರ್ಪಣೆ, ವಚನ ಗಾಯನ, ನೃತ್ಯ ರೂಪಕ ಪ್ರದರ್ಶನ, ಪ್ರಸಾದ ವಿನಿಯೋಗ, ವಚನ ಸಾಹಿತ್ಯ ವಿತರಣೆ, ತೊಟ್ಟಿಲೋತ್ಸವ, ಮಕ್ಕಳಿಗೆ ನಾಮಕರಣ ಉತ್ಸವ, ಸಾಧಕರಿಗೆ ಸನ್ಮಾನ, ವಚನಗಳ ಕುರಿತು ಪ್ರಬಂಧ ಸ್ಪರ್ದೆ, ಉಪನ್ಯಾಸ ಗೋಷ್ಠಿ, ಅನುಭಾವಗಳು, ನಾಟಕ ಪ್ರದರ್ಶನ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಬಸವ ಜಯಂತಿಯನ್ನು ಆಚರಿಸುತ್ತಿದ್ದಾರೆ.

“ಉಳ್ಳವರು ಶಿವಾಲಯ ಮಾಡುವರು;
ನಾನೇನ ಮಾಡುವೆ? ಬಡವನಯ್ಯಾ;
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೆ ಹೊನ್ನ ಕಳಸವಯ್ಯಾ.
ಕೂಡಲಸಂಗಮದೇವ, ಕೇಳಯ್ಯಾ;
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲಾ”/
-ವಿಶ್ವಗುರು ಬಸವಣ್ಣನವರು. (ಶಿವಶರಣರ ವಚನ ಸಂಪಟ, ವಚನ ಸಂಖ್ಯೆ: ೮೨೧)

ಈ ವಚನವು ಅಜ್ಞಾನದಿಂದ ಮಾನವನು ಮಾಡುವ ಅಹಂಕಾರ ಮತ್ತು ವ್ಯರ್ಥ ತರ್ಕವನ್ನು ಸೂಚಿಸುತ್ತದೆ. “ಈ ಮಾಯೆಯನ್ನು ಉಳ್ಳವರು ಯಾರು? ನಾನೇ ಮಾಡಿದೆ” ಎಂದು ಹೇಳುವುದು ಮೂರ್ಖತನ. ಏಕೆಂದರೆ ನಮ್ಮ ಕೈಯಲ್ಲಿ ಇರುವುದೆಲ್ಲ ದೇವರ ಕೃಪೆ. ದೇಹ, ಶಕ್ತಿ, ಬುದ್ಧಿ, ಚಿತ್ತವೂ ಅವನದೇ. ಇದನ್ನು ಅರಿಯದೆ “ನಾನು ಮಾಡಿದೆ” ಎಂದು ಹೆಮ್ಮೆ ಪಡುವುದು ಅಜ್ಞಾನ. ಆದ್ದರಿಂದ ಅಹಂಕಾರ ಬಿಟ್ಟು, ಎಲ್ಲವೂ ದೇವರ ಅನುಗ್ರಹವೆಂದು ತಿಳಿದು ವಿನಯದಿಂದ ಇರಬೇಕು ಎಂಬ ಸಂದೇಶವನ್ನು ಕೊಡುತ್ತದೆ.

ಮಂಜಪ್ಪನವರ ಸಾರ್ಥಕ ಬದುಕು:
ಕ್ರಿ.ಶ. ೧೯೧೯ರಲ್ಲಿ ಗಾಂಧೀಜಿ ಆತ್ಮ ಚರಿತ್ರೆ ಪ್ರಥಮ ಬಾರಿಗೆ ಕನ್ನಡದಲ್ಲಿ ಪ್ರಕಟಗೊಳಿಸಿದರು. ಅದರಿಂದ ಗಾಂಧೀಜಿಗೆ ಆಪ್ತ ಒಡನಾಡಿಗಳಾದರು. ೧೯೨೩ರಲ್ಲಿ ಹರಿಹರದ ತುಂಗಭದ್ರಾ ನದಿ ತೀರದಲ್ಲಿ ಸತ್ಯಾಗ್ರಹಿ ಆಶ್ರಮ ನಿರ್ಮಿಸಿಕೊಂಡು ಅಲ್ಲಿಯೇ ನೆಲೆಸಲು ಆರಂಭಿಸಿದರು. ಆ ಪರಿಸರದ ಪ್ರಭಾವದಿಂದ ೧೯೨೪ರಲ್ಲಿ “ಸತ್ಯಾಗ್ರಹಿ ಬಸವಣ್ಣ” ಎಂಬ ಹಿಂದಿ ಭಾಷೆಯಲ್ಲಿ ಸಂಶೋಧನಾತ್ಮಕ ಗ್ರಂಥ ಪ್ರಕಟಿಸಿದರು. ಅದನ್ನು ಮಹಾತ್ಮ ಗಾಂಧೀಜಿಗೆ ಕೊಟ್ಟು ಓದಲು ಹೇಳಿ, ಬಸವಣ್ಣನವರ ವ್ಯಕ್ತಿತ್ವವನ್ನು ಪರಿಚಯಿಸಿದರು ಹಾಗೂ ಬಸವಣ್ಣನವರ ಚಳವಳಿಯ ಮಾದರಿಯನ್ನು ಗಾಂಧಿಜಿಗೆ ಮನವರಿಕೆ ಮಾಡಿಕೊಟ್ಟರು. ಅದೇ ವರ್ಷ ಬಸವೇಶ್ವರ ಸೇವಾದಳವನ್ನೂ ಸ್ಥಾಪಿಸಿದರು.
೧೯೨೫ರಲ್ಲಿ ಬಂಥನಾಳದ ಶ್ರೀಸಂಗನಬಸವ ಮಹಾಸ್ವಾಮಿಯೊಂದಿಗೆ ಅಂದಿನ ಅಖಂಡ ವಿಜಯಪುರ ಜಿಲ್ಲೆಯ ಹಳ್ಳಿಗಳಲ್ಲಿ ಸಂಚಾರ ಕೈಗೊಂಡರು. ಅವರೊಂದಿಗೆ ದುಶ್ಚಟಗಳ ನಿರ್ಮೂಲನೆಗಾಗಿ ದೇಶೀ ಚಳುವಳಿ ಹುಟ್ಟು ಹಾಕಿದರು. ೧೯೨೬ರಲ್ಲಿ “ಬಸವ ಬೋಧಾಮೃತ” ಎಂಬ ಗ್ರಂಥ ಪ್ರಕಟಿಸಿದರು. ೧೯೨೭ರಲ್ಲಿ ಕಲ್ಬುರ್ಗಿಯಲ್ಲಿ ಗಾಂಧೀಜಿಯವರನ್ನು ಭೇಟಿಯಾಗಿ ಕೃಷ್ಣಾ ನದಿಯ ತೀರ ಪ್ರದೇಶವಾದ ಆಲಮಟ್ಟಿಯಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪನೆಗೆ ಅನುಮತಿ ಪಡೆದರು. ೧೯೨೮ರಲ್ಲಿ “ಖಾದಿ ವಿಜಯ” ಎಂಬ ಪತ್ರಿಕೆ ಆರಂಭಿಸಿದರು. ೧೯೩೦ ರಲ್ಲಿ “ಉದ್ಯೋಗ” ಎಂಬ ಮತ್ತೊಂದು ಮಾಸ ಪತ್ರಿಕೆ ಆರಂಭಗೊಳಿಸಿದರು.

೧೯೩೧ರಂದ “ಶರಣ ಸಂದೇಶ” ಎಂಬ ನೂತನ ವಾರ ಪತ್ರಿಕೆ ಪ್ರಕಟಿಸಲು ಆರಂಭ ಮಾಡಿದರು. ೧೯೩೩ ರಲ್ಲಿ “ಬಸವ ಸಂದೇಶ”ದ ಚಿಕ್ಕ ಚಿಕ್ಕ ಪುಸ್ತಕಗಳ ೫೦ ಸಾವಿರ ಪ್ರತಿಗಳನ್ನು ಉಚಿತವಾಗಿ ಹಂಚಿದರು. ೧೯೩೫ರಲ್ಲಿ ಸ್ತ್ರೀ ಜಾಗೃತಿಗಾಗಿ ಅಕ್ಕ ಮಹಾದೇವಿ ಜಯಂತಿಯನ್ನು ಆಚರಣೆಗೆ ತಂದರು. ೧೯೩೬ರಲ್ಲಿ ಅವರ ಆತ್ಮ ಚರಿತ್ರೆಯಾದ “ಕಳೆದ ೩೦ ವರ್ಷಗಳ ನನ್ನ ಕಾಣಿಕೆ” ಎಂಬ ಕೃತಿ ಪ್ರಕಟಿಸಿದರು.
೧೯೪೨ರಲ್ಲಿ ಯುದ್ಧದ ಪರಿಣಾಮವಾಗಿ ಮುದ್ರಣ ಕಾಗದದ ಅಭಾವ ಎದಿರಾಗಿತ್ತು. ಅವಾಗ ಎದೆಗುಂದದೆ ಕೈ ಕಾಗದ ತಯ್ಯಾರಿಸಿ “ಶರಣ ಸಂದೇಶ” ಪತ್ರಿಕೆಯ ಪ್ರಕಟಣೆಯನ್ನು ನಿರಂತರವಾಗಿ ಮುಂದುವರೆಸಿದರು. ೧೯೪೫ರಲ್ಲಿ ಪ್ರಗತಿ ಗ್ರಂಥಮಾಲೆ ಯೋಜನೆ ಹಮ್ಮಿಕೊಂಡಿದ್ದರು. ನಂತರ ತಮ್ಮ ೬೦ನೇ ಜನ್ಮ ದಿನದ ಉತ್ಸವ ಸಂದರ್ಭದಲ್ಲಿ “ಪ್ರಗತಿ ಗ್ರಂಥ ಪ್ರಚಾರ ಸಮಿತಿ” ಎಂಬ ಪುಸ್ತಕ ಪ್ರಕಟಣಾ ಸಂಸ್ಥೆಯನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ವಿಧಿಯ ಆಟದಿಂದ ಆ ಯೋಜನೆ ಅಪೂರ್ಣವಾಗಿ ಉಳಿಯಿತು. ಅದಕ್ಕಾಗಿ ಸಂಗ್ರಹಿಸಿದ ನಿಧಿಯನ್ನು ಮುದ್ದೇಬಿಹಾಳದ ಚನ್ನವೀರಪ್ಪ ಮೋಟಗಿ ಅವರಿಗೆ ಹಸ್ತಾಂತರಿಸಿದ್ದರು. ಮೋಟಗಿಯವರು ಆ ನಿಧಿಯನ್ನು ತಮ್ಮ ಪುತ್ರರಾದ ವಿಶ್ವನಾಥ ಚನ್ನವೀರಪ್ಪ ಮೋಟಗಿ ಅವರಿಗೆ ವಹಿಸಿ ನಿಧನರಾದರು. ಬೆಳಗಾವಿಯಲ್ಲಿ ವಕೀಲರಾಗಿದ್ದ ವಿಶ್ವನಾಥರು, ಆ ಹಣವನ್ನು ಠೇವಣಿಯಾಗಿಟ್ಟು ಒಂದು ಲಕ್ಷ ರೂ.ಗಳ ವರೆಗೆ ಹೆಚ್ಚಿಸಿದ್ದರು. ನಂತರ ಬ.ಗಂ. ತುರುಮರಿ ವರಿಗೆ ಒಪ್ಪಿಸಿ ಪ್ರಗತಿ ಗ್ರಂಥ ಪ್ರಚಾರ ಸಂಸ್ಥೆಯ ಮೂಲಕ ಮಂಜಪ್ಪನವರ ಅನೇಕ ಮೌಲಿಕ ಗ್ರಂಥಗಳನ್ನು ಪ್ರಕಟಿಸಿದರು ಎಂಬ ದಾಖಲೆ ಲಭ್ಯವಾಗಿವೆ.

೧೯೪೭ ಜನವರಿ ೩ರಂದು ತಮ್ಮ ೬೦ನೆ ವಯಸ್ಸಿನಲ್ಲಿ ಶ್ರೀಮಾನ್ ಹರ್ಡೇಕರ ಮಂಜಪ್ಪನವರು ಲಿಂಗದಲ್ಲಿ ಆತ್ಮವನ್ನು ಐಕ್ಯಗೊಳಿಸಿ, ಶರೀರದಿಂದ ಬಯಲಾದರು. ಅವರ ಕೊನೆಯ ಸಂದೇಶ, “ಧೀರರಾಗಿರಿ, ಪವಿತ್ರರಾಗಿರಿ, ಸ್ವತಂತ್ರರಾಗಿರಿ” ಎಂದಿತ್ತು. ಅದೇ ವರ್ಷ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿತ್ತು. ಅವರ ಸಾಧನೆ ಹಾಗೂ ವ್ಯಕ್ತಿತ್ವದ ಕುರಿತು ಕುವೆಂಪು, ಬೇಂದ್ರೆ, ಫ.ಗು. ಹಳಕಟ್ಟಿ, ಆಲೂರು ವೆಂಕಟರಾಯರು, ಎಸ್.ಆರ್.ಕ೦ಠಿ, ಸಿದ್ದಯ್ಯ ಪುರಾಣಿಕರು ತುಂಬು ಹೃದಯದಿಂದ ಕೊಂಡಾಡಿದ್ದಾರೆ.


-ಡಾ. ಸತೀಶ ಕೆ. ಇಟಗಿ, ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ-೫೮೬೧೨೯, ತಾ: ಮುದ್ದೇಬಿಹಾಳ,
ಜಿ: ವಿಜಯಪುರ-೫೮೬೧೨೯ (ಕರ್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
Email: satishitagi10@gmail.com,

Latest articles

More like this