HomeUncategorized'ಕನ್ನಡಮ್ಮ' ದ ಟೋಪಣ್ಣವರ ; ಒಂದು ನೆನಪು

‘ಕನ್ನಡಮ್ಮ’ ದ ಟೋಪಣ್ಣವರ ; ಒಂದು ನೆನಪು

Published on

ಮರೆಯಲಾಗದ ವಿಶಿಷ್ಟ ವ್ಯಕ್ತಿತ್ವ ಇವರದು. ಇಂದು ಅವರ ಜನ್ಮ ದಿನ ಎಂದು ಯಾರೋ ಒಬ್ಬರು ಫೇಸಬುಕ್ ನಲ್ಲಿ ಹಾಕಿದ್ದು ನೋಡಿದೆ. ಅವರ ಬಗ್ಗೆ ಬರೆಯಬೇಕೆನಿಸಿತು.

ಎರಡು ಮೂರು ದಶಕಗಳ ಹಿಂದೆ ಬೆಳಗಾವಿಯಲ್ಲಿ ಭಾರೀ ಹೆಸರು ಮಾಡಿದ್ದ ದಿನಪತ್ರಿಕೆ ಕನ್ನಡಮ್ಮ. ಅದರ ಸಂಪಾದಕರೇ ಮಹಾದೇವ ಟೋಪಣ್ಣವರ. (ಎಂಎಸ್. ಟೋಪಣ್ಣವರ). ಬೆಳಗಾವಿಯ ಕನ್ನಡ ಹೋರಾಟದಲ್ಲೂ ಅವರು ಮುಂಚೂಣಿಯಲ್ಲಿದ್ದವರು. ಒಂದು ಕಾಲಘಟ್ಟದಲ್ಲಿ ಕನ್ನಡಮ್ಮ ಪತ್ರಿಕೆಗೆ ರಾಜ್ಯಮಟ್ಟದ ಹೆಸರು ತಂದುಕೊಟ್ಟವರು ಎಮ. ಎಸ್.

ಗಡಿ ಭಾಷಾ ವಿವಾದ ತೀವ್ರ ಸ್ವರೂಪ ಪಡೆದಂತಹ ಸಮಯದಲ್ಲಿ ಹುಟ್ಟಿಕೊಂಡ ನಾಡೋಜ, ಕನ್ನಡಮ್ಮ, ಲೋಕದರ್ಶನ ಮೊದಲಾದ ಪತ್ರಿಕೆಗಳು ಕನ್ನಡಪರ ಚಳವಳಿಗೆ ಬೆನ್ನೆಲುಬಾಗಿ ನಿಂತವು. ಶಕ್ತಿ ತುಂಬಿದವು. ಟೋಪಣ್ಣವರ ನೇರವಾಗಿ ಯುದ್ಧ ಭೂಮಿಗೆ ಇಳಿದು ಮರಾಠಿಗರ ಕಲ್ಲೇಟು ತಿಂದವರು. ಮರಾಠಿ ಪುಂಡರಿಗೆ ಅಂದರೆ ಎಂಇಎಸ್ ಮತ್ತು ಶಿವಸೇನೆಯವರಿಗೆ ಆಗ ತರುಣ ಭಾರತ ಮರಾಠಿ ದಿನಪತ್ರಿಕೆಯ ಬೆಂಬಲ ಇತ್ತು. ಕನ್ನಡದಲ್ಲಿ ನಾಡೋಜ ಮತ್ತು ಕನ್ನಡಮ್ಮ ದಿನಪತ್ರಿಕೆಗಳು ಕನ್ನಡಿಗರ ಭಾವನೆಗಳಿಗೆ ಬೆಂಬಲವಾಗಿ ನಿಂತವು. ಇಂದು ಕನ್ನಡ ಮರಾಠಿ ಸಂಘರ್ಷ ಹೆಚ್ಚುಕಡಿಮೆ ಕೊನೆಯುಸಿರೆಳೆದಿದೆ. ಈಗಿನವರಿಗೆ ಆಗಿನ ಆ ಹೋರಾಟದ ಕಲ್ಪನೆ ಬರಲು ಸಾಧ್ಯವಿಲ್ಲ. ಬಹಳ ಕಷ್ಟನಷ್ಟಗಳನ್ನೆದುರಿಸಿದ್ದಾರೆ ಆಗ ಬೆಳಗಾವಿ ಕನ್ನಡಿಗರು. ರಸ್ತೆಯಲ್ಲಿ ನಿಂತು ಕನ್ನಡ ಮಾತನಾಡಿದರೆ ಮರಾಠಿಗರಿಂದ ಏಟು ತಿನ್ನುವಂತಹ ಕೆಟ್ಟ ಪರಿಸ್ಥಿತಿಯಿತ್ತು. ಕನ್ನಡಮ್ಮ ನಾಡೋಜ ಲೋಕದರ್ಶನ ಪತ್ರಿಕಾ ಕಾರ್ಯಾಲಯಗಳಿಗೆ ಬೆಂಕಿಹಚ್ಚುವುದು ಕಲ್ಲು ತೂರುವುದು ಎಲ್ಲ ನಡೆಯುತ್ತಿತ್ತು. ಸಾಕಷ್ಟು ಹಾನಿ ಆಗಿದ್ದುಂಟು. ೯೦ ರ ದಶಕದ ನಂತರ ಕ್ರಮೇಣ ಮರಾಠಿಗರ ಅಬ್ಬರ ಕಡಿಮೆಯಾಗುತ್ತ ಬಂತು.

ಟೋಪಣ್ಣವರ ಒಬ್ಬ ದಿಲ್ ದಾರ್ ಮನುಷ್ಯ. ಸರಳ ಸ್ನೇಹಜೀವಿ. ಕನ್ನಡಮ್ಮಹೊಸದಾಗಿ ಪತ್ರಿಕಾರಂಗಕ್ಕೆ ಬರಬಯಸುವವರಿಗೆಲ್ಲ ಆಶ್ರಯತಾಣ. ನಾನೂ ೧೯೮೨ ರಲ್ಲಿ ಬೆಳಗಾವಿಗೆ ಕಾಲಿಟ್ಟಿದ್ದು ಕನ್ನಡಮ್ಮ ಪತ್ರಿಕೆಯ ಮೂಲಕವೆ. ಯಾರಿಗೂ ಇಲ್ಲ ಎಂದವರಲ್ಲ . ಗಣಪತಿಗಲ್ಲಿಯ ಅವರ ಕಾರ್ಯಾಲಯ ಯಾವಾಗಲೂ ಜನರಿಂದ ತುಂಬಿರುತ್ತಿತ್ತು. ಆಗ ನನ್ನ ವಶೀಲಿ ಮೇಲೆ ಕನ್ನಡಮ್ಮದಲ್ಲಿ ಕೆಲಸ ಮಾಡಲು ಬಂದವರೂ ಹಲವರು. ವಿ. ಎಸ್. ಹೆಗಡೆ, ಬಿ. ಗಣಪತಿ ಮೊದಲಾದವರನ್ನೆಲ್ಲ ನಾನೇ ಕನ್ನಡಮ್ಮಕ್ಕೆ ಸೇರಿಸಿದ್ದೆ. ಅದೊಂದು ಪತ್ರಿಕಾ ತರಬೇತಿ ಕಾರ್ಯಾಲಯವೇ ಆಗಿತ್ತು.
ಟೋಪಣ್ಣವರ ತುಂಬ ಕಷ್ಟಪಟ್ಟು ಮೇಲೆದ್ದು ಬಂದವರು. ಸ್ವತಃ ಬೆಳಿಗ್ಗೆ ಪತ್ರಿಕೆ ಬಂಡಲ್ ಹೊತ್ತು ಬಸ್ ಸ್ಟ್ಯಾಂಡಿಗೆ ಹೋಗಿ ಪೇಪರ್ ಕೈಯಲ್ಲಿ ಹಿಡಿದು ಬಸ್ಸಿನ ಸುತ್ತ ತಿರುಗುತ್ತ ಕನ್ನಡಮ್ಮ ಕನ್ನಡಮ್ಮ ಎಂದು ಒದರುತ್ತ ಮಾರಾಟ ಮಾಡಿದ್ದೂ ಇದೆ. ತಾವೂ ಕೆಲಸ ಮಾಡುತ್ತ ನಮ್ಮಿಂದಲೂ ಕೆಲಸ ಮಾಡಿಸುತ್ತಿದ್ದರು.

ಒಂದು ಹಳೆಯ ಢಕಲೂ ಕಾರು ಇತ್ತು. ಆಗ ಹಿಂದವಾಡಿಯ ರಣಝಂಝಾರ ಪ್ರೆಸ್ಸಿಗೆ ಹೋಗಿ ಕನ್ನಡಮ್ಮ ಪ್ರಿಂಟ್ ಮಾಡಿಸಿಕೊಂಡು ಬರಬೇಕಿತ್ತು. ನಮ್ಮನ್ನೂ ತಮ್ಮೊಡನೆ ರಾತ್ರಿ ಎರಡು ಗಂಟೆಗೆ ಕರೆದೊಯ್ದು, ಪತ್ರಿಕೆ ಪ್ರಿಂಟಾದ ನಂತರ ಮರಳಿ ಬರುವಾಗ ರೇಲ್ವೆ ಸ್ಟೇಶನ್ ಹತ್ತಿರ ಚಹಾ ಕುಡಿಸಿ ಮನೆ ಸೇರುವಾಗ ಬೆಳಗಾಗಿರುತ್ತಿತ್ತು. ನಾವೇನೂ ಅದಕ್ಕಾಗಿ ಬೇಸರ ಪಡುತ್ತಿರಲಿಲ್ಲ.ಅವರು ಹಾಗಿದ್ದರು. ಸುಮಾರು ಮೂವತ್ತು ನಲವತ್ತು ಜನ ಒಟ್ಟು ಸಿಬ್ಬಂದಿ ಆಗ ಕನ್ನಡಮ್ಮದಲ್ಲಿ ದುಡಿಯುತ್ತಿದ್ದರು. ಮೊಳೆ ಜೋಡಿಸುವ ಕಾಲ ಅದು. ಕೆಲ ವರ್ಷ ನಮ್ಮ ಸಂಪಾದಕ ಮಂಡಳಿಯೂ ಬಹಳ ಚೆನ್ನಾಗಿತ್ತು. ಪತ್ರಿಕೆ ಆಗ ತುಂಬಾ ಜನಪ್ರಿಯತೆ ಪಡೆದಿತ್ತು.

ಟೋಪಣ್ಣವರ ಕೆಲಸಗಾರರ ಬಗ್ಗೆ ಕಾಳಜಿ ಹೊಂದಿದ್ದರು. ಅನೇಕ ಕೆಲಸಗಾರರ ಮದುವೆಯನ್ನು ಸಹ ತಾವೇ ಸ್ವತಃ ನಿಂತು ಮಾಡಿಸಿದ್ದುಂಟು. ಸಂಬಳ ಕಡಿಮೆಯಿದ್ದರೂ ಅವರ ಸ್ವಭಾವದಿಂದಾಗಿ ನಾವೆಲ್ಲ ಪ್ರೀತಿಯಿಂದ ದುಡಿಯುತ್ತಿದ್ದೆವು. ಮರೆಯಲಾಗದ ವ್ಯಕ್ತಿ ಅವರು. ವೈಯಕ್ತಿಕವಾಗಿ ನನ್ನ ಕಷ್ಟಕಾಲದಲ್ಲಿ ಕೆಲಸ ಕೊಟ್ಟು ಉಪಕರಿಸಿದವರು. ಅವರ ಜೀವನಸಾಧನೆ ಕುರಿತಾಗಿಯೇ ಒಂದು ಪುಸ್ತಕ ಬರೆಯಬಹುದು. ಬದುಕಿನ ಏರು ಸ್ಥಿತಿಯಲ್ಲಿರುವಾಗಲೇ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ್ದು ಬೇಸರದ ಸಂಗತಿ. ಅವರ ಅಂತಿಮ ಮೆರವಣಿಗೆಯಲ್ಲಿ ಸಹಸ್ರಾರು ಜನ ಸೇರಿದ್ದು ಅವರ ಆ ಅಪಾರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಅವರ ನೆನಪಿಗೆ ನನ್ನ ನಮನಗಳು.

ಎಲ್. ಎಸ್. ಶಾಸ್ತ್ರಿ

Latest articles

More like this