ಹುನಗುಂದ: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಖಾಸಗಿ ಬೆಳೆ ಸಮೀಕ್ಷೆದಾರರ (ಪಿಆರ್) ವಿವಿಧ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಶೀಘ್ರ ಈಡೇರಿಸುವಂತೆ ಒತ್ತಾಯಿಸಿ ಬೆಳೆ ಸಮೀಕ್ಷೆದಾರರು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಬೆಳೆ ಸಮೀಕ್ಷೆಗಾರ ಸಂಘದ ಅಧ್ಯಕ್ಷ ಬೊಮ್ಮೇಶ ಹುಗ್ಗಿ, ಬೆಳೆ ಸಮೀಕ್ಷೆ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಲು ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು. ಕಾರ್ಯಕ್ಕೆ ಅನುಗುಣವಾಗಿ ಸಮರ್ಪಕ ಗೌರವಧನ ನಿಗದಿಪಡಿಸಿ, ಬಾಕಿ ಇರುವ ಪಾವತಿಗಳನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು. ಗ್ರಾಮ ಮಟ್ಟದಲ್ಲಿ ಕಾರ್ಯನಿರ್ವಹಿಸುವ ವೇಳೆ ಎದುರಾಗುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರಭು ಬಡಕಣವರ ಮಾತನಾಡಿ, ಮೊಬೈಲ್ ಆ್ಯಪ್ನಲ್ಲಿ ಉಂಟಾಗುವ ತಾಂತ್ರಿಕ ದೋಷಗಳನ್ನು ಕೂಡಲೇ ಸರಿಪಡಿಸಿ, ಕಾರ್ಯಾವಧಿಯನ್ನು ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾಗಿ ವಿಸ್ತರಿಸಬೇಕು. ಪ್ರತಿ ಗ್ರಾಮದಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ರೈತರಿಗೆ ನಿರ್ದೇಶನ ನೀಡಬೇಕು. ಅದೇ ರೀತಿ ಸಮೀಕ್ಷೆಗಾರರು ಪ್ಲಾಟ್ ನಲ್ಲಿ ಕೆಲಸ ಮಾಡುವಾಗ ಯಾವುದೇ ರೀತಿಯ ಪ್ರಾಣಿ ಪಕ್ಷಿಗಳು ಹಾಗೂ ಕೀಟಕಗಳಿಂದ ಅಪಾಯವಾದರೆ ಸರ್ಕಾರ ಚಿಕಿತ್ಸೆ ವೆಚ್ಚ ಭರಿಸಬೇಕು. ಸೇವಾ ಭದ್ರತೆ ಜೊತೆಗೆ 10ಲಕ್ಷ ಜೀವವಿಮೆ ಮಂಜೂರ ಮಾಡಬೇಕು. ಪ್ಲಾಟ್ ಸರ್ವೇಗೆ 20ರಿಂದ 30ರೂ ಹೆಚ್ಚಿಸಬೇಕು. ಪ್ರತಿ ವರ್ಷ ರಾಷ್ಟ್ರೀಯ ಹಬ್ಬಗಳಲ್ಲಿ ನಮ್ಮವರಿಗೆ ಗೌರವ ಸತ್ಕಾರ ನೀಡಿ ವರ್ಷದುದ್ದಕ್ಕೂ ಕೆಲಸ ನೀಡಬೇಕು ತಪ್ಪಿದ್ದಲ್ಲಿ ತಿಂಗಳಿಗೆ 5ರಿಂದ 10ಸಾವಿರ ಸಹಾಯಧನ ನೀಡಬೇಕೆಂದು ಅವರು ಒತ್ತಾಯಿಸಿದರು.
ಗಂಗಾಧರ ಬಡಿಗೇರ, ಮುತ್ತಪ್ಪ ದೊಡ್ಡಿಮನಿ, ಸಂಗಣ್ಣ ಹುಬ್ಬಳ್ಳಿ, ಶಾಂತಪ್ಪ ಹಾಲಕೇರಿ ಸೇರಿದಂತೆ ಇತರರು ಪಾಲ್ಗೊಂಡಿದರು.