Homeಲೇಖನಲೇಖನ : ಅಲ್ಲಮರ ವೈರಾಗ್ಯದ ಗುರುವಾಗಿ ಅನಿಮಿಷಯೋಗಿ

ಲೇಖನ : ಅಲ್ಲಮರ ವೈರಾಗ್ಯದ ಗುರುವಾಗಿ ಅನಿಮಿಷಯೋಗಿ

Published on

ಸಿಂಗಿರಾಜನ “ಬಸವರಾಜ ಚರಿತ್ರೆ” ಮತ್ತು ಮುರುಗಿ ದೇಶಿಕೇಂದ್ರನ ಹಮ್ಮೀರ ಕಾವ್ಯಗಳಲ್ಲಿ ಅನಿಮಿಷನು ಪಟ್ಟದಕಲ್ಲಿನ ಚಾಲುಕ್ಯರಾಜನ ವಂಶದವನೆಂದು ಹೇಳಲಾಗಿದೆ. ಅನಿಮಿಷನ ತಂದೆಯ ಹೆಸರನ್ನು ತ್ರೈಲೋಕ್ಯ ಚೂಡಾಮಣಿ ಹಾಗೂ ತಾಯಿಯನ್ನು ಮಹರ‍್ಲೋಕೆ ಎಂದು ಹೆಸರಿಸಲಾಗಿದೆ ಹಾಗೂ ಅವನ ಬಾಲ್ಯದ ಹೆಸರು ವಸುಧೀಶನೆಂದೂ ನಮೂದಿಸಿದೆ.

೧೨ನೆ ಶತಮಾನದ ವಿಶ್ವಗುರು ಬಸವಣ್ಣನವರ ಕಾಲದಲ್ಲಿ ಜೀವಿಸಿದ ಅನಿಮಿಷ (ವಸುಧೀಶ), ಅವನ ತಾಯಿ ಪಟ್ಟದಕಲ್ಲಿನ ಲೋಕನಾಥನನ್ನು ಆರಾಧಿಸುತ್ತಿದ್ದಳೆಂದು ಹಮ್ಮೀರ ಕಾವ್ಯದಿಂದ ತಿಳಿಯಬಹುದಾಗಿದೆ. ಆ ರಾಜ್ಯವು ಮಲಪ್ರಭಾ ನದಿಯ ಸುತ್ತಲೂ ಆವರಿಸಿತ್ತು. ಕೃಷ್ಣಾ ನದಿಯ ತೀರದ ಕಪ್ಪಡಿ ಕ್ಷೇತ್ರವನ್ನೂ ಒಳಗೊಂಡಿತ್ತು. ಐತಿಹಾಸಿಕ ವಸುಧೀಶ (ಅನಿಮಿಷ) ನು ಬಸವಣ್ಣನವರ ಸಮಕಾಲೀನವನಾಗಿದ್ದನು.

ಅಂದಿನ ಅಖಂಡ ವಿಜಯಪುರ ಜಿಲ್ಲೆಯ ಬದಾಮಿ ತಾಲೂಕಿನ ಮಲಪ್ರಭಾ ನದಿಯ ದಂಡೆಯ ಮೇಲಿರುವ ಪಟ್ಟದಕಲ್ಲು ವಸುಧೀಶ (ಅನಿಮಿಷ) ನು ಹುಟ್ಟಿ ಬೆಳೆದ ಊರು. ಆ ಊರಿನಿಂದ ೨೫-೩೦ ಮೈಲುಗಳ ದೂರ ಇರುವುದೇ ಕಪ್ಪಡಿ ಕ್ಷೇತ್ರ. ಅಲ್ಲಿ ಬಸವಣ್ಣವರು ತಮ್ಮ ಸಾಧನೆಯಲ್ಲಿ ಆತ್ಮ ಸಾಕ್ಷಾತ್ಕಾರ ಪಡೆದ ನಂತರವೇ ಅಲ್ಲಿಂದ ತೆರಳಿದ್ದಾರೆ. ಅಲ್ಲಿರುವಾಗಲೆ ವಸುಧೀಶ (ಅನಿಮಿಷ) ನು ಅವರಿಂದ ಲಿಂಗದೀಕ್ಷೆ ಪಡೆದನೆಂದು ಹೇಳಲಾಗುತ್ತಿದೆ. ತದನಂತರ ಕೆಲವು ಕಾಲದವರೆಗೆ ಪಟ್ಟದಕಲ್ಲಿನಲ್ಲಿ ಉಳಿದು ಲಿಂಗಾನುಸಂಧಾನದಲ್ಲಿ ತಕ್ಕ ಮಟ್ಟಿಗೆ ಪ್ರಗತಿಯನ್ನು ಸಾಧಿಸಿದ ಬಳಿಕ ಈಗಿನ ಶಿವಮೊಗ್ಗಾ ಜಿಲ್ಲೆಯ ಬಳ್ಳಿಗಾವಿಯ ಪ್ರದೇಶಕ್ಕೆ ತೆರಳಿ, ಅನಿಮಿಷನ ಕೊಪ್ಪಲು ಎಂದೇ ಈಗಲೂ ಕರೆಯಲ್ಪಡುವ ತಾಣದಲ್ಲಿ ಶಿವಯೋಗಾನು ಸಂಧಾನದಲ್ಲಿದ್ದನೆಂದು ತಿಳಿದುಬರುತ್ತದೆ. ಅದೇ ಬಳ್ಳಿಗಾವಿ ಪ್ರದೇಶವು ಅಲ್ಲಮ ಪ್ರಭುದೇವನ ಹುಟ್ಟೂರಾಗಿತ್ತು. ಸ್ವತಃ ಅಲ್ಲಮ ಪ್ರಭುಗಳು ತಮ್ಮ ವಚನವೊಂದರಲ್ಲಿ ಅನಿಮಿಷನ ಕುರಿತು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ;

“ಆದಿಯ ಲಿಂಗವ ತೋರಿದ ಅನಿಮಿಷನ ಕಂಡೆನಯ್ಯಾ,
ಕೃತಯುಗದಲ್ಲಿ ಸ್ಕಂದನೆoಬ ಗಣೇಶ್ವರನ ಕಂಡೆನಯ್ಯಾ/
ತ್ರೇತಾಯುಗದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಕಂಡೆನಯ್ಯಾ,
ದ್ವಾಪರಯುಗದಲ್ಲಿ ವೃಷಭನೆಂಬ ಗಣೇಶ್ವರನ ಕಂಡೆನಯ್ಯಾ/
ಇಂದು ಅನಿಮಿಷ ಬಸವನೆಂಬ ಗಣೇಶ್ವರರನ್ನು ಕಂಡೆನಯ್ಯಾ,
ಎನ್ನ ಕಂಡವರನು, ನಿನ್ನ ಕಂಡವರನು ಇಂದು ಕಂಡೆ ಕಾಣಾ ಗುಹೇಶ್ವರಾ /

“ಸದ್ಧರ್ಮ ದೀಪಿಕೆ” ಎಂಬ ಮಾಸಪತ್ರಿಕೆಯ ಸಂಪಾದಕರಾಗಿದ್ದ ಲಿಂಗೈಕ್ಯ ಶ್ರೀಚನ್ನಮಲ್ಲಿಕಾರ‍್ಜುನಪ್ಪನವರು ದೀರ‍್ಘ ಐತಿಹಾಸಿಕ ಸಂಶೋಧನೆಯ ನಂತರ ಪ್ರಕಟಿಸಿದ “ಬಸವೇಶ್ವರನ ಕಾಲ” ಎಂಬ ಗ್ರಂಥದಲ್ಲಿ ಬಸವಣ್ಣನವರು ಬನವಾಸಿಯ ಸಮೀಪದ ಬಳ್ಳಿಗಾವಿಯಲ್ಲಿ ಕೆಲ ದಿಗಳವರೆಗೆ ತಂಗಿದ್ದರೆoಬ ಸಗತಿಯನ್ನು ಬೆಳಕಿಗೆ ತಂದಿದ್ದಾರೆ. ಅಂದರೆ ಅವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾದ ಬಳಿಕ ರಾಜಧರ‍್ಮದ ಕಾರ‍್ಯ ನಿಮಿತ್ತ ಬಳ್ಳಿಗಾವಿಗೆ ತೆರಳಿದ್ದರು ಎಂಬುದು ಸ್ಪಷ್ಟವಾಗುತ್ತದೆ ಹಾಗೂ ಬಿಜ್ಜಳನ ಸಾಮ್ರಾಜ್ಯ ಅಲ್ಲಿಯವರೆಗೆ ವಿಸ್ತರಿಸಿತ್ತು ಎಂದೂ ತಿಳಿಯುತ್ತದೆ.

ಅರಸು ಸುಪತ್ತಿಗೆಯಲ್ಲಿದ್ದರೂ ವಸುಧೀಶನು ನಿತ್ಯ ಶಿವಪೂಜೆ ಇಲ್ಲದೆ ಅನ್ನ ನೀರು ಸೇವಿಸುತ್ತಿರಲಿಲ್ಲ. ಒಮ್ಮೆ ಸಂಚಾರಕ್ಕೆ ಹೋದಾಗ ಶ್ವೇತಾಶ್ವವನ್ನೇರಿ ಸಾಗುತ್ತಿದ್ದ ಬಸವಣ್ಣನವರನ್ನು ಗಮನಿಸಿ ಕಳವಳಗೊಂಡನು. ವಸುಧೀಶನ ನೋಡಿದ ಬಸವಣ್ಣನವರು ತಮ್ಮಲ್ಲಿದ್ದ ಇಷ್ಟಲಿಂಗವನ್ನೇ ನೀಡಿದರಂತೆ. ಅದನ್ನು ಪೂಜಿಸಿದ ಬಳಿಕವೇ ಪ್ರಸಾದ ಸ್ವೀಕರಿಸಲು ಹೇಳಿ ಹೋದರೆಂದು ಕೆಲವು ಸಾಹಿತ್ಯ ಮೂಲಗಳಿಂದ ತಿಳಿಯಬಹುದಾಗಿದೆ.

ಒಂದೊಮ್ಮೆ ವಸುಧೀಶನು ಕಟ್ಟಿದ ಕುದುರೆ ತಪ್ಪಿಸಿಕೊಂಡು ಓಡಿ ಹೋಗುತ್ತದೆ. ಅದು ಮರಳಿ ಸಿಗದೆ ನಿರಾಶೆಗೊಳಿಸುತ್ತದೆ. ಇದನ್ನರಿತ ವಸುಧೀಶ ಅರಸುತನದ ಸುಪ್ಪತ್ತಿಗೆ ಶಾಶ್ವತವಲ್ಲ. ಒಂದಿನ ಕುದುರೆ ಓಡಿ ಹೋದಂತೆ ನಮ್ಮಿಂದ ಮಾಯವಾಗುತ್ತದೆ ಎಂದು ತಿಳಿದು ವೈರಾಗ್ಯ ಹೊಂದಲು ನಿರ‍್ಧರಿಸುತ್ತಾರೆ. ಬಸವಣ್ಣನವರಿಂದ ದಯಪಾಲಿಸಿದ ಇಷ್ಟಲಿಂಗ ಪೂಜೆಯಲ್ಲಿ ಸಂತೃಪ್ತಿ ಕಾಣಲಾರಂಬಿಸಿದ ಎಂದೂ ಹೇಳಲಾಗುತ್ತದೆ. ಅದಕ್ಕೆ ಅಲ್ಲಮಪ್ರಭು ತಮ್ಮ ಗುರುವಿನ ಗುರು ಶ್ರೇಷ್ಠ ಗುರು ಎಂಬ ಅರ‍್ಥದಲ್ಲಿ ಸಂಬೋಧಿಸಿ ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ;

“ಗುರುವಿನ ಪ್ರಾಣ, ಲಿಂಗದಲ್ಲಿ ಲೀನವಾದ ಬಳಿಕ,
ಆ ಲಿಂಗವೆನ್ನ ಕರಸ್ಥಲಕ್ಕೆ ಬಂದಿತ್ತು ನೋಡಾ/
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು, ಎನ್ನ ಕರಸ್ಥಲದಲ್ಲಿ.
ಇದ್ದಾನೆ ನೋಡಾ ಎನ್ನ ಗುರು ಅನಿಮಿಷನು ಎನ್ನ ಜ್ಞಾನದೊಳಗೆ/
ಎನ್ನ ಗುರುವಿನ ಗುರು ಬಸವಣ್ಣ ಎನ್ನ ಕಂಗಳ ಮುಂದೆ,
ಗುರು ದ್ರೋಹವಿಲ್ಲ ಕಾಣಾ ಗುಹೇಶ್ವರ”/

ಈ ವಚನದಲ್ಲಿ ಅಲ್ಲಮನ ಗುರುವಾದ ಅನಿಮಿಷರಿಗೆ ಬಸವಣ್ಣ ಲಿಂಗವಿತ್ತಿದ್ದರ ಬಗ್ಗೆ ಸ್ಪಷ್ಟವಾಗುತ್ತದೆ. ಹೀಗಾಗಿ ಬಸವಣ್ಣನು ಗುರುವಿನ ಗುರುವಾಗಿದ್ದರೆಂಬುದು ತಿಳಿದುಬರುತ್ತದೆ. ಇನ್ನೊಂದಡೆ ಸ್ವತಃ ಬಸವಣ್ಣನವರು ಹೀಗೆ ಹೇಳಿದ್ದಾರೆ, “ಎನ್ನ ಕರಸ್ಥಲದ ಲಿಂಗವ ಅನಿಮಿಷ ಕೊಂಡನು/ ಅನಿಮಿಷರ ಕರಸ್ಥಲದ ಲಿಂಗವ ನೀವು ಕೊಂಡಿರಿ/ ಎಂದು ಅಲ್ಲಮಪ್ರಭುದೇವರಿಗೆ ಹೇಳಿದ್ದಾರೆ. ಅಲ್ಲದೆ ಅವಿರಳ ಜ್ಞಾನಿಯೆನಿಸಿದ ಚನ್ನಬಸವಣ್ಣನವರೂ ಸಹ ಅಲ್ಲಮಪ್ರಭುವಿನೊಂದಿಗೆ ಲಿಂಗ ಕಾರುಣ್ಯ ಪೂರೈಸಿದ ಗುರುವಿನ ಕುರಿತು ಚರ‍್ಚಿಸುವಾಗ ಈ ರೀತಿ ವಾದಿಸಿದ್ದಾರೆ;

“ಗುರುವಿಲ್ಲದ ಲಿಂಗ ನಿನಗೆಲ್ಲಿದಯ್ಯಾ?
ಕೊಂದೆ ನಿಮ್ಮಯ್ಯನ, ಕೊಂಡೆ ಲಿಂಗವನು/
ಅಂದು ನಿನಗೆ ಅನಿಮಿಷ ಗುರುವಾದುದನರಿಯ/
ಕೂಡಲ ಚನ್ನಸಂಗಯ್ಯನಲ್ಲಿ ಮುಲೋಕವರಿಯೆ ಅಲ್ಲಮ ವೃತಗೇಡಿ”/
(ಶೂನ್ಯ ಸಂಪಾದನೆ; ಪುಟ.೧೬೦, ವಚನ ಸಂಖ್ಯೆ:೬೫)

ಈ ವಚನದಲ್ಲಿ ಅಲ್ಲಮರಿಗೆ ಗುರು ಇಲ್ಲದೆ ನಿನಗೆ ಲಿಂಗ ದೊರೆತಿಲ್ಲ. ಗುರು ಕಾರುಣ್ಯವ ಮಾಡಿದ ಗುರುವರ‍್ಯ ನಿನಗೆ ಇದ್ದ. ಆ ಗುರುವಿನ ನಿಜವಾದ ಹೆಸರನ್ನು ನೀ ಕೊಂದೆ. ಆ ಹೆಸರನ್ನು ಮರೆಮಾಡಿದ್ದಿಯಾ. ಲಿಂಗ ಕಾರುಣ್ಯ ದಯಪಾಲಿಸಿದ ಸ್ವತಃ ನಿನ್ನ ಗುರುವಾಗಿದ್ದ ಅನಿಮಿಷ ಎಂಬುದನ್ನು ನೀ ಅರಿಯೇ ಎಂದು ಅರುಹಿದ್ದಾರೆ.

ಅಂಗೈಯಲ್ಲಿ ಲಿಂಗವ ಹಿಡಿದು ನೇರ ದೃಷ್ಠಿಯನ್ನಿಟ್ಟು ಚಿತ್ತ ಮತ್ತು ಪ್ರಾಣ ಸಮರಸವಾಗಿ ನಿರೀಕ್ಷಿಸಿ ಶಿವಯೋಗದಲ್ಲಿ ತಲ್ಲೀನವಾದ ಕಾರಣ ವಸುಧೀಶರಿಗೆ ಅನಿಮಿಷಯ್ಯನೆಂದು ಕರೆಯಲಾಯಿತು. ಕ್ರಮೇಣ ವೈರಾಗ್ಯ ತಾಳಿ, ಅನೇಕ ವರ‍್ಷಗಳವೆರೆಗೆ ಗುಹೆಯಲ್ಲಿ ನೆಲೆಸಲು ಆರಂಭಿಸುತ್ತಾರೆ. ಅವರಿದ್ದ ಗುಹೆಗೆ ಬಂದ ಅಲ್ಲಮನು ಗೊಗ್ಗಯ್ಯರಿಂದ ಅವರನ್ನು ತಿಳಿದು ಗುಹೆ ಪ್ರವೇಶಿಸಿ, ಅನಿಮಷಯೋಗಿಯ ಕಂಡು ಹೀಗೆ ಹೇಳುತ್ತಾರೆ;

“ಕಾಣ ಬಾರದ ಗುರುಕಣ್ಣಿಗೆ ಗೋಚರವಾದಡೆ
ಹೇಳಲಿಲ್ಲದ ಬಿನ್ನಪ,
ಮುಟ್ಟಲಿಲ್ಲದ ಹಸ್ತಮಸ್ತಕದ ಸಂಯೋಗ,
ಹೂಸಲಿಲ್ಲದ ವಿಭೂತಿಯ ಪಟ್ಟ,
ಕೇಳಲಿಲ್ಲದ ಕರ್ಣ ಮಂತ್ರ.
ತುಂಬಿ ತುಳಕದ ಕಲಶಾಭೀಷೇಕ,
ಆಗಮವಿಲ್ಲದ ದೀಕ್ಷೆ, ಪೂಜೆಗೆ ಬಾರದ ಲಿಂಗ,
ಸoಗವಿಲ್ಲದ ಸಂಬoಧ. ಸ್ವಯವಪ್ಪ ಅನುಗ್ರಹ,
ಅನುಗೊಂಬoತೆ ಮಾಡಾ ಗುಹೇಶ್ವರ”.

ಪ್ರಭುದೇವರು ತನ್ನ ಗುರುವಾದ ಅನಿಮಿಷಯೋಗಿಯಿಂದ ಗುಹೆಯೊಳಗೆ ಲಿಂಗವ ಪಡೆದದ್ದರಿಂದ ಆ ಲಿಂಗಕ್ಕೆ ಗುಹೆಯ ಈಶ್ವರ, ಗುಹೇಶ್ವರವೆಂದು ಹೆಸರಿಟ್ಟು, ತಮ್ಮ ವಚನಾಂಕಿತವನ್ನಾಗಿಸಿಕೊoಡರು.

-ಡಾ. ಸತೀಶ ಕೆ. ಇಟಗಿ, ಪತ್ರಿಕೋದ್ಯಮ ಉಪನ್ಯಾಸಕ
ಅಂಚೆ: ಕೋಳೂರ-೫೮೬೧೨೯, ತಾ: ಮುದ್ದೇಬಿಹಾಳ,
ಜಿ: ವಿಜಯಪುರ-೫೮೬೧೨೯ (ರ‍್ನಾಟಕ ರಾಜ್ಯ)
ಮೊ: ೯೨೪೧೨೮೬೪೨೨
ಈಮೇಲ್ – satishitagi10@gmail.com

Latest articles

More like this