ನಮಿಸಬೇಕು ಗೆಳತಿ
ನೋವಿನ ನಂಜು ನುಂಗುತಲೇ ತುಟಿಯಂಚಲಿ ನಗೆ ಮಲ್ಲಿಗೆ ಅರಳಿಸಬೇಕು ಗೆಳತಿ
ಕಾವಿನ ಬಿಸಿಯ ಬಸಿಯುತಲೇ ಎದೆಯ ಉಮ್ಮಳವ ಮರೆಮಾಚಬೇಕು ಗೆಳತಿ
ಕಣ್ಣ ಮಳೆ ಕೆನ್ನೆ ತೋಯಿಸದಂತೆ ಕಣ್ಣಾಲಿಗಳಲ್ಲೇ ಬಂಧಿಸಿ ಕಾವಲಿಡಬೇಕು ಗೆಳತಿ
ಸುಣ್ಣವಾದರೂ ಸುಟ್ಟು ಮನದ ಭಿತ್ತಿಯ ಕಲೆಗಳನಳಿಸಿ ಬೆಳಕಾಗಬೇಕು ಗೆಳತಿ
ಕಂಗಳ ಕಣಿವೆಯ ತೊರೆ ಹರಿಯದಂತೆ ಆಣೆಕಟ್ಟು ಕಟ್ಟಿ ನೋವಿನ ತೊರೆ ಮಣಿಸಬೇಕು ಗೆಳತಿ
ಬೆಳದಿಂಗಳ ಮರೆಮಾಚಿ ನೀಡಿದ ಮಾಯದ ಗಾಯಗಳ ಮುದ್ದಿಸುತ ತಣಿಸಬೇಕು ಗೆಳತಿ
ಬರೀ ಬೇವುಣಿಸಿದ ಜೀವವ ಮನ್ನಿಸಿ ಕಹಿ ಕರಗಿಸಿ ಸವಿ ನಗೆಯ ಬೀರಬೇಕು ಗೆಳತಿ
ಪರಿ ಪರಿಯಾಗಿ ಪೀಡಿಸಿ ನೋಯಿಸಿದ ನೆನಪುಗಳಿಗೆ ಗೋರಿ ಕಟ್ಟಬೇಕು ಗೆಳತಿ
ಸಿಹಿಮಾತಿನ ಮಳೆಗರೆದು ಮೌನ ಕತ್ತಲೆಗೆ ನೂಕಿದವರ ನೆನೆದು ಬೆಳಕ ವೀಣೆ ನುಡಿಸಬೇಕು ಗೆಳತಿ
ಕಹಿ ಗೀರಿದ ಉರಿಯ ತಣಿಸುತ ಒಲವ ಬಳ್ಳಿಗೆ ತಂಪೆರೆದು ಪ್ರೀತಿ ದೀಪ ಮುಡಿಸಬೇಕು ಗೆಳತಿ
ಎಸೆದು ಹೋದ ಭಾವ ತಂತುಗಳ ಮತ್ತೆ ಬೆಸೆದು ಹೊಸ ಜೀವ ಮಿಡಿಸಬೇಕು ಗೆಳತಿ
ಮಸೆದು ಹೋದ ಎದೆಯಂಗಳಕೆ ಪ್ರೀತಿ ಉಸಿರು ತುಂಬಿ ಹಸಿರುಡಿಸಬೇಕು ಗೆಳತಿ
ನೆಲದ ನಂಬಿಕೆ ಬೇರಿಗೆ ಕೊಡಲಿಯಾದ ಅಂಬರದ ಚಂದಿರನ ಮನ್ನಿಸಬೇಕು ಗೆಳತಿ
ಕವಿದ ಕತ್ತಲಲ್ಲೂ ತೂರಿ ಬರುವ ತುಸು ಕಿರಣದ ಜಾಡಿನಲ್ಲಿ ಮುಂದೆ ಸಾಗಬೇಕು ಗೆಳತಿ
ಮುರಿದು ಹೋದ ಒಲವ ಗೂಡನು ಜೋಡಿಸಿ ಮತ್ತೆ ಕಟ್ಟಿ ಜತನದಿಂದ ಕಾಪಾಡಬೇಕು ಗೆಳತಿ
ತರಿದು ಹೋದ ಚಿಗುರೆಲೆಗಳ ಕೊರಡನು ಸದ್ದಿಲ್ಲದೆ ಮತ್ತೆ ಕೊನರಿಸಬೇಕು ಗೆಳತಿ
ಬಿಸಿಯುಸಿರ ಕುದಿಯೆಸರ ಕಾಣಿಕೆ ನೀಡಿದ ಶಶಿಗೆ ಇಂದು ನಮಿಸಬೇಕು ಗೆಳತಿ
ಹುಸಿ ಪ್ರೀತಿ ತೋರಿದ ಖುಷಿ ನೀಡದ ನೆನಪುಗಳ ತೋರಣಕೆ ಉಸಿರುಡಿಸಬೇಕು ಗೆಳತಿ
– ಇಂದಿರಾ ಮೋಟೆಬೆನ್ನೂರ. ಬೆಳಗಾವಿ