ಯಾರೊಡನೆಯೂ ಮಾತನಾಡದೆ, ದಾಪುಗಾಲು ಹಾಕುತ್ತಾ ರಸ್ತೆಯಲ್ಲಿ ತಮ್ಮತ್ತಲೇ ನಡೆದು ಬರುತ್ತಿದ್ದ ಎತ್ತರದ ಶಕ್ತಿಶಾಲಿ ಆದರೆ ನರಪೇತಲನಾದ ಒಬ್ಬಂಟಿ ಯುವಕನತ್ತ ಅಂಗಡಿಕಾರರೆಲ್ಲ ತಿರುಗು ನೋಡುತ್ತ ಈ ಮಾತು ಹೇಳಿದರು…’ ನೋಡು, ಮತ್ತೆ ಆ ಹುಚ್ಚು ಫಕೀರ ಇಲ್ಲಿ ಬಂದ.
ನಾನು ಮೂರು ತಿಂಗಳ ಹಿಂದೆ ಶಿರಡಿಗೆ ಹೋಗಿದ್ದೆ. ಹೋದಾಗ ನನಗೆ ಬಾಬಾರ ಬಗ್ಗೆ ಅಷ್ಟೂ ಏನೂ ತಿಳಿದಿರಲಿಲ್ಲ. ಹೋಗಿ ಬಂದ ಮೇಲೆ ನನಗೆ ‘ನಂಬಲಸಾಧ್ಯವಾದ ಸಾಯಿಬಾಬಾ’ ಪುಸ್ತಕ ದೊರಕಿತು. ಕೊಟ್ಟವರು ಹನ್ಯಾಳು ಗೋವಿಂದಗೌಡರು. ಮೂಲ ಆಂಗ್ಲ ಲೇಖಕರು ಅರ್ಥರ್ ಓಸ್ ಬರ್ನ್. ಕನ್ನಡಕ್ಕೆ ಆಲಕೆರೆ ಜೆ.ರಾಮಲಿಂಗೇಗೌಡರು. ಹನ್ಯಾಳು ಪ್ರಕಾಶನ, ಮೈಸೂರು.
ಮಂಡ್ಯ ಜಿಲ್ಲೆಯ ಆಲಕೆರೆ ಗ್ರಾಮದ ಲೇಖಕರು ಆಲಕೆರೆ ಜೆ.ರಾಮಲಿಂಗೇಗೌಡರು (ಜನನ ೧೯೫೨) ಅನುವಾದದಲ್ಲಿ ಪಳಗಿದವರು. ೧೯೭೩ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ೧೯೭೫ರಲ್ಲಿ ಕರ್ನಾಟಕ ಆಡಳಿತ ಸೇವೆಯ ಮೂಲಕ ವಾಣಿಜ್ಯ ತೆರಿಗೆ ಇಲಾಖೆಗೆ ಸೇರಿದರು. ೩೭ ವರ್ಷ ಸೇವೆಯ ನಂತರ ೨೦೧೨ರಲ್ಲಿ ನಿವೃತ್ತರಾದರು. ನಿವೃತ್ತಿ ನಂತರ ಸಾಹಿತ್ಯದ ಒಲವು ತೋರಿ ಇವರ ಪ್ರಕಟಿತ ಕೃತಿಗಳು: ಅಂಬೇಡ್ಕರ್ ದಮನಿತರ ದನಿ, ಗೀತಾಂಜಲಿ, ಡೀಪ್ ವರ್ಕ್, ಜಲಾಲುದ್ಧೀನ ರುಮಿ-ಸೂಫಿ ಗೀತೆಗಳು, ಇಕಿಗಯ್, ಬಾಬಿ ಸಾಬಿ, ಇಕಿಗಯ್ ಪಯಣ, ಓ ಪಯಣಿಗ, 108 pearls of wisdom, ababil, A Flock of Tine Birds, As witness of time, ವಿಮಲಕೀರ್ತಿ ನಿರ್ದೇಶ, ಕಾವೇರಿ ನೀರು ಹಂಚಿಕೆ, ನೇತಾಜಿ ಯುವ ಜನತೆಗಾಗಿ ಒಂದು ಜೀವನ ಚರಿತ್ರೆ.
ಇನ್ನು ಮೂಲ ಲೇಖಕರು ಆರ್ಥರ್ ಓಸ್ ಬರ್ನ್ ಅವರಿಗೆ (೧೯೦೬-೧೯೭೦) ಅಧ್ಯಾತ್ಮದಲ್ಲಿ ಆಳವಾದ ಆಸಕ್ತಿ. ದಕ್ಷಿಣ ಭಾರತದ ತಿರುವಣ್ಣಾಮಲೈನ ರಮಣಮಹರ್ಷಿಗಳ ಆಶ್ರಮದಲ್ಲಿ ಇದ್ದ ಸಂದರ್ಭ ಮೌಂಟೇನ್ ಪಾತ್ ಎಂಬ ನಿಯತಕಾಲಿಕೆ ಸ್ಥಾಪಕ ಸಂಪಾದಕರಾಗಿದ್ದರು. ೨೫-೯-೧೯೦೬ರಲ್ಲಿ ಲಂಡನ್ನಲ್ಲಿ ಜನಿಸಿದ ಇವರು ತಮ್ಮ ೬೩ನೇ ವಯಸ್ಸಿನಲ್ಲಿ ದಿ.೮-೫-೧೯೭೦ರಂದು ಬೆಂಗಳೂರಿನಲ್ಲಿ ನಿಧನರಾದರು. ಇವರ ಇತರ ಕೃತಿಗಳು ರಮಣ ಅರುಣಾಚಲ ಮತ್ತು ರಮಣ ಮಹರ್ಷಿ, ದ ಪಾತ್ ಆಫ್ ಸೆಲ್ಫ್ ನಾಲೆಜ್.
ಮೂಲ ಆಂಗ್ಲ ಕೃತಿಗೆ ದಿ.೨೫-೪-೧೯೫೭ರಲ್ಲಿ ಕೇರಳ ರಾಜ್ಯದ ಕಾಯಂಗಾಡ್ ನಲ್ಲಿರುವ ಆನಂದಾಶ್ರ್ರಮದ ಶ್ರೀರಾಮದಾಸರು ಮುನ್ನುಡಿ ಬರೆದಿದ್ದಾರೆ.
೮ ಅಧ್ಯಾಯಗಳ ಕೃತಿ ಸಾಯಿಬಾಬಾರ ಜೀವನ, ಅವರ ಉಪದೇಶ, ಬೋಧನೆಗಳು, ಪವಾಡ ದಂತಕತೆಗಳನ್ನು ಒಳಗೊಂಡಿದೆ. ಗುರು ಮತ್ತು ಆತನ ಕುಟುಂಬ ಎಂಬ ೨ನೇ ಅಧ್ಯಾಯದಲ್ಲಿ ಬಾಬಾರ ಚಮತ್ಕಾರ ಪವಾಡ ಹಾಗೂ ಅವರ ಕೈಚಳಕಗಳ ೨೯ ಘಟನೆಗಳು ದಾಖಲಿವೆ. ಆಧುನಿಕ ಯುಗದಲ್ಲಿ ಇವನ್ನು ನಂಬುವುದು ಹೇಗೆ ಎಂಬ ಜಿಜ್ಞಾಸೆ ಸಹಜ. ಅವುಗಳನ್ನು ವಿಜ್ಞಾನದ ಒರೆಗೆ ಹಚ್ಚುವುದೋ ಇಲ್ಲಾ ಅವರವರ ನಂಬಿಕೆಗೆ ಬಿಡುವುದೋ ಅದನ್ನು ಓದುಗರ ವಿವೇಚನಗೆ ಬಿಟ್ಟಿದ್ದಾರೆ ಅನುವಾದಕರು.
ಈ ಕೃತಿಗೆ ಆಧಾರವಾದ ದ ಇನ್ ಕ್ರೆಡಿಬಲ್ ಸಾಯಿಬಾಬಾ ಎಂಬ ಆಂಗ್ಲ ಪುಸ್ತಕ ಲೇಖಕರಿಗೆ ಮಾರ್ಚ್ ೨೦೨೫ ಸಿಗುತ್ತದೆ. ಆಗ ಇವರ ಕುಟುಂಬದಲ್ಲಿ ಮಗಳ ಅಕಾಲಿಕ ನೋವು ಮನೆಮಾಡಿದೆ. ಅತೀವ ಘಾಸಿಯಿಂದ ಬಿರುಕುಗೊಂಡಿದ್ದ ನಮ್ಮ ಮನಸ್ಸಿಗೆ ಅದು ನೀಡಿದ ಸ್ವಾಂತನ ಗಮನದಲ್ಲಿರಿಸಿ ಕೃತಿಯನ್ನು ಆಕೆಗೆ ಅರ್ಪಿಸಿದ್ದಾಗಿ ಹೇಳಿದ್ದಾರೆ. ಮರಾಠಿಯಿಂದ ಕನ್ನಡಕ್ಕೆ ಅನುವಾದವಾಗಿ (ಮರಾಠಿ ಮೂಲ-ಹೇಮಾಡ ಪಂತ್, ಕನ್ನಡಕ್ಕೆ: ಅನಂತರಾಮು) ಶ್ರೀ ಸಾಯಿ ಸಚ್ಚರಿತೆಯಲ್ಲಿ ಬಾಬಾರನ್ನು ನಾವು ಹಿಂದೂವೆಂದು ಭಾವಿಸುವುದಾದರೆ ಯವನರಂತೆ ಕಾಣುತ್ತಿದ್ದರು. ರಾಮನವಮಿಯನ್ನು ಹೇಗೆ ಆಚರಿಸಲೊಪ್ಪಿದರೋ ಅದೇ ರೀತಿ ಮಹಮ್ಮದೀಯರ ಚಂದನದ ಮೆರವಣಿಗೆಗೂ ಸಹ ಒಪ್ಪಿಗೆ ನೀಡಿದ್ದರು. ನಾವು ಅವರನ್ನು ಮಹಮ್ಮದೀಯರೆಂದು ಕರೆಯುವುದಾದರೆ ಅವರು ಕಿವಿಗಳನ್ನು ಚುಚ್ಚಿಸಿಕೊಂಡಿದ್ದರು. ಹಿಂದೂವೆಂದು ಕರೆಯುವುದಾದರೆ ಅವರು ಮಸೀದಿಯಲ್ಲಿ ವಾಸವಿದ್ದರು. ಅವರನ್ನು ಪ್ರಶ್ನಿಸಲು ಹೋದ ಕೆಲವರು ಮೂಕರಂತೆ ನಿಂತುಬಿಡುತ್ತಿದ್ದರು.
ಅವರ್ಯಾರೆಂದು ಯಾರಿಗೂ ಗೊತ್ತಿಲ್ಲ. ಎಲ್ಲಿಂದ ಬಂದರು? ಏತಕ್ಕೆ ಬಂದರು? ಗೊತ್ತಿಲ್ಲ. ೧೮೭೨ರಲ್ಲಿ ೧೬ ವರ್ಷ ಹುಡುಗನಾಗಿ ಶಿರಡಿಯಲ್ಲಿ ಕಾಣಿಸಿಕೊಂಡು ಮತ್ತೆಲ್ಲೋ ಹೊರಟು ಹೋದರು. ಕೆಲವು ದಿನ ಅಲ್ಲಿ ಇಲ್ಲಿ ಅಲೆದಾಡಿ ಪುನಃ ಮರಳಿ ಅಲ್ಲಿಗೆ ಬಂದು ತನ್ನ ಬದುಕಿನ ಶೇಷಭಾಗವನ್ನು ಅಲ್ಲೇ ಕಳೆದರು. ಅವರ ಆರಂಭಿಕ ಭೇಟಿಗಳ ಅವಧಿಯಲ್ಲಿ ಅವರು ಒಂದು ಬೇವಿನ ಮರದಡಿ ವಾಸಿಸುತ್ತಾ ಊರವರು ನೀಡುತ್ತಿದ್ದ ಊಟ ತಿಂದು ಕಾಲ ಹಾಕುತ್ತಿದ್ದರು. ಒಂದು ತುತ್ತು ಅನ್ನ ಹೊರತುಪಡಿಸಿದರೆ ದೀಪಗಳಿಗಾಗಿ ಎಣ್ಣೆಗೋಸ್ಕರ ಮಾತ್ರ ಅವರು ಅಂಗಡಿ ಮಾಲೀಕರ ಬಳಿ ಯಾಚನೆಗೆ ಹೋಗುತ್ತಿದ್ದರು. ಒಮ್ಮೆ ವಿನೋದ ಮಾಡಲು ಅಂಗಡಿಯವರು ಎಣ್ಣೆ ಕೊಡಲು ನಿರಾಕರಿಸುತ್ತಾರೆ. ಬಾಬಾರು ಮಸೀದಿಗೆ ವಾಪಸ್ಸು ಬಂದು ಅಲ್ಲಿದ್ದ ನೀರು ತುಂಬಿದ್ದ ಮಣ್ಣಿನ ಗಡಿಗೆಯನ್ನು ಎತ್ತಿಕೊಂಡು ಎಲ್ಲ ದೀಪಗಳಿಗೂ ಹಾಕಲು ಅವು ಎಣ್ಣೆಯ ದೀಪಗಳಂತೆಯೇ ಬೆಳಗಲಾರಂಭಿಸಿ ಈ ಪವಾಡಕ್ಕೆ ಬೆರಗಾದ ಜನರ ಬಾಯಲ್ಲಿ ಮುಂದೆ ಫಕೀರ ಎಂಬ ಮಾತೇ ಬರಲಿಲ್ಲ. ಆಮೇಲೆ ಶಿರಡಿಯ ಜನ ಆ ತಿಪ್ಪೆಯ ಮೇಲಣ ಅನರ್ಘ್ಯ ರತ್ನವನ್ನು ನಂಬಿದರು.
ಅಪಾರ ಅನುಕಂಪವುಳ್ಳ ಒಬ್ಬ ಸಂತ, ಒಬ್ಬ ಗುರು ಇಬ್ಬರನ್ನು ಏಕಕಾಲಕ್ಕೆ ಜನ ಅವರಲ್ಲಿ ಕಂಡರು. ೧೯೧೮ರ ತಮ್ಮ ಅಂತ್ಯ ಕಾಲದವರೆಗೂ ಅಲ್ಲೇ ಉಳಿದಿದ್ದರು.
ಮೂಲ ಕೃತಿಕಾರರಾದ ಅರ್ಥರ್ ಓಸ್ ಬರ್ನರು ಈ ಕೃತಿ ಜಗತ್ತಿಗೆ ಅರ್ಪಿಸಿ ಪ್ರಚಾರಿಸಿದ್ದಾರೆ. ಬಾಬಾರ ಮೇಲಿನ ಪ್ರೀತಿ, ಭಕ್ತಿಯ ಹುಮ್ಮಸ್ಸಿನಿಂದಾಗಿ ಲೇಖಕರು ಬಾಬಾರ ಜೀವನದ ಸುಸ್ಪಷ್ಟ ಪರಿಪ್ರೇಕ್ಷö್ಮದಲ್ಲಿ ಎದ್ದು ಕಾಣುವ ಅತಿ ಮಹತ್ವದ ಘಟನೆಗಳನ್ನು ಮತ್ತು ಬಾಬಾರ ಸರ್ವೋತ್ಕೃಷ್ಟ ವೈಭವವನ್ನು ಓದುಗರ ಹೃದಯಗಳಿಗೆ ನೇರವಾಗಿ ತಲುಪುವಂತೆ ನಿರೂಪಿಸಿದ್ದಾರೆ.
ಮರಣ ಮತ್ತು ಉಳಿವು ಎಂಬ ಅಧ್ಯಾಯ-೭ರಲ್ಲಿ ೧೮೮೬ರಷ್ಟು ಹಿಂದೆಯೇ ಬಾಬಾರ ಮರಣದ ಪೂರ್ವ ಸಿದ್ಧತೆ ನಡೆದಿತ್ತು. ಶಿರಡಿಯಲ್ಲಿನ ಮಸೀದಿಯಲ್ಲಿ ಬಾಬಾರ ಜೊತೆ ಮಲಗುತ್ತಿದ್ದ ಮಹಲ್ಸಪತಿ ಎಂಬ ಭಕ್ತರಿಗೆ ಬಾಬಾರು ಹೇಳಿದ್ದರಂತೆ! ನಾನು ಅಲ್ಲಾಹುನ ಬಳಿ ಹೋಗುತ್ತಿದ್ದೇನೆ. ಮೂರು ದಿನ ಈ ಶರೀರ ಕಾಪಾಡು. ನಾನು ವಾಪ್ಸು ಬಂದರೆ ನಾನೇ ಅದರ ಯೋಗಕ್ಷೇಮ ನೋಡಿಕೊಳ್ಳುತ್ತೇನೆ. ಹಾಗಿಲ್ಲದಿದ್ದಲ್ಲಿ ಅಲ್ಲಿ ಕಾಣುವ ಬಯಲಿನಲ್ಲಿ ಹೂತುಬಿಟ್ಟು ಅದರ ಮೇಲೆ ಗುರುತಿಗಾಗಿ ಎರಡು ಮರದ ಕಂಬಗಳನ್ನು ಸಿಕ್ಕಿಸು.
ಅವರ ಉಸಿರಾಟ ನಿಂತಿತು. ಕಾನೂನಿನುಸಾರ ೨೫ ಗಂಟೆಗೂ ಹೆಚ್ಚು ಕಾಲ ಪಾರ್ಥೀವ ಶರೀರ ಇಡುವಂತಿಲ್ಲ. ಪೌರಾಡಳಿತ ಅಧಿಕಾರಿಗಳು ಶರೀರ ಹೂಳಲು ಯಾ ಅಗ್ನಿ ಸಂಸ್ಕಾರ ಮಾಡಲು ಮಹಲ್ಸಪತಿಗೆ ಹೇಳಿದರು. ಅದನ್ನು ಅವರು ನಿರಾಕರಿಸಿದರು. ೩ನೇ ಉಸಿರಾಟ ಮತ್ತೆ ಆರಂಭ ಆಯ್ತು. ತರುವಾಯ ಸಾಯಿಬಾಬಾರು ಕಣ್ತೆರೆದು ಮರು ಜೀವಂತವಾದರು. ಇದಾಗಿ ೧೯೦೦ರ ಸುಮಾರಿಗೆ ಅವರ ಕೀರ್ತಿ ಎಲ್ಲೆಡೆ ಹರಡಿತು. ೧೯೧೦ ರಿಂದ ೧೯೧೮ರ ತನಕ ಬಾಂಬೆ ಮತ್ತಿತರ ಕಡೆಗಳಿಂದ ಶಿರಡಿಗೆ ಜನಸಾಗರವೇ ಹರಿದು ಬಂತು. ಬಾಬಾರು ಬಯಸದ ಡೌಲು, ವೈಭವ, ಸಾರ್ವಜನಿಕ ಧಾರ್ಮಿಕ ಉತ್ಸವ, ಆನೆ ಕುದುರೆಗಳ ಜೊತೆಗಿನ ಮೆರವಣಿಗೆಗಳು, ಬೆಳ್ಳಿಯ ರಥ, ಪರಿಮಳ ದ್ರವ್ಯ ಸಿಂಚನ, ನೃತ್ಯ ಕುಣಿತ ಹೀಗೆ ಭಕ್ತರು ಅವರನ್ನು ರತ್ನಾಭರಣಗಳಿಂದ ಅವರನ್ನು ಒಬ್ಬ ಮಹಾರಾಜರೋಪಾದಿಯಲ್ಲಿ, ದೈವವೊಂದರ ಪ್ರತಿಮೆಯಂತೆ ನಡೆಸಿಕೊಳ್ಳುತ್ತಿದ್ದರು. ಅವರು ಇವೆಲ್ಲವನ್ನೂ ಇಷ್ಟಪಡುತ್ತಿರಲಿಲ್ಲ. ಪರಂತು ಶಿಷ್ಯವೃಂದದ ಇಚ್ಛೆಯನ್ನು ಅವರಿಂದ ನಿರಾಕರಿಸಲಾಗುತ್ತಿರಲಿಲ್ಲ. ಇಷ್ಟೆಲ್ಲಾ ಇದ್ದೂ ಅವರು ಮಸೀದಿಯಿಂದ ಹೊರಹೋಗಿ ತನ್ನ ಆಹಾರಕ್ಕಾಗಿ ಭಿಕ್ಷೆ ಬೇಡುವುದು ಮುಂದುವರಿದಿತ್ತು. ಕ್ರಮೇಣ ಅವರು ಶಕ್ತಿಗುಂದಿದರು. ಅಸ್ತಮಾದಿಂದ ಬಹಳವಾಗಿ ನರಳಿದರು. ೧೯೧೬ರಲ್ಲಿ ವಿಜಯದಶಮಿಯ ದಿನ ಅವರಿಗೆ ಹತೋಟಿ ಮೀರಿದ ಭಾವೋದ್ರೇಕದ ಆಕ್ರಮಣವೊಂದರ ದಟ್ಟ ಅನುಭವವಾಗುತ್ತದೆ.
ಇಂದು ನಾನು ಗಡಿಗಳನ್ನು ದಾಟುವ ಸಮಯ ಎಂದು ಕಿರಿಚಿಕೊಳ್ಳುತ್ತಾರೆ. ಅದೇ ೨ ವರ್ಷಗಳ ತರುವಾಯ ೧೯೧೮ ಅದೇ ವಿಜಯದಶಮಿ ದಿನ ಅಕ್ಟೋಬರ್ ೧೫ ನಿಧನರಾಗುತ್ತಾರೆ.

–ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧.