Homeಅಭಿಪ್ರಾಯಬೆಳಗಾವಿಯ ಅರ್ಹರನ್ನು ಗುರುತಿಸುವ ಕೆಲಸ ಮೊದಲು ಆಗಲಿ

ಬೆಳಗಾವಿಯ ಅರ್ಹರನ್ನು ಗುರುತಿಸುವ ಕೆಲಸ ಮೊದಲು ಆಗಲಿ

Published on

ಪ್ರೊ. ಪ್ರಹ್ಲಾದಕುಮಾರ ಭಾಗೋಜಿಯವರು ಒಂದು ಮಾತು ಹೇಳುತ್ತಿದ್ದರು : “ಯಾರ್ಯಾರನ್ನೋ ಎಲ್ಲೆಲ್ಲಿಂದಲೋ ಕರೆಸಿ ಮೆರವಣಿಗೆ ಮಾಡೋದು ಬಿಟ್ಟು ಸ್ಥಳೀಯ ಪ್ರತಿಭೆಗಳನ್ನು ಮೊದಲು ಗುರುತಿಸಿ ಗೌರವ ಕೋಡೋದು ಕಲೀರಿ ” ಅಂತ.

ನಿಜ, ನಾವು ಬಹಳ ಸಲ ಆ ತಪ್ಪನ್ನು ಮಾಡುತ್ತೇವೆ. ಭಾಗೋಜಿಯವರು ನನ್ನನ್ನು ಮತ್ತು ರವಿ ಉಪಾಧ್ಯರನ್ನು ಕೇಳಿದ್ದುಂಟು – ಯಾರಾದರೂ ಅಲ್ಲಿಯವರು ನಿಮ್ಮನ್ನು ಕರೆದು ಮಾಲೆ ಹಾಕಿದ್ದುಂಟೇನು? ನೀವು ಅವರಿಗೆ ಕೊಡೋ ಗೌರವ ಅವರು ನಿಮಗೆಂದಾದರೂ ಕೊಟ್ಟಿದ್ದಾರೇನು?” ಕಟು ವಾಸ್ತವ ಅದು.

“ಹಿತ್ತಲ ಗಿಡ ಮದ್ದಲ್ಲ” ಎಂಬ ನಾಣ್ಣುಡಿಯೇ ಇದೆಯಲ್ಲ. ನಮಗೆ ಕೆಲವು ಭ್ರಮೆಗಳಿರುತ್ತವೆ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದ ಹಾಗೆ. ನಮ್ಮ ನಡುವೆ ಇರುವ ಪ್ರತಿಭೆಗಳನ್ನೇ ನಾವು ಅಲಕ್ಷಿಸಿ ಎಲ್ಲೆಲ್ಲಿಯವರನ್ನೋ ಕರೆದು ಮೆರವಣಿಗೆ ಮಾಡುತ್ತೇವೆ. ಅದು ಬಹಳ ಮಟ್ಟಿಗೆ ನಿಜವೂ ಹೌದು.
ಡಾ. ಎಂ. ಎಂ. ಕಲಬುರ್ಗಿಯವರು ಕಟ್ಟೀಮನಿ ಟ್ರಸ್ಟ್ ಅಧ್ಯಕ್ಷರಿದ್ದಾಗ ಪ್ರತಿ ತಿಂಗಳು ಕೊನೆಯ ದಿನ ಒಬ್ಬ ಹಿರಿಯ ಸಾಹಿತಿಯ ಜೊತೆ ಸಂವಾದ ಕಾರ್ಯಕ್ರಮ ನಡೆಸುತ್ತಿದ್ದರು. ಅದು ಸಾಹಿತಿಗೆ ಕೊಡುವ ಒಂದು ಉತ್ತಮ ಗೌರವ. ಅವರು ಬೆಳಗಾವಿಯ ಹಲವು ಬರಹಗಾರರಿಗೆ ಆ ಗೌರವ ಕೊಟ್ಟರು. ನಿಜಕ್ಕೂ ಅದೊಂದು ಒಳ್ಳೆಯ ಮಾದರಿ. ಅವರ ನಂತರ ಅದು ಮುಂದುವರಿಯಲಿಲ್ಲ. (ಜಿನದತ್ತರು, ಸರಜೂ ಕಾಟಕರರು, ನನ್ನ ಸಹಿತ ಹಲವರು ಅಂತಹ ಸಂವಾದದಲ್ಲಿ ಭಾಗವಹಿಸಿದ್ದೇವೆ)

ಕೊನೆಯ ಪಕ್ಷ ಬೆಳಗಾವಿಯ ಬರೆಹಗಾರರು ರಚಿಸಿದ ಕೃತಿಗಳ ಕುರಿತಾದರೂ ಆ ಲೇಖಕರೊಡನೆ ಸಂವಾದ ನಡೆಯಬೇಕು. ( ಈಚೆಗೆ ಸಮಾಸ ವೇದಿಕೆ ರಂಶಾ ಮತ್ತು ಕುಸನೂರರ ಕುರಿತು ಸಂವಾದ ಏರ್ಪಡಿಸಿದ್ದನ್ನಿಲ್ಲಿ ಸ್ಮರಿಸಬಹುದು). ನಮಗೆ ಪ್ರಶಸ್ತಿ ಸನ್ಮಾನಗಳಿಗೂ ದೂರದವರೇ ಬೇಕು. ಅವರೂ ದೊಡ್ಡವರಿರಬಹುದು. ಆದರೆ ಸ್ಥಳೀಯವಾಗಿ ಎಷ್ಟೇ ಸಮರ್ಥರಿದ್ದರೂ ಬೆಲೆ ಕೊಟ್ಟು ಗೊತ್ತಿಲ್ಲ. ಗೌರವ ಡಾಕ್ಟರೇಟ್ ಗಳು, ರಾಜ್ಯೋತ್ಸವ ಪ್ರಶಸ್ತಿಗಳು ಸಹ ಹಾಗೇ. ಬೆಳಗಾವಿಯವರು ಅವರಿಗೆ ಯಾವ ಲೆಕ್ಕಕ್ಕೂ ಇಲ್ಲ. ಮೈಸೂರು ಬೆಂಗಳೂರು ಕಡೆಗೆ ಮಾತ್ರ ಯೋಗ್ಯತಾವಂತರಿದ್ದಾರೆ, ಬೆಳಗಾವಿಯಲ್ಲಿ ಯಾರೂ ಇಲ್ಲ ಎಂದೇ ಭಾವಿಸಿದಂತಿದೆ. ಬುದ್ಧಿ ಕುರುಡಾದಾಗ ಹೀಗೆಲ್ಲ ಆಗುತ್ತದೆ.

ಈ ವಿಷಯದ ಬಗ್ಗೆ ಚರ್ಚೆ ಆಗಲಿ ಎಂದು ನಾನು ಬಯಸುತ್ತೇನೆ. ಅಭಿಪ್ರಾಯ ಕೊಡಲು ಎಲ್ಲರಿಗೂ ಅವಕಾಶವಿದೆ.

ಎಲ್. ಎಸ್. ಶಾಸ್ತ್ತಿ

Latest articles

More like this