ಬೆಂಗಳೂರು ಬಸವೇಶ್ವರ ನಗರದ ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘವು ಒಂದು ಪ್ರತಿಷ್ಠಿತ ನೋಂದಾಯಿತ ಸಂಘವಾಗಿದ್ದು ಸಾಂಸ್ಕೃತಿಕ ರಂಗದಲ್ಲಿ ತನ್ನದೇ ಛಾಪು ಮೂಡಿಸಿದೆ.
ಈಗಾಗಲೇ ಐದು ನೂರಕ್ಕೂ ಹೆಚ್ಚು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸಿದ ಹೆಗ್ಗಳಿಕೆ ಈ ಸಂಸ್ಥೆಗಿದೆ. ಈ ಸಂಸ್ಥೆಯಿಂದ ಕೊಡಮಾಡುವ ಪ್ರತಿಷ್ಠಿತ ಕನ್ನಡ ಸಾಂಸ್ಕೃತಿಕ ಸೇವಾ ರತ್ನ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿಗಳು, ನಾಟಕಕಾರರು ಗೊರೂರು ಅನಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷರು, ಚಲನಚಿತ್ರ ನಿರ್ದೇಶಕರು ಡಾ. ಗುಣವಂತ ಮಂಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 40 ವರ್ಷಗಳಿಂದ ನಿರಂತರ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ಬಿಡುವಿಲ್ಲದೇ ಕೆಲಸ ಮಾಡಿಕೊಂಡು ಬಂದಿರುವ ಗೊರೂರು ಅನಂತರಾಜು ವಿಶೇಷವಾಗಿ ರಂಗಭೂಮಿ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಎಲೆಮರೆ ಕಾಯಿಯಂತೆ ಇರುವ ಪ್ರತಿಭಾನ್ವಿತ ಕಲಾವಿದರು, ಗಾಯಕರು, ನೃತ್ಯ ಪಟುಗಳು, ಚಿತ್ರ ಕಲಾವಿದರು ಅಲ್ಲದೆ ಚಲನಚಿತ್ರ ನಟರ ಪರಿಚಯ, ನಾಟಕ ಪ್ರದರ್ಶನಗಳ ವಿಮರ್ಶೆ, ಚಲನಚಿತ್ರ ವಿಮರ್ಶೆ ಬರೆಯುತ್ತಾ ಸಾಂಸ್ಕೃತಿಕ ಲೋಕಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ಇವರು ಕಳೆದ 35 ವರ್ಷಗಳಿಂದ ಪತ್ರಿಕೆಗಳಲ್ಲಿ ಬರೆದ ಬರಹಗಳನ್ನು ಅಭಿನಯ ಅಭಿವ್ಯಕ್ತಿ, ರಂಗ ಪ್ರಯೋಗ, ನಿಂತು ಹೋದ ರಂಗ ವೈಭವ, ಕಲೆ ಸೆಲೆ, ಗಾನ ನಾಟ್ಯ ಎರಡೂ ರಮ್ಯ, ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ, ಬಣ್ಣದ ಬದುಕು ಯಾಕೂಬ, ರಂಗ ಸಿರಿ ಕಥಾ ಐಸಿರಿ, ರಂಗಾಂತರಂಗ, ಹಾಸನ ತಾಲೂಕು ಸಾಂಸ್ಕೃತಿಕ ಅವಲೋಕನ, ಸಂಗೀತ ನೃತ್ಯ ಸಂಗಮ, ಲೋಕ ದೃಷ್ಟಿ ಕಲಾ ಸೃಷ್ಟಿ ಇವೇ ಮೊದಲಾದ ಕೃತಿಗಳಲ್ಲಿ ದಾಖಲಿಸಿದ್ದಾರೆ. ಇವರ ವ್ಯವಸ್ಥೆ, ವೀರಪ್ಪನ್ ಭೂತ, ತೋಳ ಬಂತು ತೋಳ ನಾಟಕಗಳು ರಂಗದ ಮೇಲೆ ಯಶಸ್ವಿ ಪ್ರಯೋಗಗಳಾಗಿವೆ. ಕಾವ್ಯ, ಕಥೆ, ಹಾಸ್ಯ ಸಾಹಿತ್ಯ, ಲೇಖನ, ಪ್ರವಾಸ ಬರಹಗಳ ಕೃತಿ ಒಳಗೊಂಡು ಸುಮಾರು 60 ಕೃತಿಗಳು ಪ್ರಕಟಗೊಂಡಿವೆ. ಇವರ ಸೇವೆ ಇನ್ನೂ ಹೆಚ್ಚಿನದಾಗಿ ಸಮಾಜಕ್ಕೆ ದೊರೆಯಲೆಂದು ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ, ರಾಜ್ಯಾಧ್ಯಕ್ಷರು ಮಧು ನಾಯ್ಕ ಲಂಬಾಣಿ ಅಭಿನಂದಿಸಿದ್ದಾರೆ