ಈ ಸುಂದರ ಸೃಷ್ಟಿಯಲ್ಲಿ ಏನಿಲ್ಲ ಹೇಳಿ? ಬದುಕಿಗೆ ಬೇಕಾದ್ದು ಎಲ್ಲವೂ ಇದೆ. ಕಣ್ಣಿಗೆ ಸುಂದರವಾಗಿ ಕಂಡದ್ದು ಮನಸ್ಸಿಗೆ ತಂಪು ನೀಡಿದ್ದು ಇಷ್ಟಪಟ್ಟಿದ್ದು ಎಲ್ಲವೂ ಬೇಕು. ಅದು ವಸ್ತು ಆಗಿರಬಹುದು ಇಲ್ಲವೇ ವ್ಯಕ್ತಿಯಾಗಿರಬಹುದು. ವ್ಯಕ್ತಿ, ವಸ್ತು ಎಷ್ಟು ಒಳಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಬೇಕು.
ಎಷ್ಟೋ ಸಲ ತುಂಬಾ ಇಷ್ಟಪಟ್ಟು ಆರಿಸಿಕೊಂಡಿದ್ದು, ಬೇಕೇ ಬೇಕೆಂದು ಹಟ ಮಾಡಿ ಪಡೆದದ್ದು ನೋವು ತರಬಹುದು. ದಿನಂಪ್ರತಿ ಬಿಟ್ಟೂ ಬಿಡದೆ ತೊಂದರೆ ಕೊಟ್ಟು ಮಾನಸಿಕ ಹಿಂಸೆಗೂ ಕಾರಣವಾಗಬಹುದು. ಇದನ್ನೇ ಇನ್ನೂ ಸರಳವಾಗಿ ಹೇಳಬೇಕೆಂದರೆ, ಹೊರನೋಟದ ಆಕರ್ಷಣೆಗೆ ಮರಳಾಗಿ ಆಯ್ಕೆ ತಪ್ಪಿದರೆ ಪ್ರಿಯವೆನಿಸಿದ್ದು ಅಹಿತವಾಗುತ್ತದೆ. ಮೇಲ್ನೋಟಕ್ಕೆ ಸವಿಯೆನಿಸಿದ್ದು ಸರಿಯೆನಿಸಿದ್ದು ಕಾಲಾಂತರದಲ್ಲಿ ಪಶ್ಚಾತ್ತಾಪ ಪಡುವಂತೆ ಮಾಡಬಹುದು.
ಮೊದಮೊದಲು ಅಹಿತವೆನಿಸಿದ್ದು ಅಪ್ರಿಯವೆನಿಸಿದ್ದು ನಂತರ ಹಿತ ಮತ್ತು ಪ್ರಿಯವಾದದ್ದು ಎನಿಸಬಹುದು. ನಮಗೆ ಪ್ರಿಯವಾಗುವ ವಸ್ತುವಿನ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಪ್ರಕೃತಿಗಳು ವಿರುದ್ಧವಾಗಿರಬಹುದು. ಹೀಗೆಂದು ತಿಳಿಯಲು ಬಹಳ ಹೊತ್ತು ಹಿಡಿಯುತ್ತದೆ. ಜೀವನ ಎಷ್ಟು ಅಮೂಲ್ಯವಾದದ್ದು ಮತ್ತು ಜೀವನದಲ್ಲಿ ಯಾವುದಕ್ಕೆ ಎಷ್ಟು ಬೆಲೆ ಕೊಡಬೇಕು ಎಂಬುದು ನಮಗೆಲ್ಲ ಗೊತ್ತಿದ್ದರೂ ಅದನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾತ್ರ ಶೂನ್ಯ ಎನಿಸುತ್ತದೆ.
ಮಾಯಾವಿ ಮನಸ್ಸು
ಒಟ್ಟಿನಲ್ಲಿ ಯಾವುದು ಎಷ್ಟು ಸರಿ ಎಂದು ಗೊತ್ತಾಗದೆ ಆಯ್ಕೆಯೇ ತಪ್ಪಾಗಿರಬಹುದು. ಇದರರ್ಥ ದೋಷ ನಮ್ಮ ಆಯ್ಕೆಯಲ್ಲಿದೆ ಅಂತೆನಿಸುತ್ತದೆ. ವಸ್ತು ಮತ್ತು ವ್ಯಕ್ತಿಗಳ ಆಯ್ಕೆಯಲ್ಲಿ ಅದರ ಬೆಲೆ ತಿಳಿಯದೇ ತೆಗೆದುಕೊಂಡರೆ ಇಲ್ಲವೇ ಹತ್ತಿರವಾಗಿಸಿಕೊಂಡರೆ ಸಂತಸದ ಬದಲು ದುಃಖವಾಗುವುದು. ಬದುಕಿನಲ್ಲಿ ನಿಸರ್ಗ ಕೊಡಮಾಮಾಡಿದ ಅದ್ಭುತ ಆನಂದ ಸವಿಯಬೇಕು. ನೈಸರ್ಗಿಕವಾಗಿ ಬದುಕಿ ಸಹಜ ಸಂತಸ ಪಡೆಯುವ ಕಲೆಯನ್ನು ಕಲಿಯಬೇಕು. ಅಂತ ಎಷ್ಟೋ ಸಲ ಬುದ್ಧಿ ಹೇಳುತ್ತದೆ ಆದರೆ ಮಾಯಾವಿ ಮನಸ್ಸು ಕೇಳುವುದಿಲ್ಲ.
ಬುದ್ಧಿವಂತ ಪ್ರಯತ್ನ
ಮತ್ತೆ ವಿಷಯಕ್ಕೆ ಬಂದರೆ ಜಗದಲ್ಲಿರುವ ಎಲ್ಲದಕ್ಕೂ ಒಂದೊಂದು ಬೆಲೆಯಿದೆ. ಇಲ್ಲಿ ಯಾವುದೂ ವ್ಯರ್ಥವಲ್ಲ ಯಾರೂ ನಿಷ್ಪçಯೋಜಕರಲ್ಲ. ಯಾವಾಗ ಯಾವುದರ ಅವಶ್ಯಕತೆ ಬೀಳುತ್ತದೆಯೋ ಗೊತ್ತಿಲ್ಲ. ಅಗತ್ಯ ಬಿದ್ದಾಗಲೇ ಅದರ ಬೆಲೆ ತಿಳಿಯುವುದು. ನಮ್ಮ ಬೆಲೆಯನ್ನು ನಮ್ಮಲ್ಲಿರುವ ಗುಣ ಅವಗುಣಗಳ ಮೇಲೆ ನಿರ್ಧರಿಸಲಾಗುವುದು. ಗುಣದ ಗುಣಮಟ್ಟ ಕಾಯ್ದುಕೊಳ್ಳುವುದು ನಾವು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಅದು ಆಕಸ್ಮಿಕವಾಗಿ ಘಟಿಸುವ ಸಂಗತಿಯೂ ಅಲ್ಲ. ಅದು ಯಾವಾಗಲೂ ಬುದ್ಧಿವಂತ ಪ್ರಯತ್ನದಿಂದ ಮಾತ್ರ ಒದಗಿ ಬರುವಂತಹದು. ಯಾವುದನ್ನು ಚಿನ್ನವೆಂದು ಕೈಗೆತ್ತಿಕೊಳ್ಳುತ್ತೇವೆಯೋ ಅದು ಕೆಲವೊಮ್ಮೆ ಚಿನ್ನವಾಗದೇ ಮಣ್ಣಾಗಬಹುದು. ಇನ್ನೂ ಕೆಲವೊಮ್ಮೆ ನಿಷ್ಪ್ರಯೋಜಕವೆಂದು ತಿಳಿದಿರುವುದು ಬದುಕಿನ ಭಾಗ್ಯವನ್ನೇ ಬದಲಿಸಬಹುದು. ನಿಜ ಮೌಲ್ಯ ಗುರುತಿಸುವುದರಲ್ಲಿ ವ್ಯತ್ಯಾಸವಾದರೆ ಬದುಕು ದುರ್ಬರವಾಗುವುದಂತೂ ಸತ್ಯ.
ವಿವೇಕ
ಮನುಷ್ಯ ತನಗಿಂತ ಬಲಶಾಲಿ ಪ್ರಾಣಿಗಳನ್ನು ಪಳಗಿಸುವುದರಲ್ಲಿ ನಿಸ್ಸೀಮ. ಬೇಕಾದ್ದನ್ನು ಪಡೆಯಲು ಬೆದರಿಕೆ ಹಾಕುವ ಛಾತಿಯೂ ಇದೆ. ಜ್ಞಾನವೂ ಅಗಾಧವಿದೆ. ಭವ್ಯ ಬಂಗಲೆ, ಬಂಗಲೆ ಮುಂದೆ ಉದ್ದನೆಯ ಕಾರು, ನವೀನ ಜೀವನ ಶೈಲಿಯಲ್ಲಿ ಬದುಕುತ್ತ ತಾನೇ ಶ್ರೇಷ್ಠನೆಂಬ ಅಹಂಕಾರವನ್ನು ನಂಬಿ ಮಂಗ ಆಗುತ್ತಿರುವನು. ಜ್ಞಾನದ ಹರವು ಸಾಕಷ್ಟಿದ್ದರೂ ವಿವೇಕದ ಕೊರತೆಯಿಂದ ವಸ್ತು ವ್ಯಕ್ತಿಗಳ ದೋಷ,ನ್ಯೂನತೆ ಮತ್ತು ಬೆಲೆಯನ್ನು ಸರಿಯಾಗಿ ಗ್ರಹಿಸಲಾಗದೇ ತೊಂದರೆ ಅನುಭವಿಸುವಂತಾಗಿದೆ. ಅದಕ್ಕೇ ಹೇಳುವುದು ಜ್ಞಾನಕ್ಕಿಂತ ವಿವೇಕ ಮುಖ್ಯ ಎಂದು. ನಮ್ಮ ಪೂರ್ವಜರು ಹೇಳಿದ ವಿವೇಕಯುತ ಮಾತುಗಳನ್ನು ಪಾಲಿಸಬೇಕು. ನಮ್ಮ ವರ್ತನೆಗಳನ್ನು ಕೂಲಂಕುಷವಾಗಿ ಒರಗೆ ಹಚ್ಚಿ ತಿದ್ದಿಕೊಳ್ಳದ ಹೊರತು ಗುಣ ದೋಷಗಳು ಅರ್ಥವಾಗುವುದಿಲ್ಲ. ನಮ್ಮ ಬಲಾಬಲಗಳನ್ನು ತಿಳಿಯದಿದ್ದರೆ ಇತರರ ಬೆಲೆ ಅರ್ಥ ಮಾಡಿಕೊಳ್ಳುವುದು ತುಸು ಕಷ್ಟವೇ ಸರಿ. ಸರಿ ತಪ್ಪುಗಳ ಬಗೆಗಿನ ವಿವೇಚನೆ ಇಲ್ಲದಿದ್ದರೆ ಬದುಕು ಜಟಿಲ ಸವಾಲೆನಿಸುವುದು. ಜ್ಞಾನವು ಸಾಣೆಕಲ್ಲಿನಲ್ಲಿ ಉಜ್ಜಲ್ಪಟ್ಟಾಗ ಸ್ವಯಂ ಸ್ಪುರಿತವಾಗಿ ವಿವೇಕ ಉಕ್ಕುತ್ತದೆ.
ಬೇಕು-ಬೇಡ
ಬಾಲ್ಯದಲ್ಲಿ ಬಗೆಬಗೆಯ ಆಟಿಕೆಗಳನ್ನು ಇಷ್ಟಪಡುವ. ಅವುಗಳನ್ನು ಪಡೆಯಲು ರಚ್ಚೆ ಹಿಡಿಯುವ ಮಗು ಬೆಳೆದ ಹಾಗೆ ಅವುಗಳ ಬಗ್ಗೆ ಆಸಕ್ತಿ ಕಳೆದುಹೋಗುತ್ತದೆ. ಬೇರೆ ವಸ್ತುಗಳತ್ತ ಗಮನ ಹರಿಸುತ್ತದೆ. ನಾನು ಇಲ್ಲಿ ಹೇಳ ಹೊರಟಿದ್ದು ನಮ್ಮ ಆಸಕ್ತಿಯ ವಿಷಯ ವಸ್ತು ವ್ಯಕ್ತಿಗಳು ಬದಲಾಗುತ್ತಿರುತ್ತವೆ ಎಂದು. ಬೇಕಾದ ವಸ್ತುಗಳನ್ನು ವ್ಯಕ್ತಿಗಳನ್ನು ದೂರ ಸರಿಸಿದ ಮೇಲೆ ಅವುಗಳಿಗೆ ನಾವು ಕೊಡುವ ಬೆಲೆಯೂ ಅಷ್ಟಕ್ಕಷ್ಟೇ ಅಲ್ಲವೇ? ಅಂದರೆ ಇಂದು ಬೇಕಾಗಿದ್ದು ತುಂಬಾ ಬೆಲೆಯುಳ್ಳದ್ದು ಅಂತ ತಿಳಿದು ಜತನದಿಂದ ಕಾಪಾಡಿದ್ದು ನಾಳೆ ಬೇಡವಾಗುತ್ತದೆ. ಕಸದ ಡಬ್ಬಿಯನ್ನು ಸೇರುತ್ತದೆ. ಇಂದು ಬೇಡವಾಗಿದ್ದು ಬೆಲೆಯಿಲ್ಲ ಎನಿಸಿದ್ದು. ನಾಳೆ ಬೇಕಾಗುತ್ತದೆ. ಮೌಲ್ಯಯುತವಾದದ್ದು ಎನಿಸುತ್ತದೆ. ಇದರರ್ಥ ಇಷ್ಟೇ. ಪ್ರತಿಯೊಂದು ವಸ್ತು ವ್ಯಕ್ತಿಗೂ ತನ್ನದೇ ಆದ ಬೆಲೆಯಿದೆ. ಬೇಕಾದಾಗ ಮಾತ್ರ ಅದರ ಸರಿಯಾದ ಬೆಲೆ ತಿಳಿಯುತ್ತದೆ. ನಮಗೆ ಬೇಕೇ ಬೇಕು ಎನಿಸಿದಾಗ ಅದಕ್ಕೆ ಇರುವುದಕ್ಕಿಂತ ಹೆಚ್ಚು ಬೆಲೆ ತೆರುತ್ತೇವೆ.
ಅಮೂಲ್ಯ ಜೀವ
ಸರಿಯಾದ ಸಮಯದಲ್ಲಿ ವ್ಯಕ್ತಿ ವಸ್ತುಗಳ ಬೆಲೆ ತಿಳಿಯದೇ ಅವುಗಳನ್ನು ಗೌಣವಾಗಿ ಕಾಣುತ್ತೇವೆ. ಮನೆಯ ಹಿರಿಯರು ಹೆತ್ತವರು ಪೊರೆದವರು ಸಾಕಿಸಲುಹಿದವರನ್ನು ಹಗುರವಾಗಿ ಕಾಣುತ್ತೇವೆ. ಅಂದು ಇಂದು ಎಂದೆAದಿಗೂ ನಮ್ಮೊಂದಿಗೆ ಇರುತ್ತಾರೆಂದು ಅವರಿಗೆ ಬೆಲೆ ಕೊಡುವುದೇ ಇಲ್ಲ. ಮೆಚ್ಚಿ ಬಾಚಿಕೊಂಡವರು ಕೈ ಬಿಟ್ಟು ಹೋದಾಗ, ಚೆಲುವಾದ ಒಲವೊಂದು ಕೈ ಬೀಸಿ ನಡೆದಾಗ ಅವರು ನೆನಪಿಗೆ ಬರುತ್ತಾರೆ. ಕಳೆದುಕೊಂಡ ನಂತರ ನೋವು ಚಿಮ್ಮುವ ಕಾಲದಲ್ಲಿ ಕಣ್ಣೀರಿಡುತ್ತ ಹುಡುಕುತ್ತೇವೆ. ಅಮೂಲ್ಯ ಜೀವಗಳನ್ನು ಕಳೆದುಕೊಂಡ ಜೀವ ಬಡವಾಗುತ್ತದೆ. ಸಾವು ನೋವಿನ ಜಾತ್ರೆಯಲ್ಲಿ ತನ್ನ ಬೆಲೆಯನ್ನು ತಾನು ತಿಳಿಯದೇ ಕತ್ತಲಲ್ಲಿ ಕಣ್ಣು ಮುಚ್ಚುತ್ತದೆ. ಸಾಯಲಾರದ ಮನಸ್ಸಿನಿಂದ ಸತ್ತು ಮಣ್ಣು ಮುಚ್ಚಿಸಿಕೊಳ್ಳುತ್ತದೆ. ಎಲ್ಲಕ್ಕೂ ಬೆಲೆ ಕಟ್ಟುವ ಜೀವ, ಜೀವನದ ಬೆಲೆ ಗೊತ್ತಾಗದೇ ಮಣ್ಣು ಸೇರುತ್ತದೆ!
ಪ್ರೀತಿ-ಬಾಂಧವ್ಯ
ಮನುಷ್ಯನಿಗೆ ಎಲ್ಲ ರೀತಿಯ ಸುಖಗಳು ಸಂಪತ್ತು ಇದ್ದರೂ ಉಸಿರು ಇಲ್ಲದಿದ್ದರೆ ಎಲ್ಲವೂ ವ್ಯರ್ಥ. ಈ ಅಪರೂಪದ ಮಾನವ ಜನ್ಮವನ್ನು ಸರಿಯಾಗಿ ನಿರ್ವಹಿಸದಿದ್ದರೆ, ಅದರ ಮೌಲ್ಯವನ್ನು ತಿಳಿದುಕೊಳ್ಳದಿದ್ದರೆ, ಅರ್ಥಪೂರ್ಣ ಉದ್ದೇಶಪೂರ್ವಕ ರೀತಿಯಲ್ಲಿ ಬದುಕದಿದ್ದರೆ ಇದಕ್ಕಿಂತ ದೊಡ್ಡ ನಷ್ಟ ವಿನಾಶ ಮತ್ತೊಂದಿಲ್ಲ. ಈ ಜೀವನವು ನಾವು ಅರ್ಥ ಮಾಡಿಕೊಂಡಷ್ಟು ಅಗ್ಗವಲ್ಲ. ಜಗತ್ತಿನಲ್ಲಿ ಎಲ್ಲವೂ ಹೆಚ್ಚುತ್ತಿದೆ ಆದರೆ ನಿಜವಾದ ಸಂತೋಷ, ತೃಪ್ತಿ, ಪ್ರೀತಿ, ಬಾಂಧವ್ಯ ಮಾನವೀಯತೆಯ ಬೆಲೆ ಕಡಿಮೆಯಾಗುತ್ತಿದೆ. ಈ ದಿಕ್ಕಿನಲ್ಲಿ ಯೋಚಿಸಿ ಕಾರ್ಯ ರೂಪಕ್ಕೆ ಇಳಿದಾಗ ಮಾತ್ರ ಬೆಲೆ ಕಟ್ಟಲಾಗದ ಜೀವನ ನಿರ್ಮಾಣ ಸಾಧ್ಯ.
ಕೊಡುಗೆ
ದೈವಸೃಷ್ಟಿಯ ಬೆಲೆ ಆರಂಭದಲ್ಲಿ ತಿಳಿಯದೇ ಇರಬಹುದು ಆದರೆ ವಿವೇಕದ ಕಣ್ಣುಗಳನ್ನು ತೆರೆದ ದಿನದಂದು ದೇವ ನಿರ್ಮಿತ ಎಲ್ಲ ವಸ್ತುಗಳ ಬೆಲೆ ಅನುಭವಕ್ಕೆ ಬರುತ್ತದೆ. ಇತರೆ ಯಾವುದೇ ಸಾಧನೆಯಂತೆ ವಸ್ತು ವ್ಯಕ್ತಿಗಳ ಬೆಲೆ ತಿಳಿಯುವುದು ಒಂದು ಸಾಧನೆ. ದೇವರು ನೀಡಿದ ಜೀವನದ ಬೆಲೆ ಅರಿಯದೇ ಬದುಕಿನ ಅರಮನೆಯನ್ನು ಸೆರೆಮನೆಯಾಗಿಸಿದ್ದೇವೆ. ಚಂದ್ರನೆದೆ ಮುಟ್ಟುವಷ್ಟು ಕನಸುಗಳನ್ನು ಕಂಗಳಲ್ಲಿ ತುಂಬಿಕೊAಡು, ಬಳಿಯಿರುವುದಕ್ಕೆಲ್ಲ ಬೆಲೆ ಕೊಡದೆ, ಇರುವುದನ್ನೆಲ್ಲ ಗೆದ್ದಲು ಹುಳುವಿನ ನಾಲಿಗೆ ಮೇಲಿಟ್ಟು ಕಾಣದ್ದನ್ನು ಕಾಣದ ಬೆಳಕಿನಲ್ಲಿ ಹುಡುಕಾಡುತ್ತೇವೆ. ಹೀಗೆ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಹಾಕಿಕೊಳ್ಳಬೇಕು. ಕತ್ತಲೆಯ ದಾರಿಯಲ್ಲಿ ವಿವೇಕದ ಕೈ ದೀಪ ಬಳಸಬೇಕಿದೆ, ಭಾವರೆಕ್ಕೆಯ ಬಿಚ್ಚಿ ಹಾರಾಡುವ ಹುಚ್ಚಿನಲ್ಲಿ ಕಣ್ಣು ಕಿವಿ ಮನ ಬುದ್ಧಿಗಳನ್ನು ಬಳಸಬೇಕಿದೆ. ಮಾನವ ಜೀವನ ದೇವರ ಅಮೂಲ್ಯ ಕೊಡುಗೆ. ಜಗತ್ತಿನಲ್ಲಿ ಇದಕ್ಕಿಂತ ಅಮೂಲ್ಯವಾದದ್ದು ಯಾವುದೂ ಇಲ್ಲ. ನಮ್ಮ ಅರ್ಥಪೂರ್ಣ ಜೀವನವೇ ನಾವು ದೇವರಿಗೆ ನೀಡುವ ಕೊಡುಗೆ.
=======================================

ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨