Homeಕವನಕವನ : ನಿನ್ನ ಜೊತೆಗಿದ್ದು

ಕವನ : ನಿನ್ನ ಜೊತೆಗಿದ್ದು

Published on

               ನಿನ್ನ ಜೊತೆಗಿದ್ದು

ನಿನ್ನೊಂದಿಗೆ ಇರುವಾಗ,
ನನಗನಿಸಿದ್ದಿದೆ—

ದಿಕ್ಕುಗಳು ಹತ್ತಿರವಾಗಿವೆ,
ಪ್ರತಿಯೊಂದು ದಾರಿಯೂ ಚಿಕ್ಕದಾಗಿದೆ,
ಮತ್ತು ಈ ಜಗತ್ತು ಕುಗ್ಗದೆ
ಒಂದು ಅಂಗಳದಷ್ಟೇ ಆಗಿದೆ—

ಅದು ಜನಜಂಗುಳಿಯಿಂದ ತುಂಬಿಹೋಗಿದೆ;
ಎಲ್ಲಿಯೂ ಏಕಾಂತವಿಲ್ಲ,

ಹೊರಗೂ ಇಲ್ಲ, ಒಳಗೂ ಇಲ್ಲ.
ಎಲ್ಲವೂ ಗಾತ್ರದಲ್ಲಿ ಚಿಕ್ಕದಾಗಿವೆ;
ಮರಗಳು ಎಷ್ಟು ಚಿಕ್ಕವಾಗಿವೆಯೆಂದರೆ
ನಾನು ಅವುಗಳ ತುದಿಯ ಮೇಲೆ ಕೈಯಿಟ್ಟು
ಆಶೀರ್ವದಿಸಬಲ್ಲೆ,
ಆಕಾಶವು ನನ್ನ ಎದೆಗೆ ತಾಗುತ್ತಿದೆ,

ಮತ್ತು ನಾನು ಬಯಸಿದಾಗಲೆಲ್ಲಾ,
ಮೋಡಗಳಲ್ಲಿ ನನ್ನ ಮುಖವನ್ನು ಅಡಗಿಸಿಕೊಳ್ಳಬಲ್ಲೆ.
ನಿನ್ನ ಸಾನ್ನಿಧ್ಯದಲ್ಲಿ, ನನಗನಿಸಿದ್ದಿದೆ—
ಪ್ರತಿಯೊಂದಕ್ಕೂ ಒಂದು ಅರ್ಥವಿದೆ ಎಂದು;

ಗಾಳಿಗೆ ತೂಗಾಡುವ ಹುಲ್ಲುಗರಿಗಳಿಗೂ,
ಕಿಟಕಿಯ ಮೂಲಕ ತೇಲಿಬರುವ ಮಂದಮಾರುತಕ್ಕೂ,
ಗೋಡೆಯ ಮೇಲೆ ಹರಿದಾಡಿ ಮುಂದೆ ಸಾಗುವ
ಸೂರ್ಯನ ಬೆಳಕಿಗೂ.

ನಿನ್ನ ಸಾನ್ನಿಧ್ಯದಲ್ಲಿ,
ನನಗನಿಸಿದ್ದಿದೆ—

ನಾವಿರುವುದು ಮಿತಿಗಳ ನಡುವಲ್ಲ,
ಬದಲಾಗಿ ಸಾಧ್ಯತೆಗಳ ನಡುವೆ ಎಂದು;
ಯಾವುದೇ ಗೋಡೆಯಲ್ಲೂ ಒಂದು ದ್ವಾರ ತೆರೆದುಕೊಳ್ಳಬಹುದು,
ಮತ್ತು ಆ ದ್ವಾರದ ಮೂಲಕವೇ,
ಒಂದು ಇಡೀ ಪರ್ವತವೇ ಸಾಗಿ ಹೋಗಬಹುದು.

ಶಕ್ತಿ ಸೀಮಿತವಾಗಿದ್ದರೆ
ಎಲ್ಲವೂ ನಿಷ್ಪ್ರಭಾವವಾಗುತ್ತದೆ;
ಬಾಹುಗಳು ಚಿಕ್ಕದಾಗಿದ್ದರೆ,
ಸಾಗರವೂ ಕೂಡ ಸೀಮಿತವೆನಿಸುತ್ತದೆ;

ಸಾಮರ್ಥ್ಯವೆಂಬುದು ಇಚ್ಛಾಶಕ್ತಿಯ ಇನ್ನೊಂದು ಹೆಸರು—

ಬದುಕು ಮತ್ತು ಸಾವಿನ ನಡುವಿನ ಆಯಾಮವು
ವಿಧಿಗೆ ಸೇರಿದ್ದಲ್ಲ, ಅದು ನನ್ನದು

ಮೂಲ ಹಿಂದಿ: ಸರ್ವೇಶ್ವರ ದಯಾಲ ಸಕ್ಸೇನಾ
ಕನ್ನಡಕ್ಕೆ: ಜಯಶ್ರೀ.ಜೆ. ಅಬ್ಬಿಗೇರಿ.

Latest articles

More like this