ಸ್ನೇಹದ ಕುಲುಮೆ
ಬದುಕಿನ ಪಯಣದ
ಹಾದಿಯಲಿ,
ಜೊತೆ ಜೊತೆಯಲಿ
ಸಾಗುವ ಬುತ್ತಿಯಿದು,
ಸವಿದಷ್ಟು ಮುಗಿಯದ
ಪ್ರೀತಿಯ ಸವಿಯನು,
ಹಂಚಿ ಉಣ್ಣುವ
ಪ್ರೀತಿ ಸ್ನೇಹವಿದು.
ಕಷ್ಟದ ಸುಡು ಸುಡು
ಬಿಸಿಲಿನಲ್ಲಿ,
ತಂಪಿನ ನೆರಳನು
ನೀಡುವ ಭಾವ,
ಕಣ್ಣಲಿ ನೀರು
ಜಾರುವ ಸಮಯದಿ,
ಹೆಗಲನು ಕೊಟ್ಟು
ಕಾಯುವ ಯೋಗ.
ಮುಖವಾಡ ಇಲ್ಲದ
ಸುಂದರ ಬದುಕು,
ನಮ್ಮನು ನಮ್ಮಂತೆ
ಒಪ್ಪುವ ಸರಕು,
ಸ್ವಾರ್ಥದ ಲೇಶವೂ
ಇಲ್ಲದ ಬಂಧ,
ಜೀವನ ಪೂರ್ತಿ
ಹರಡುವ ಗಂಧ.
ನಗುವಿನ ಅಲೆಯಲ್ಲಿ
ತೇಲಿಸುವ ಮನ,
ನೋವಿನ ಭಾರವ
ಇಳಿಸುವ ಕ್ಷಣ,
ಜನ್ಮ ಜನ್ಮದ ನಂಟಿನಂತೆ,
ಜೊತೆಯಲಿ ನಿಲ್ಲುವ
ಸ್ನೇಹದ ಬುತ್ತಿಯಂತೆ.
ಧನ-ಕನಕದ ಆಸೆ ಇಲ್ಲಿಲ್ಲ,
ಮನಸ್ಸುಗಳ ಮಿಲನವೇ
ಬಾಳೆಲ್ಲ
ಕಾಲವೇ ನಿರ್ಣಯ
ಬತ್ತದ ಚಿಲುಮೆ ,
ಅಳಿಯದೇ ಉಳಿಯುವ
ಸ್ನೇಹದ ಕುಲುಮೆ.
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ