ರೈತರ ದನಿಯಾಗಬೇಕಿದ್ದ ಯೂಟ್ಯೂಬರ್ ಗಳು ಕ್ರೀಡಾ ಮನರಂಜನೆಯಲ್ಲಿ…
ಮೂಡಲಗಿ: ಉತ್ತರ ಕರ್ನಾಟಕದ ಜನರ ಪ್ರೀತಿ, ಪ್ರೋತ್ಸಾಹ ಹಾಗೂ ಬೆಂಬಲದಿಂದ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಯೂಟ್ಯೂಬರ್ಗಳು ಮತ್ತು ಕಲಾವಿದರು, ಇದೀಗ ಕಬ್ಬು ಬೆಳೆಗಾರರ ಸಂಕಷ್ಟದ ಸಂದರ್ಭದಲ್ಲಿ ರೈತರ ಹೋರಾಟಕ್ಕೆ ಧ್ವನಿಯಾಗಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಈ ಜಾನಪದ ಕಲಾವಿದರ ಹಾಡುಗಳನ್ನು ನೃತ್ಯಗಳನ್ನು ನೋಡಿ ರಂಜನೆ ಪಡೆದು ಬೆಂಬಲ ನೀಡುವುದೆ ರೈತಾಪಿ ಜನರು. ಆದರೆ ಇಂದು ರೈತರು ಕಬ್ಬಿನ ಬೆಲೆ ನಿಗದಿಯ ಹೋರಾಟದಲ್ಲಿ ತೊಡಗಿರುವಾಗ ಈ ಕಲಾವಿದರು ಕ್ರಿಕೆಟ್ ಮನರಂಜನೆಯಲ್ಲಿ ತೊಡಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಗುರುತಿಸಿಕೊಂಡಿರುವ ಅನೇಕ ಯೂಟ್ಯೂಬರ್ಗಳು ಹಾಗೂ ಕಲಾವಿದರ ಬೆಳವಣಿಗೆಯಲ್ಲಿ ಈ ಭಾಗದ ರೈತರು, ರೈತ ಕುಟುಂಬಗಳ ಮಕ್ಕಳು ಹಾಗೂ ಗ್ರಾಮೀಣ ಜನರ ಪಾತ್ರ ಮಹತ್ವದ್ದಾಗಿದೆ. ತಮ್ಮ ನೆಚ್ಚಿನ ಕಲಾವಿದರ ವಿಡಿಯೋಗಳನ್ನು ವೀಕ್ಷಿಸುವುದು, ಹಂಚಿಕೊಳ್ಳುವುದು, ಪ್ರೋತ್ಸಾಹಿಸುವುದು ಹಾಗೂ ಅವರಿಗೆ ಜನಪ್ರಿಯತೆ ತಂದುಕೊಡುವಲ್ಲಿ ಉತ್ತರ ಕರ್ನಾಟಕದ ಜನರು ಪ್ರಮುಖ ಪಾತ್ರ ವಹಿಸಿದ್ದಾರೆ.
ಆದರೆ, ಇಂದು ಅದೇ ಉತ್ತರ ಕರ್ನಾಟಕದ ಕಬ್ಬು ಬೆಳೆಗಾರರು ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಈ ಭಾಗದ ಜನಪ್ರಿಯ ಯೂಟ್ಯೂಬರ್ಗಳು ಮತ್ತು ಕಲಾವಿದರು ರೈತರ ಪರವಾಗಿ ಧ್ವನಿ ಎತ್ತಬೇಕಿತ್ತು ಎಂಬುದು ಸಾರ್ವಜನಿಕರ ನಿರೀಕ್ಷೆಯಾಗಿತ್ತು. ಆದರೆ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಬದಲು ಗೋಕಾಕ ನಗರದಲ್ಲಿ ಕ್ರಿಕೆಟ್ ಆಟವಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ರೈತರ ಹಾಗೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಲಾವಿದರು ಮನರಂಜನೆ ನೀಡುವುದು ಅವರ ವೃತ್ತಿ ಮತ್ತು ವೈಯಕ್ತಿಕ ಆಯ್ಕೆಯಾದರೂ, ತಮಗೆ ಜನಪ್ರಿಯತೆ ತಂದುಕೊಟ್ಟ ಸಮಾಜ ಸಂಕಷ್ಟದಲ್ಲಿದ್ದಾಗ ಕನಿಷ್ಠ ಬೆಂಬಲದ ಮಾತನ್ನಾದರೂ ಆಡಬೇಕಿತ್ತು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.