Homeಸುದ್ದಿಗಳುಕವನಕವನ : ಒಂಟಿ ಬದುಕು

ಕವನ : ಒಂಟಿ ಬದುಕು

Published on

ಒಂಟಿ ಬದುಕು

ಅವಳು ಹೀಗೆ
ಒಬ್ಬಳೇ ರಾತ್ರಿಯಿಡಿ
ಕಿಟಕಿಯಾಚೆ
ಬೆಳಕು ಹುಡುಕುತ್ತಿದ್ದಳು.
ನಿದ್ದೆ ಇರದೆ ಗೋಡೆ
ಮೇಲಿನ ಗೊಂಬೆ ಚಿತ್ತಾರ
ಎನಿಸುತ್ತಿದ್ದಳು
ಪಕ್ಕದ ಕೋಣೆಯಲಿ
ಅಣ್ಣ ಅತ್ತಿಗೆಯರ
ಸರಸ ಸಲ್ಲಾಪಗಳ ಧ್ವನಿ
ಮೈ ಮೇಲೆ ಚೇಳು
ಹರಿದ ವೇದನೆ
ಹಬ್ಬಕ್ಕೆ ಬಂದ ತಂಗಿ ಭಾವ
ಒಳಗೊಳಗೆ ನೋವು
ಸಂಕಟ ನೋವು
ಆಗಾಗ ಅಪ್ಪ ಅಮ್ಮರ
ಕುಶಲೋಪಚಾರ
ಹುಣ್ಣಿಮೆಯ ಬೆಳದಿಂಗಳು
ಅವಳಿಗೆ ಅಮವಾಸೆ ಕತ್ತಲು
ಹೊಸ ಸೀರೆ ಉಡುಗೆ ತೊಟ್ಟ
ಗೆಳತಿಯರ ಗೌರಿ ಹಬ್ಬದ
ಸಡಗರ ಸಂಭ್ರಮ
ಇವಳು ತೊಟ್ಟಳು
ಬಿಳಿ ಬಣ್ಣದ ಹೆಣದ ಬಟ್ಟೆ
ಮದುವೆ ಮಂಗಳ
ಕಾರ್ಯದಲಿ ಇವಳು
ಇಣುಕುವಂತಿಲ್ಲ
ಕೊನೆ ಪಂಕ್ತಿಗೆ ಊಟ
ಮುಸುರೆ ತಿಕ್ಕುವ ಕೆಲಸ
ಯಾರೂ ಅವಳನ್ನು
ಅಪ್ಪುವುದಿಲ್ಲ ಕೇಳುವರಿಲ್ಲ
ಕೈ ಕುಲುಕುವುದಿಲ್ಲ
ಕಣ್ಣೀರ ಕೋಡಿಯ
ಒಂಟಿ ಬದುಕು
ದೀರ್ಘ ಸಮಯದ
ದೂರ ದಾರಿಯ
ನಿಟ್ಟುಸಿರೆ ಸಂಗಾತಿ
ಅವಳು ವಿಧವೆ
ಎಲ್ಲರಿದ್ದೂ ಅನಾಥೆ
______________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest articles

More like this