Homeಲೇಖನಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!

ಆಸ್ಟ್ರೇಲಿಯಾದ ಮೆಲ್ಬೋರ್ನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಪುಟ್ಟಣ್ಣನ ಕತ್ತೆ!

Published on

ಅತ್ಯಂತ ಸೂಕ್ಷ್ಮ ಕಥಾನಕಗಳ ಮೂಲಕವೇ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವ ಸಿದ್ದು ಪೂರ್ಣಚಂದ್ರ ಇದೀಗ ಪುಟ್ಟಣ್ಣನ ಕತ್ತೆ ಎಂಬ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರ ಈಗ ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಆಯ್ಕೆಯಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ ಈ ಸಿನಿಮೋತ್ಸವದಲ್ಲಿ ಪುಟ್ಟಣ್ಣನ ಕತ್ತೆ ಚಿತ್ರ ಪ್ರದರ್ಶನಗೊಳ್ಳಲಿದೆ.

ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಜಾಗತಿಕ ಮಟ್ಟದ ಘನತೆ ಗೌರವವಿದೆ. ಈ ಸಿನಿಮೋತ್ಸವಕ್ಕೆ ಸಿನಿಮಾ ಆಯ್ಕೆಯಾಗುವುದು ಮಹತ್ವದ್ದಾಗಿದೆ. ಜಾಗತಿಕ ಮಟ್ಟದ ತುರುಸಿನ ಸ್ಪರ್ಧೆ ದಾಟಿ ಆಯ್ಕೆಯಾಗುವಲ್ಲಿ ಗುಣಮಟ್ಟದ ಕಂಟೆಂಟು ಹೊಂದಿರಬೇಕು. ಈ ನಿಟ್ಟಿನಲ್ಲಿ ಕನ್ನಡ ಸಿನಿಮಾ ಪುಟ್ಟಣ್ಣನ ಕತ್ತೆ ಈ ಸಿನಿಮೋತ್ಸವಕ್ಕೆ ಆಯ್ಕೆಯಾಗಿರುವುದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಕತ್ತೆಯೊಂದು ಕಥೆಯಲ್ಲಿ ಕೇಂದ್ರವಾಗಿ ಚಿತ್ರ ರೂಪುಗೊಂಡಿದೆ. ಬೆಂಗಳೂರಿನಲ್ಲಿ ಕತ್ತೆ ಹಾಲು ಮಾರುವವರು ಬರುತ್ತಿರುತ್ತಾರೆ. ಹೀಗೆ ಹಳ್ಳಿಯೊಂದರಿಂದ ಕತ್ತೆಯೊಂದಿಗೆ ಪಟ್ಟಣ ಸೇರಿದವನ ಸುತ್ತ ಘಟಿಸುವ ಆಸಕ್ತಿದಾಯಕ ಸನ್ನಿವೇಶಗಳು ಈ ಸಿನಿಮಾದ ಆಂತರ್ಯದಲ್ಲಿದೆ. ಭೀಮೇಶ್ ಗೌಡ ಈ ಕಥನದ ಆತ್ಮದಂಥಾ ಪುಟ್ಟಣ್ಣನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನೀಶ್ ಆರ್ಯನ್ ಈ ಸಿನಿಮಾದ ನಾಯಕರಾಗಿ ಸಂಕೀರ್ಣ ಪಾತ್ರದಲ್ಲಿ ನಟಿಸಿದ್ದಾರೆ.

ಪೂರ್ಣಚಂದ್ರ ಫಿಲಂಸ್ ಬ್ಯಾನರ್ ಅಡಿಯಲ್ಲಿ ತನ್ಮಯ್ ಎಸ್ ಗೌಡ ನಿರ್ಮಾಣ ಮಾಡಿರುವರು. ಸಿದ್ದು ಪೂರ್ಣಚಂದ್ರ ಕಥೆ ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವರು. ಅನೀಶ್ ಆರ್ಯನ್, ಭೀಮೇಶ್ ಗೌಡ, ಎನ್.ಟಿ ರಾಮಸ್ವಾಮಿ, ಕವಿತಾ ಕಂಬಾರ್, ವಿಭಾ, ಕಲಾರತಿ ಮಹದೇವ್, ರೋಹಿಣಿ, ರಶ್ಮಿ ಮೈಸೂರ್, ಲಕ್ಕಿ ಶಂಕರ್, ವಾಸು, ರಾಕಿ, ಮಂಡ್ಯ ಸಿದ್ದು ಮುಂತಾದವರ ತಾರಾಗಣವಿದೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಅನಂತ್ ಆರ್ಯನ್ ಸಂಗೀತ ನಿರ್ದೇಶನ ಮತ್ತು ದೀಪು ಸಿ.ಎಸ್ ಅವರ ಸಂಕಲನ ಈ ಚಿತ್ರಕ್ಕಿದೆ.

ಗೊರೂರು ಅನಂತರಾಜು,
ಹಾಸನ.
9449462879

Latest articles

More like this