HomeUncategorizedಕೃತಿ ಪರಿಚಯ; ಗೊರೂರು ಅನಂತರಾಜು ಅವರ ವಿಮರ್ಶನ ಕೃತಿ 'ಸಾಗುತಾ ಇದೆ ದೋಣಿ ನದಿಯ ನೀರನು...

ಕೃತಿ ಪರಿಚಯ; ಗೊರೂರು ಅನಂತರಾಜು ಅವರ ವಿಮರ್ಶನ ಕೃತಿ ‘ಸಾಗುತಾ ಇದೆ ದೋಣಿ ನದಿಯ ನೀರನು ಸೀಳುತಾ’

Published on

ಕರುನಾಡಿನಲ್ಲಿ ಅದೆಷ್ಟೋ ಸಾಹಿತಿಗಳು ಪತ್ಯಕ್ಷವಾಗಿ ಪರೋಕ್ಷವಾಗಿ ನವ್ಯ ಕನ್ನಡದಲ್ಲಿಯೂ ಉತ್ತುಂಗಕ್ಕೇರಿಸುವ ಸಾಹಿತ್ಯವನ್ನು ನೀಡಿ ಕನ್ನಡ ನುಡಿಯನ್ನು ವಿಶ್ವಮಟ್ಟದಲ್ಲಿ ನಿಲ್ಲುವಂತೆ ಮಾಡಿದ್ದಾರೆ. ಅದೇ ನಿಟ್ಟಿನಲ್ಲಿ ಸ್ವತಂತ್ರ ಅಮೃತ ಮಹೋತ್ಸವವನ್ನು ನೆನಪಿಸಿಕೊಳ್ಳುವಂತೆ ‘ಸಾಗುತ ಇದೆ ದೋಣಿ ನದಿಯ ನೀರನು ಸೀಳುತಾ’ ಎನ್ನುವಂತಹ ಗಮನ ಸೆಳೆಯುವ ಶೀರ್ಷಿಕೆಯನ್ನೊತ್ತ ಹಾಸನದ ಖ್ಯಾತ ಸಾಹಿತಿಯೊಬ್ಬರ ವಿಮರ್ಶನ ಕೃತಿಯೊಂದು ಇದೀಗ ಬೆಳಕಿಗೆ ಬಂದಿದೆ. ಆ ಸಾಹಿತಿಯೇ ಗೊರೂರು ಅನಂತರಾಜುರವರು.

ಇವರ ಕೈಚಳಕದಿಂದ ಹೊರಬಂದ ನಾನಾ ಪುಸ್ತಕ, ಲೇಖನ ಸಂಕಲನಗಳಿಗೆ ಹೊಸ ಸೇರ್ಪಡೆ. ಹಾಸನದ ಹೆಸರಾಂತ ಸಾಹಿತಿಗಳನೇಕರು ಬರೆದ ಸುಂದರವಾದ ವಿಮರ್ಶನ ಲೇಖನಗಳನ್ನು ಜೋಡಿಸಿರುವಂತಹ ಹೊತ್ತಗೆ ‘ಸಾಗುತಾ ಇದೆ ದೋಣಿ ನದಿಯ ನೀರನು ಸೀಳುತಾ’

ಇದೊಂದು ಸಮೃದ್ಧ ಕನ್ನಡ ಸಾಹಿತ್ಯದ ಪ್ರಾತಿನಿಧಿಕ ಬಿಡಿ ಕೃತಿಗಳೆಂದೇ ಹೇಳಬೇಕು. ಯಾವುದೇ ಪುಸ್ತಕವಿರಲಿ ಅಲ್ಲಿರಬೇಕಿರುವುದು ಜ್ಞಾನಾರ್ಜನೆಯ ಭಂಡಾರ, ಸಮಚಿತ್ತ ಕಾಯುವ ಬರಹಗಳು. ಆ ರೀತಿಯಲ್ಲಿಯೇ ಬರೆಯುವಂತಹ ಒಬ್ಬ ಸಾಹಿತಿಯ ಪ್ರಹಸನ, ಲೇಖನ, ನಾನಾ ಕೃತಿಗಳಿತ್ಯಾದಿಗಳಿಗೆ ಇತರೆ ಸಾಹಿತಿಗಳು ಬಿಡಿಯಾಗಿ ಬರೆದ ಅಭಿಪ್ರಾಯ ಕ್ರೋಢಿಕರಿಸಿ ಪ್ರಕಟಪಡಿಸಲಾಗಿರವಂತಹದೇ ಈ ಪುಸ್ತಕದ ವಿಶೇಷತೆ.

ಹಾಸನ ಜಿಲ್ಲೆಯ ಗೊರೂರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಹಿತಿಗಳ ತವರೂರು ಎಂದೇ ಸುಪ್ರಸಿದ್ಧ. ಅಂತಹ ಊರಿಗೆ ಈ ಶತಮಾನದ ಕಿರೀಟ ಗೊರೂರು ಅನಂತರಾಜು ಅವರು ಎಂದರೆ ತಪ್ಪಾಗದು. ಅವರ ಬಗ್ಗೆ ಅನೇಕ ಹಿರಿಯ ಸಾಹಿತಿಗಳು ಹೇಳುವ ಒಂದು ಸಾಮಾನ್ಯ ಮಾತು ಸರಳ ಸಜ್ಜನಿಕೆಯ ಪಾದರಸದಂತಹ ವ್ಯಕ್ತಿ. ಕನ್ನಡವನ್ನು ನಿತ್ಯ ಲೇಖನಿಯ ಮೂಲಕ ಸುಲಲಿತವಾಗಿ ಹರಿಯಬಿಡುವ ಸಾಹಿತಿ. ಅಂತಹ ಸಾಹಿತಿಗಳ ಕೃತಿಗೆ ನುಡಿಪೋಣಿಸುವುದು ಸಣ್ಣ ವಿಚಾರವಲ್ಲ. ಅಂತಹದೊಂದು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯವೆಂದುಕೊಂಡಿದ್ದೇನೆ.

ಅವರ ಈ ಕೃತಿಯಲ್ಲಿ ಅನೇಕ ಸಾಹಿತಿಗಳು ತಮ್ಮ ಸಾಹಿತ್ಯಿಕ ಚಾತುರ್ಯತೆಯನ್ನು ಹೊರಗೆಡವಿದ್ದಾರೆ ಎಂದರೂ ತಪ್ಪಾಗಲಾರದು. ಅಂತೆಯೇ ಎನ್.ಎಲ್.ಚನ್ನೇಗೌಡರು ಗೆಳೆಯರೆಂದೆಣಿಸದೆ ಮಾಡಿದ ವಿಮರ್ಶೆ ಹಾಗೂ ಶ್ರೀಮತಿ ಸಾವಿತ್ರಮ್ಮ ಓಂ. ಅವರು ಹಾಸನದ ಸಾಂಸ್ಕೃತಿಕ ದಿಗ್ಗಜರ ಕುರಿತು ಮತ್ತು ಗೊರೂರು ಅನಂತರಾಜುರವರ ಹಲವು ಕೃತಿಗಳ ಕುರಿತು ಸುಂದರವಾಗಿ ಲೇಖನಿ ಹರಿಸಿದ್ದಾರೆ.

ಶ್ರೀಮತಿ ಮಾಲಾ ಚೆಲುವನಹಳ್ಳಿಯವರು ಶ್ರೀಯುತರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳನ್ನೂ ಅವರ ಪ್ರತಿಭೆಯನ್ನೂ ಅನಾವರಣಗೊಳಿಸಿರುವುದು,  ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರು ನಾಟಕ ಬರವಣಿಗೆಯಲ್ಲಿ ಗೊರೂರರ ಕೈಚಳಕ ಕುರಿತು ಬರೆದ ಲೇಖನ, ಶ್ರೀಮತಿ ವಾಣಿ ಮಹೇಶ್ ರವರು ಬದುಕು ಸಂತೆ ಬಂಡಿ ಶೀರ್ಷಿಕೆಯಡಿ ಬರೆದ ಅನಂತರಾಜುರವರು ಗೊರೂರು ಅಣೆಕಟ್ಟೆ ಕಟ್ಟುವುದನ್ನು ನೋಡುತ್ತಾ ಬೆಳೆದವರು ಎನ್ನುವ ವಿಚಾರವನ್ನೆತ್ತಿ ವಿಮರ್ಶೆ ಮಾಡಿರುವಂತಹದೆಲ್ಲಾ ಗಮನ ಸೆಳೆಯುತ್ತದೆ.

ಜಿ.ಎಸ್.ಪ್ರಕಾಶ್ ಬೆಂಗಳೂರುರವರು ರಂಗಭೂಮಿ ಹಾಗೂ ಜಾನಪದ ಕಲಾವಿದರ ಸಂದರ್ಶನ ಮಾಡಿದಂತಹ ರಂಗವೈಭವವನ್ನು ಹೆಸರಿಗೆ ತಕ್ಕಂತೆ ಅರ್ಥಗರ್ಭಿತವಾಗಿ ವಿಮರ್ಶಿಸಿದ್ದಾರೆ. ಗಣಪತಿ ಗೋ ಚಲವಾದಿರವರು ಚೈನಾ ನಾಟಕ ಕುರಿತು ಬರೆದ ಕೃತಿಗೆ ಸೂಕ್ತ ರೀತಿಯಲ್ಲಿ ವಿಷಯ ಎತ್ತಿಹಿಡಿಯುವಂತ ವಿಚಾರ ಜೋಡಿಸಿ ವಿಮರ್ಶೆ ಬರೆದಿದ್ದಾರೆ. ಮಂಡ್ಯದ  ಕಟ್ಟೇ ಎಂ.ಎಸ್.ಕೃಷ್ಣಸ್ವಾಮಿರವರು ಕಥಾಸಿರಿ ಐಸಿರಿ ಕುರಿತು ಬರೆಯುವಾಗ ಶ್ರೀಯುತರು ಕೈಯಾಡಿಸಿದ ಕ್ಷೇತ್ರಗಳನ್ನೆಲ್ಲ ಪ್ರಕಟಪಡಿಸಿದ್ದಾರೆ. ಶ್ರೀಮತಿ ಎಸ್.ಲಲಿತಾರವರು ಗೊರೂರು ಅನಂತರಾಜುರವರು ಪ್ರತಿಯೊಬ್ಬರ ಬರವಣಿಗೆಗೆ ನೀಡಿದ ಮಾನ್ಯತೆ, ಸೇವಾಪರತೆ ಕುರಿತು ತಮ್ಮ ಭಾವನೆಗಳನ್ನೂ ವ್ಯಕ್ತಪಡಿಸುತ್ತ ವಿಮರ್ಶನ ತೋರಣ ಕಟ್ಟಿದ್ದಾರೆ.  ಎಸ್.ಎಸ್.ಪುಟ್ಟೇಗೌಡರು ಹೊಯ್ಸಳ ಇತಿಹಾಸ ಕುರಿತು ಬರೆದ ಲೇಖನ ಹೇಮೆಯೊಂದಿಗಿನ ಗೊರೂರು ಅನಂತರಾಜುರವರಿಗಿರುವ ಆತ್ಮೀಯ ನಂಟನ್ನು ತಾವೂ ಭಾವನಾತ್ಮಕವಾಗಿ ಬರೆದಿದ್ದಾರೆ.  ಗೊರೂರು ಅನಂತರಾಜುರವರು ಇತರರ ಕೃತಿಗಳಿಗೆ ಬರೆದ ವಿಮರ್ಶೆ ಆಸಕ್ತಿದಾಯಕವಾಗಿದೆ. ಒಟ್ಟಿನಲ್ಲಿ ಈ ಹೊತ್ತಿಗೆಯು ಒಬ್ಬ ಸಕಲಕಲಾವಲ್ಲಭ ಸಾಹಿತಿ ನಾಗರೀಕ ಸಮಾಜವೆಂಬ ನದಿಯಲ್ಲಿ, ಬಿಳಿ ಹಾಳೆ ಎಂಬ ನೀರನ್ನು ದೋಣಿ ಎಂಬ ಲೇಖನಿಯ ಮೂಲಕ ಅಕ್ಷರಗಳಿಂದ ಸೀಳುತ ಸಾಗುತ್ತಲೇ ಹೋಗುತ್ತಿದ್ದಾರೆ ಎಂಬುದನ್ನು ವ್ಯಕ್ಡಪಡಿಸಿದಂತಿದೆ. ಕೊನೆಯಲ್ಲಿ ಇವರ ಸಾಹಿತ್ಯ ಕಲಾ ಸಾಧನೆಗೆ ಇನ್ನಷ್ಟು ಭೋರ್ಗರೆದು ಹರಿಯುತ್ತಲೇ ಇರಲಿ ಎಂಬ ಶುಭಕಾಮನೆಯೊಂದಿಗೆ ಆಶಯ ನುಡಿಗಳನ್ನು ಆತ್ಮಪೂರ್ವಕ ಅಕ್ಷರಗಳಲ್ಲಿ ದಾಖಲಿಸಿದ್ದೇನೆ.

ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ಅಧ್ಯಯನಗಾರರು ಮತ್ತು ಬರಹಗಾರರು.
೭೭/೧೫ಎ, ಎಂ.ಜಿ.ರಸ್ತೆ, ವಿದ್ಯಾನಗರ, ಹಾಸನ-೫೭೩೨೦೧, ಮೊ: ೮೦೫೦೨೬೪೩೩೪.

Latest articles

More like this