HomeUncategorizedರಂಗ ಪ್ರಯೋಗ : ವ್ಯಂಗ್ಯ, ಹಾಸ್ಯ, ಸಾಮಾಜಿಕ ನಾಟಕ, ಲೋಕಾಯುಕ್ತರು ಬರುತ್ತಾರೆ !

ರಂಗ ಪ್ರಯೋಗ : ವ್ಯಂಗ್ಯ, ಹಾಸ್ಯ, ಸಾಮಾಜಿಕ ನಾಟಕ, ಲೋಕಾಯುಕ್ತರು ಬರುತ್ತಾರೆ !

Published on

ಹಾಸನದ ನಾಟ್ಯ ವೈಭವ, ರಂಗಸಿರಿ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ 3 ದಿನಗಳ ಕಾಲೇಜು ರಂಗೋತ್ಸವದಲ್ಲಿ 2ನೇ ದಿನ ಬುಧವಾರ ಬೆಳಿಗ್ಗೆ ಪ್ರದರ್ಶಿಸಿದ ನಾಟಕ ‘ಲೋಕಾಯುಕ್ತರು ಬರುತ್ತಾರೆ’. ಪ್ರಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ. ಮೂಲ: ನಿಕೊಲಾಯ್ ಗೊಗೊಲ್. ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ಅವರದು.

ಲೋಕಾಯುಕ್ತರು ಬರುತ್ತಾರೆ ನಾಟಕವು ವ್ಯಂಗ್ಯ, ಹಾಸ್ಯ ಮತ್ತು ಸಾಮಾಜಿಕ ಸತ್ಯಗಳ ಸಮನ್ವಯದಲ್ಲಿ ಮೂಡಿ ಬಂದ ಒಂದು ಶಕ್ತಿಯುತ ರಂಗಕೃತಿ. ಇದು ಮೂಲತಃ The Government Inspector ಎಂಬ ಪ್ರಸಿದ್ಧ ನಾಟಕದಿಂದ ಪ್ರೇರಿತವಾಗಿದ್ದು, Nikolai Gogol ಅವರ ಕೃತಿಯ ಆತ್ಮವನ್ನು ಕನ್ನಡದ ನೆಲದ ಸನ್ನಿವೇಶಕ್ಕೆ ತಂದು, ಧನಂಜಯ ದಿಯಾನ್ ಅವರು ಹೊಸ ಅರ್ಥಭರಿತ ರೂಪದಲ್ಲಿ ಮರು ಸೃಷ್ಟಿಸಿದ್ದಾರೆ.
ಈ ನಾಟಕದ ಕೇಂದ್ರದಲ್ಲಿ ಇರುವ ವಿಷಯ ಭಯ!
ಆದರೆ ಅದು ಸಾಮಾನ್ಯ ಭಯವಲ್ಲ. ಅದು ಅಧಿಕಾರಿಗಳ ಅಂತರಂಗದಲ್ಲಿರುವ ಅಪರಾಧ ಭಾವನೆಯ ಭಯ. ಲೋಕಾಯುಕ್ತರು ಬರುತ್ತಾರೆ ಎಂಬ ಒಂದು ವದಂತಿ ಮಾತ್ರವೇ ಸಂಪೂರ್ಣ ವ್ಯವಸ್ಥೆಯನ್ನು ನಡುಗಿಸುತ್ತದೆ. ಈ ಕಲ್ಪನೆ ನಾಟಕದ ಹೃದಯವಾಗಿದ್ದು, ಅಧಿಕಾರದ ಅಹಂಕಾರ, ಭ್ರಷ್ಟಾಚಾರ ಮತ್ತು ಸುಳ್ಳಿನ ಮೇಲೆ ಕಟ್ಟಿದ ವ್ಯವಸ್ಥೆಯ ದುರ್ಬಲತೆಯನ್ನು ಬಯಲಿಗೆಳೆಯುತ್ತದೆ.

ನಾಟಕದಲ್ಲಿ ಪಟ್ಟಣದ ಮೇಯರ್ ಹಾಗೂ ಇತರೆ ಅಧಿಕಾರಿಗಳು ತಮ್ಮ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ತೊಡಗುತ್ತಾರೆ. ಯಾರೂ ನೇರವಾಗಿ ಸತ್ಯವನ್ನು ಎದುರಿಸಲು ಸಿದ್ಧರಿರುವುದಿಲ್ಲ. ಆದರೆ ನಿಜವಾದ ಲೋಕಾಯುಕ್ತರು ಬಂದಿರಲಿ ಇಲ್ಲದಿರಲಿ ಅವರ ಭಯವೇ ಅವರನ್ನು ಒಳಗಿನಿಂದ ಒಡೆದುಹಾಕುತ್ತದೆ. ಇದು ಈ ನಾಟಕದ ಅತ್ಯಂತ ಪರಿಣಾಮಕಾರಿ ವ್ಯಂಗ್ಯ ವಿಡಂಬನೆ.
ಧನಂಜಯ ದಿಯಾನ್ ಅವರ ರೂಪಾಂತರದಲ್ಲಿ ಈ ಕಥೆ ಕೇವಲ ಒಂದು ಆಡಳಿತ ವ್ಯವಸ್ಥೆಯ ವಿಮರ್ಶೆಯಾಗಿ ಉಳಿಯುವುದಿಲ್ಲ. ಅದು ಸಮಗ್ರ ಸಮಾಜದ ಪ್ರತಿಬಿಂಬವಾಗುತ್ತದೆ. ಲೋಕಾಯುಕ್ತರು ಇಲ್ಲಿ ಕೇವಲ ಒಂದು ಸಂಸ್ಥೆಯ ಹೆಸರು ಅಲ್ಲ.
ಅದು ನಮ್ಮೊಳಗಿನ ಅಂತಃಕರಣ,
ನಮ್ಮ ಪ್ರಜ್ಞೆ,
ನಮ್ಮ ಸತ್ಯದ ಕಣ್ಣು.

ಈ ನಾಟಕದ ಇನ್ನೊಂದು ವೈಶಿಷ್ಟ್ಯ ಎಂದರೆ ಇದನ್ನು ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ ನಿರ್ದೇಶಕರು. ಸಾಮಾನ್ಯವಾಗಿ ಪುರುಷ ಪ್ರಧಾನವಾಗಿರುವ ಪಾತ್ರಗಳನ್ನು ಇಲ್ಲಿ ಮಹಿಳಾ ಧ್ವನಿಗಳ ಮೂಲಕ ಹೊಸ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ. ಇದರಿಂದ ನಾಟಕವು ಹೊಸ ಸಂವೇದನೆ, ಹೊಸ ದೃಷ್ಟಿಕೋನವನ್ನು ಪಡೆಯುತ್ತದೆ. ಮಹಿಳೆಯರ ಅನುಭವ ಅವರ ಒಳ ಜಗತ್ತು ಅವರ ಪ್ರಶ್ನೆಗಳು ಈ ನಾಟಕದ ಮೂಲಕ ಹೆಚ್ಚು ತೀವ್ರವಾಗಿ ಹೊರಹೊಮ್ಮುತ್ತವೆ. ಶೈಲಿಯಲ್ಲಿ, ನಾಟಕವು ಹಾಸ್ಯ ಮತ್ತು ವ್ಯಂಗ್ಯವನ್ನು ಬಳಸಿಕೊಂಡು ಗಂಭೀರ ವಿಷಯಗಳನ್ನು ಹೇಳುತ್ತದೆ. ಸಂಭಾಷಣೆಗಳಲ್ಲಿ ಲಯ, ಪ್ರಾಸ, ನಾಟಕೀಯ ತೀವ್ರತೆ ಕಂಡುಬರುತ್ತದೆ. ಕೆಲವೆಡೆ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಅಂತೆಯೇ ಆ ನಗುವಿನ ಹಿಂದಿನ ಕಠಿಣ ಸತ್ಯವೂ ಗೋಚರಿಸುತ್ತದೆ. ಇದು ನಾಟಕದ ಒಂದು ಶಕ್ತಿ.
ಸಂಗೀತ, ಲಯಬದ್ಧ ಹಾಡುಗಳು ಮತ್ತು ರಂಗರೂಪಗಳು ನಾಟಕಕ್ಕೆ ಮತ್ತಷ್ಟು ಜೀವ ತುಂಬುತ್ತವೆ. ವಿಶೇಷವಾಗಿ ಲಂಚಾವತಾರ ನಿಲ್ಲಬೇಕು ಎಂಬ ಸಂದೇಶದ ಹಾಡುಗಳು ಕೇವಲ ಹಾಡುಗಳಲ್ಲ. ಅವು ಒಂದು ಸಾಮಾಜಿಕ ಘೋಷಣೆ, ಒಂದು ಹೋರಾಟದ ನಾದವಾಗಿ ಹೊರಹೊಮ್ಮಿದೆ.

ಕ್ಲೈಮಾಕ್ಸ್‌ನಲ್ಲಿ ನಾಟಕ ತನ್ನ ಶಿಖರವನ್ನು ತಲುಪುತ್ತದೆ. ಎಲ್ಲಾ ಭ್ರಮೆಗಳು ಒಡೆದುಹೋಗುತ್ತವೆ. ಸುಳ್ಳಿನ ಮೇಲಿರುವ ಕಟ್ಟಡ ಕುಸಿಯುತ್ತದೆ. ಪ್ರೇಕ್ಷಕರ ಮುಂದೆ ಉಳಿಯುವುದು ಒಂದೇ ಪ್ರಶ್ನೆ
ನಿಜವಾದ ಲೋಕಾಯುಕ್ತರು ಯಾರು?
ಹೊರಗಿನಿಂದ ಬರುವವನಾ?
ಅಥವಾ ನಮ್ಮೊಳಗೇ ಇರುವ ನ್ಯಾಯ ಬುದ್ಧಿಯೇನಾ?
ಒಟ್ಟಾರೆ ಲೋಕಾಯುಕ್ತರು ಬರುತ್ತಾರೆ ನಾಟಕವು ಕೇವಲ ಮನರಂಜನೆ ನೀಡುವ ಕೃತಿ ಅಲ್ಲ. ಅದು ಒಂದು ಜಾಗೃತಿ. ಒಂದು ಪ್ರತಿಬಿಂಬ. ಒಂದು ಎಚ್ಚರಿಕೆ. ಇದು ಪ್ರೇಕ್ಷಕರನ್ನು ನಗಿಸುತ್ತದೆ, ಯೋಚಿಸಲು ಪ್ರೇರೇಪಿಸುತ್ತದೆ, ಮತ್ತು ಕೊನೆಗೆ
ಸತ್ಯದ ಎದುರು ನಿಲ್ಲುವ ಧೈರ್ಯವನ್ನು ನೀಡುತ್ತದೆ.

ಇಲ್ಲಿ ನನ್ನ (ಗೊರೂರು ಅನಂತರಾಜು) ಒಂದೆರಡು ಅನುಭವಗಳು ನೆನಪಾದವು. ಹಿಂದೊಮ್ಮೆ ಲೋಕಾಯುಕ್ತ ಡಿ.ವೈ.ಎಸ್.ಪಿ. ಯಾಗಿದ್ದವರು ನನ್ನ ಕವಿ ಮಿತ್ರರು. ಇವರ ಒಂದು ಹನಿಗವನ ಸಂಕಲನದ ವಿಮರ್ಶೆ ಬರೆದಿದ್ದೆನು. ಹಿಂದೊಮ್ಮೆ ಇವರು ನಡೆಸಿದ ರೈಡ್ ಗೆ ನಾನೇ
ಸಾಕ್ಷಿಯಾಗಿ ಹೋಗಿ ಬಾಲ್ಯದಲ್ಲಿ ನಾನು ಓದುತ್ತಿದ್ದ . ಎನ್.ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿ ಡಿಟೆಕ್ಟಿವ್ ಪತ್ತೇದಾರಿ ಪುರುಷೋತ್ತಮನ ಸಹಾಯಕ ಮೃತ್ಯುಂಜಯನ ಪಾತ್ರ ಮತ್ತು ಚಲನಚಿತ್ರನಟ ಬಾಲಕೃಷ್ಣ ಒಂದು ಸಿನಿಮಾದಲ್ಲಿ ಹೇಳುತ್ತಿದ್ದ ಥ್ರಿಲ್ ರೋಮಾಂಚನ! ಸಂಭಾಷಣೆ ದೃಶ್ಯ ಎಲ್ಲಾ ಒಟ್ಟೊಟ್ಟಿಗೆ ನೆನಪಾದವು.. ನನ್ನ ಹಾಸ್ಯ ಸವಿ ಹನಿಗವನ ಸಂಕಲನದ ಕವಿಗವನಗಳು ಹೀಗಿದೆ.

ಕವಿಗಳು ಶ್ರೀಮಂತರು
ಹಾಗೆಂದು ಲೋಕಾಯುಕ್ತರು
ದಾಳಿ ಮಾಡಿದರೆ ಸಿಗಬಹುದು
ಶಾಲು ಕೃತಿಗಳು ನಿಘಂಟು
ಸಿಗಲಾರದು ಗಂಟು
ಏಕೆಂದರೆ ಇವರು ಬರೇ
ಭಾವನೆಗಳ ಹೃದಯ ಶ್ರೀಮಂತರು

ಇನ್ನು ನಿರ್ದೇಶಕರು Dhananjaya Diyan ಅವರು ಕನ್ನಡ ರಂಗಭೂಮಿಯಲ್ಲಿ ವೈಶಿಷ್ಟ್ಯಮಯ ಚಿಂತನೆ, ಸಂವೇದನಾಶೀಲ ಅಭಿವ್ಯಕ್ತಿ ಮತ್ತು ಆಳವಾದ ಕಲಾತ್ಮಕ ದೃಷ್ಟಿಯಿಂದ ಗುರುತಿಸಿಕೊಂಡಿರುವ ನಿರ್ದೇಶಕ, ನಟನಾ ತರಬೇತುದಾರ ಹಾಗೂ ಸಾಹಿತ್ಯಕರ್ತ. ನಿನಾಸಂನಲ್ಲಿ ಪಡೆದ ರಂಗಶಿಕ್ಷಣದ ಆಧಾರದ ಮೇಲೆ, ಅವರು ರಂಗಭೂಮಿಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಮಾಜದ ಒಳನೋಟಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿ ಬಳಸುತ್ತಾರೆ.
40ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ನಡೆಸಿ, ಅನೇಕ ಯುವ ಪ್ರತಿಭೆಗಳನ್ನು ರೂಪಿಸಿರುವ ಇವರು, ಕಲಿಕೆಯನ್ನು ಅನುಭವಾತ್ಮಕ ಪ್ರಕ್ರಿಯೆಯಾಗಿ ರೂಪಿಸುವಲ್ಲಿ ವಿಶೇಷತೆ ಹೊಂದಿದ್ದಾರೆ. ಅಂಧಾಯುಗ, ತುಘಲಕ್, ಕುಸುಮಬಾಲೆ ಸೇರಿದಂತೆ ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಇವರ ಪ್ರತಿಯೊಂದು ಕೃತಿಯಲ್ಲೂ ಭಾವನೆ, ದಾರ್ಶನಿಕತೆ ಮತ್ತು ಜೀವನದ ಸೂಕ್ಷ್ಮತೆಗಳನ್ನು ಒಳಗೊಂಡಿರುತ್ತವೆ.
ಇನ್ನು ಸಾಕು ಬದುಕಿದ್ದು ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಸ್ಪರ್ಶ ಮೂಡಿಸಿರುವ ಇವರು ಬರವಣಿಗೆ, ನಿರ್ದೇಶನ ಮತ್ತು ತರಬೇತಿಯ ಮೂಲಕ ಸಮಗ್ರ ಕಲಾ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಇವರ ದೃಷ್ಟಿಯಲ್ಲಿ ರಂಗಭೂಮಿ ಒಂದು ಸಾಧನೆ ಮನಸ್ಸುಗಳನ್ನು ಸ್ಪರ್ಶಿಸಿ, ಚಿಂತನೆಗೆ ಪ್ರೇರೇಪಿಸುವ ಶಕ್ತಿಯುತ ಸಾಧನ. ಇದಿಷ್ಟು ಮಾಹಿತಿಯನ್ನು ಹಂಚಿಕೊಂಡ ಇದೇ ಧನಂಜಯ್ ಅವರು 15 ವರ್ಷಗಳ ಹಿಂದೆ ಇದೇ ರಂಗಸಿರಿ ಸಂಘಟನೆಯಲ್ಲಿ ಹಾಸನದಲ್ಲಿ ನಡೆದ ಕಾಲೇಜು ರಂಗೋತ್ಸವದಲ್ಲಿ ಹಾಸನ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶ್ರಾಂತ ನಾಟಕ ನಿರ್ದೇಶಿಸಿದ್ದರು. ಇದರ ವಿಮರ್ಶಾ ಬರಹ 2011 ರಲ್ಲಿ ಪ್ರಕಟವಾಗಿರುವ ನನ್ನ ರಂಗಪ್ರಯೋಗ ಕೃತಿಯಲ್ಲಿಯೂ ದಾಖಲಾಗಿದೆ

ಗೊರೂರು ಅನಂತರಾಜು, ಹಾಸನ
9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್,
ಹಾಸನ- .573201

Latest articles

More like this