Homeಲೇಖನಕನ್ನಡವೆಂದರೆ ಕೇವಲ ಭಾಷೆಯಲ್ಲ ಕನ್ನಡಿಗರ ಅಸ್ತಿತ್ವದ ಸಂಕೇತ

ಕನ್ನಡವೆಂದರೆ ಕೇವಲ ಭಾಷೆಯಲ್ಲ ಕನ್ನಡಿಗರ ಅಸ್ತಿತ್ವದ ಸಂಕೇತ

Published on

ಕನ್ನಡ ರಾಜ್ಯೋತ್ಸವ ನವಂಬರ್ 1 ಈ ದಿನಾಂಕವೊಂದು ಇತಿಹಾಸವಾಗಬಹುದು, ಆದರೆ ಭಾಷೆಯೊಂದು ಬದುಕಾಗಬೇಕಿದೆ!. ನವೆಂಬರ್ ತಿಂಗಳು ಸಮೀಪಿಸುತ್ತಿದ್ದಂತೆಯೇ ಕರ್ನಾಟಕದ ಬೀದಿ ಬೀದಿಗಳಲ್ಲಿ ಕೆಂಪು-ಹಳದಿ ಬಣ್ಣಗಳದ್ದೇ ಸಂಭ್ರಮ. ಕಟ್ಟಡಗಳ ಮೇಲೆ ಕನ್ನಡದ ಧ್ವಜ ಹಾರಾಡುತ್ತವೆ. ವಾಹನಗಳ ಮೇಲೆ ಕನ್ನಡದ ಘೋಷಣೆಗಳು ಮೊಳಗುತ್ತವೆ. ಶಾಲಾ-ಕಾಲೇಜುಗಳಲ್ಲಿ ಕನ್ನಡದ ಹಾಡುಗಳು ಕೇಳಿಬರುತ್ತವೆ. ಎಲ್ಲೆಡೆ ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ ಈ ಸಂಭ್ರಮದ ನಡುವೆ ನಾವೊಂದು ಪ್ರಶ್ನೆ ಕೇಳಿಕೊಳ್ಳಬೇಕಿದೆ.

ನವೆಂಬರ್ 1 ಎಂಬುದು ಕೇವಲ ಕ್ಯಾಲೆಂಡರ್‌ನಲ್ಲಿರುವ ಒಂದು ದಿನಾಂಕವಲ್ಲ; ಅದು ಕನ್ನಡಿಗರ ಆತ್ಮಗೌರವ, ಸ್ವಾಭಿಮಾನ, ಐಕ್ಯತೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಪ್ರತೀಕ. ಭಾಷೆಯ ಆಧಾರದ ಮೇಲೆ ಚದುರಿಹೋಗಿದ್ದ ಕನ್ನಡ ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್ 1ರಂದು ಮೈಸೂರು ರಾಜ್ಯದ ಉದಯಕ್ಕೆ ಕಾರಣವಾದ ಐತಿಹಾಸಿಕ ದಿನವೂ ಹೌದು.

1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲಾಯಿತು. ಹೀಗಾಗಿ ಕನ್ನಡ ರಾಜ್ಯೋತ್ಸವವೆಂದರೆ ಕೇವಲ ಸಂಭ್ರಮದ ಆಚರಣೆಯಲ್ಲ; ತಲೆತಲೆಮಾರುಗಳ ಹೋರಾಟ, ತ್ಯಾಗ, ಕನಸು ಮತ್ತು ಕನ್ನಡಿಗರ ಒಗ್ಗಟ್ಟಿನ ಫಲವಾಗಿ ದೊರೆತ ಅಸ್ಮಿತೆಯ ಪ್ರತೀಕ.

ಆದರೆ ಇಂದು ನಾವು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯೆಂದರೆ, ಕನ್ನಡ ರಾಜ್ಯೋತ್ಸವವನ್ನು ಕೇವಲ ಧ್ವಜಾರೋಹಣ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಿಹಿ ಹಂಚಿಕೆಗೆ ಸೀಮಿತಗೊಳಿಸುತ್ತಿದ್ದೇವೆಯೇ? ಅಥವಾ ಕನ್ನಡ ಭಾಷೆಯ ಉಳಿವು, ಬೆಳವಣಿಗೆ ಮತ್ತು ಮುಂದಿನ ಪೀಳಿಗೆಗೆ ಅದರ ಹಸ್ತಾಂತರದ ಜವಾಬ್ದಾರಿಯನ್ನು ನಿಜವಾಗಿಯೂ ನಿರ್ವಹಿಸುತ್ತಿದ್ದೇವೆಯೇ? ಈ ನಿಟ್ಟಿನಲ್ಲಿ ಕನ್ನಡ ಮತ್ತು ಕನ್ನಡಮ್ಮನನ್ನು ಉಳಿಸುವ ಜರೂರು ಪ್ರತಿಯೊಬ್ಬ ಕನ್ನಡಿಗನ ಮೇಲು ಇದೆ.

ಕನ್ನಡ ರಾಜ್ಯೋತ್ಸವದ ಐತಿಹಾಸಿಕ ಮಹತ್ವ
ಭಾಷಾವಾರು ಪ್ರಾಂತ್ಯಗಳ ರಚನೆಯ ಸಂದರ್ಭದಲ್ಲಿ ಕನ್ನಡ ಮಾತನಾಡುವ ಜನರು ವಿವಿಧ ಆಡಳಿತ ಪ್ರದೇಶಗಳಲ್ಲಿ ಹಂಚಿಹೋಗಿದ್ದರು. ಮದ್ರಾಸ್, ಬಾಂಬೆ, ಹೈದರಾಬಾದ್, ಕೊಡಗು ಮತ್ತು ಮೈಸೂರು ಸಂಸ್ಥಾನಗಳಲ್ಲಿ ವಾಸಿಸುತ್ತಿದ್ದ ಕನ್ನಡಿಗರನ್ನು ಒಂದೇ ಘಟಕದ ಅಡಿಯಲ್ಲಿ ತರಬೇಕೆಂಬ ಆಶಯ ಹುಟ್ಟಿತು. ಈ ಐಕ್ಯತೆಯ ಕನಸಿಗೆ ಆಲೂರು ವೆಂಕಟರಾಯರು ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರು ತಮ್ಮ ಬದುಕನ್ನೇ ಮುಡಿಪಾಗಿಟ್ಟರು. ಅವರ ಹೋರಾಟದ ಫಲವಾಗಿ ಕನ್ನಡ ಭಾಷಿಕ ಪ್ರದೇಶಗಳು ಒಂದಾದವು. ಇದು ಕೇವಲ ಭೌಗೋಳಿಕ ಗಡಿಗಳ ಸೇರ್ಪಡೆಯಾಗಿರಲಿಲ್ಲ; ಕನ್ನಡಿಗರ ಭಾವನೆ, ಸಂಸ್ಕೃತಿ, ಸಾಹಿತ್ಯ ಮತ್ತು ಅಸ್ತಿತ್ವದ ಉಳಿವಾಗಿತ್ತು.

ಆಧುನಿಕ ಸಮಾಜದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಸ್ತುತತೆ
ಜಾಗತೀಕರಣದ ಯುಗದಲ್ಲಿ ಭಾಷೆಗಳು ಕೇವಲ ಸಂವಹನದ ಸಾಧನಗಳಾಗಿ ಉಳಿದಿಲ್ಲ. ಅವು ವ್ಯಕ್ತಿಯ ಗುರುತು, ಸಾಮಾಜಿಕ ಸಂಬಂಧ, ಸಾಂಸ್ಕೃತಿಕ ಪರಂಪರೆ ಮತ್ತು ಜ್ಞಾನದ ಅಭಿವ್ಯಕ್ತಿಯ ಮಾಧ್ಯಮಗಳಾಗಿವೆ. ಇಂಗ್ಲಿಷ್ ಮತ್ತು ಇತರ ಭಾಷೆಗಳ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸುವುದು ನಮ್ಮೆಲ್ಲರ ಹೊಣೆ. ಇಂದು ಅನೇಕ ಮಕ್ಕಳು ಕನ್ನಡವನ್ನು ಮಾತನಾಡುವುದಕ್ಕಿಂತ ಅನ್ಯಭಾಷೆಗಳಲ್ಲಿ ಮಾತನಾಡುವುದನ್ನೇ ಪ್ರತಿಷ್ಠೆಯ ಸಂಕೇತವೆಂದು ಪರಿಭಾವಿಸುವ ಪರಿಸ್ಥಿತಿ ಕೆಲವು ಕಡೆಗಳಲ್ಲಿ ಕಂಡುಬರುತ್ತಿದೆ. ಕನ್ನಡ ಮಾತನಾಡುವುದು ಹಿಂದುಳಿದಿರುವಿಕೆಯಲ್ಲ; ಕನ್ನಡವನ್ನು ಮರೆತುಬಿಡುವುದೇ ನಮ್ಮ ಸಾಂಸ್ಕೃತಿಕ ಬೇರುಗಳಿಂದ ಹೊರನಡೆಯುವ ಅಪಾಯವಾಗಿದೆ. ಆದ್ದರಿಂದ ಕನ್ನಡ ರಾಜ್ಯೋತ್ಸವವು ನಮ್ಮಲ್ಲಿ ಭಾಷಾಭಿಮಾನವನ್ನು ಮಾತ್ರವಲ್ಲ, ಭಾಷೆಯ ಬಳಕೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನೂ ಬೆಳೆಸಬೇಕು.

ಕನ್ನಡ ಭಾಷೆ ಮತ್ತು ಶಿಕ್ಷಣದ ಸಂಬಂಧ
ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಶೋಧನಾ ಸಂಸ್ಥೆಗಳು ಕನ್ನಡದಲ್ಲಿ ಸಂಶೋಧನೆ, ಅನುವಾದ ಮತ್ತು ಜ್ಞಾನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕನ್ನಡವು ಕೇವಲ ಮನೆಯ ಮಾತಾಗಿರದೆ, ಜ್ಞಾನದ ಭಾಷೆ, ಸಂಕೇತ, ಸಂಶೋಧನೆಯ ಭಾಷೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಭಾಷೆಯಾಗಬೇಕು.

ಕನ್ನಡ ಉಳಿಸುವಿಕೆಯಲ್ಲಿ ಯುವಜನರ ಪಾತ್ರ
ಯುವಜನತೆ ಯಾವುದೇ ಸಮಾಜದ ಶಕ್ತಿ ಮತ್ತು ಭವಿಷ್ಯದ ಪ್ರತಿನಿಧಿಗಳು. ಇಂದಿನ ಯುವಕರು ತಂತ್ರಜ್ಞಾನ, ವಿಜ್ಞಾನ, ಉದ್ಯಮ, ಕಲೆ, ಸಾಹಿತ್ಯ ಮತ್ತು ಕ್ರೀಡೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಾಧನೆಗಳ ನಡುವೆ ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಮರೆಯದಂತೆ ಸಾಧನೆಯ ಮೂಲಕ ಕನ್ನಡಿಗರ ತಾಕತ್ತನ್ನು ಜಗತ್ತಿಗೆ ತಿಳಿಯಪಡಿಸಬೇಕಿದೆ. ಕನ್ನಡದ ಕುರಿತು ಕೇವಲ ಘೋಷಣೆ ಮೊಳಗಿಸುವುದಕ್ಕಿಂತ ಕನ್ನಡದಲ್ಲಿ ಹೊಸ ಜ್ಞಾನವನ್ನು ಸೃಷ್ಟಿಸುವುದು ಇಂದಿನ ಯುವಜನತೆಯ ನಿಜವಾದ ಕೊಡುಗೆಯಾಗಬೇಕು.

ಡಿಜಿಟಲ್ ಯುಗದಲ್ಲಿ ಕನ್ನಡದ ಬೆಳವಣಿಗೆ
ಇಂದು ಜಗತ್ತು ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಮತ್ತು ಅಂತರ್ಜಾಲದ ಮೂಲಕ ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕನ್ನಡ ಭಾಷೆಯೂ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕಬೇಕಾಗಿದೆ. ಕನ್ನಡದಲ್ಲಿ ಡಿಜಿಟಲ್ ಶಿಕ್ಷಣ ಸಾಮಗ್ರಿಗಳು ಹೆಚ್ಚಾಗಬೇಕು. ಕನ್ನಡ ಭಾಷೆಯಲ್ಲಿನ ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳು ಅಭಿವೃದ್ಧಿಯಾಗಬೇಕು. ಕೃತಕ ಬುದ್ಧಿಮತ್ತೆಯಲ್ಲಿ ಕನ್ನಡದ ಬಳಕೆ ಸರಿಯಾದ ಕ್ರಮದಲ್ಲಿ ವಿಸ್ತರಿಸಬೇಕು. ಕನ್ನಡದ ಪುಸ್ತಕಗಳು, ಶಾಸನಗಳು ಮತ್ತು ಜನಪದ ಸಾಹಿತ್ಯ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲ್ಪಡಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಶುದ್ಧ ಮತ್ತು ಅರ್ಥಪೂರ್ಣ ಕನ್ನಡದ ಬಳಕೆಗೆ ಪ್ರೋತ್ಸಾಹ ನೀಡಬೇಕು.

ಕನ್ನಡವು ತಂತ್ರಜ್ಞಾನದಿಂದ ದೂರ ಉಳಿಯುವ ಭಾಷೆಯಾಗಿ ಉಳಿಯುವುದಕ್ಕಿಂತ ; ತಂತ್ರಜ್ಞಾನವನ್ನು ತನ್ನದಾಗಿಸಿಕೊಂಡು ಜಗತ್ತಿನೊಂದಿಗೆ ಸಂವಾದಿಸುವ ಭಾಷೆಯಾಗಬೇಕು. ಕನ್ನಡ ರಾಜ್ಯೋತ್ಸವ ಆಚರಣೆಯು ಕನ್ನಡದ ಕಂಪನ್ನು ಉಳಿಸಿಕೊಳ್ಳುವಲ್ಲಿ ಮಹಿಳೆಯರ ಪಾತ್ರವೂ ಕೊಡುಗೆಯಾಗಬೇಕಿದೆ. ಏಕೆಂದರೆ
ಒಂದು ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿಯ ಮಾತು ಮಗುವಿನ ಮೊದಲ ಪಾಠವಾಗುತ್ತದೆ. ತಾಯಿಯ ಜೋಗುಳ ಕನ್ನಡ ನಾಡು ನುಡಿಯ ಕುರಿತಾಗಬೇಕಿದೆ, ಕಥೆ, ಗಾದೆ, ಸಂಪ್ರದಾಯಗಳ ಮೂಲಕ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಸಂಸ್ಕೃತಿ ವರ್ಗಾವಣೆ ಮಾಡಲೇಬೇಕಿದೆ. ಹಳ್ಳಿಗಳಲ್ಲಿ ಜನಪದ ಹಾಡುಗಳನ್ನು ಹಾಡುವ ಮಹಿಳೆಯರು, ಸುಗ್ಗಿಯ ಹಾಡುಗಳನ್ನು ಉಳಿಸಿಕೊಂಡಿರುವ ಹಿರಿಯರು, ಕೌಟುಂಬಿಕ ಸಂಪ್ರದಾಯಗಳನ್ನು ಮುಂದುವರಿಸುವ ತಾಯಂದಿರು ಕನ್ನಡದ ಜೀವಂತ ಸಾಂಸ್ಕೃತಿಕ ಪರಂಪರೆಯನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುವ ಪ್ರಸಾರಕರಾಗಬೇಕಿದೆ.

ಕನ್ನಡದ ನೆಲ, ಜಲ ಮತ್ತು ಸಂಸ್ಕೃತಿಯ ಸಂರಕ್ಷಣೆಯು ಕೇವಲ ಅಕ್ಷರಗಳ ಸಮೂಹವಲ್ಲ. ಕಾವೇರಿ, ಕೃಷ್ಣೆ, ತುಂಗಭದ್ರೆ, ಮಲೆನಾಡಿನ ಹಸಿರು, ಉತ್ತರ ಕರ್ನಾಟಕದ ಬಯಲುಸೀಮೆ, ಕರಾವಳಿಯ ಕಡಲ ತೀರದ ಸೌಂದರ್ಯದ ಪ್ರತೀಕವಾಗಿಯೂ ಕನ್ನಡವಿದೆ. ಕಲ್ಯಾಣ ಕರ್ನಾಟಕ ಹೋರಾಟದ ಇತಿಹಾಸ ಕನ್ನಡಿಗರ ಒಗ್ಗಟ್ಟಾಗಬೇಕಿದೆ.

ಯಕ್ಷಗಾನ, ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ, ವೀರಗಾಸೆ, ಡೊಳ್ಳು ಕುಣಿತ, ಸುಗ್ಗಿ ಕುಣಿತ ಮುಂತಾದ ಕಲೆಗಳು ನಮ್ಮ ಕನ್ನಡ ಮತ್ತು ಕನ್ನಡಿರ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಪ್ರಾದೇಶಿಕ ಭಾಷಾ ವೈವಿಧ್ಯವನ್ನು ಕಡೆಗಣಿಸದೆ, ಅವುಗಳನ್ನು ಕನ್ನಡದ ಸಂಪತ್ತಾಗಿ ಸ್ವೀಕರಿಸಬೇಕು.

ಕನ್ನಡಿಗರಿಗೆ ಎದುರಾಗಿರುವ ಸವಾಲುಗಳು

ನಗರೀಕರಣದ ಪರಿಣಾಮವಾಗಿ ಸ್ಥಳೀಯ ಭಾಷಾ ಬಳಕೆಯಲ್ಲಿ ಆಗುತ್ತಿರುವ ಬದಲಾವಣೆ. ಕನ್ನಡ ಮಾಧ್ಯಮದ ಶಿಕ್ಷಣದ ಬಗ್ಗೆ ಕೆಲವರಲ್ಲಿ ಕಂಡುಬರುವ ಕೀಳರಿಮೆ ಹೆಚ್ಚುತ್ತಿರುವುದು. ಉದ್ಯೋಗ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕನ್ನಡದ ಬಳಕೆಯ ಸೀಮಿತತೆಯೂ ಕನ್ನಡದ ಉಳಿವಿಗೆ ಕಂಠಕವಗಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡದ ತಪ್ಪಾದ ಬಳಕೆ ಮತ್ತು ಭಾಷಾ ನಿರ್ಲಕ್ಷ್ಯ. ಇದನ್ನು ಸರಿಪಡಿಸುವಲ್ಲಿ ಸರ್ಕಾರವೊಂದೇ ಶ್ರಮ ಹಾಕಿದರೆ ಸಾಲದು. ಕುಟುಂಬ, ಶಿಕ್ಷಣ ಸಂಸ್ಥೆ, ಮಾಧ್ಯಮ, ಸಾಹಿತಿಗಳು, ಯುವಜನತೆ ಮತ್ತು ಪ್ರತಿಯೊಬ್ಬ ಕನ್ನಡಿಗರೂ ತಮ್ಮ ಪಾಲಿನ ಜವಾಬ್ದಾರಿಯನ್ನು ನಿರ್ವಹಿಸಬೇಕು.

ಒಟ್ಟಾರೆಯಾಗಿ ಕನ್ನಡ ರಾಜ್ಯೋತ್ಸವದ ನಿಜವಾದ ಅರ್ಥವನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಬೇಕು. ಇತರ ಭಾಷೆಗಳನ್ನು ಗೌರವಿಸುತ್ತಲೇ ಕನ್ನಡ ಭಾಷೆಯನ್ನು ಆರಾಧಿಸಬೇಕು. ಕನ್ನಡದ ಭವಿಷ್ಯವು ಕೇವಲ ಸರ್ಕಾರದ ಆದೇಶಗಳಲ್ಲಿ, ಭಾಷಾ ನೀತಿಗಳಲ್ಲಿ ಅಥವಾ ರಾಜ್ಯೋತ್ಸವದ ಕಾರ್ಯಕ್ರಮಗಳಲ್ಲಿ ಅಡಗಿಲ್ಲ. ನಮ್ಮ ಮನೆ ಮನಗಳ ಭಾಷೆಯಲ್ಲಿ, ಶಾಲಾಪಾಠದಲ್ಲಿ, ಕಚೇರಿಯ ವ್ಯವಹಾರದಲ್ಲಿ, ವಿಶ್ವವಿದ್ಯಾಲಯದ ಸಂಶೋಧನೆಯಲ್ಲಿ ಮತ್ತು ಡಿಜಿಟಲ್ ಜಗತ್ತಿನ ಸಂವಹನದಲ್ಲಿ ಅಡಗಿದೆ. ಕನ್ನಡವನ್ನು ಉಳಿಸುವುದು ಎಂದರೆ ಇತರ ಭಾಷೆಗಳನ್ನು ವಿರೋಧಿಸುವುದಲ್ಲ. ಬಹುಭಾಷಾ ಜಗತ್ತಿನಲ್ಲಿ ಕನ್ನಡಕ್ಕೆ ಗೌರವಯುತ ಸ್ಥಾನ ಕಲ್ಪಿಸುವುದಾಗಿದೆ. ಕನ್ನಡದ ನಾಳೆಯನ್ನು ಕಟ್ಟುವ ಸಂಕಲ್ಪವನ್ನು ಮಾಡಬೇಕಾದ ದಿನವಿದು.

ಜೈ ಕನ್ನಡಾಂಬೆ! ಜೈ ಕರ್ನಾಟಕ ಮಾತೆ!
ಸಿರಿಗನ್ನಡಂ ಗೆಲ್ಗೆ! ಸಿರಿಗನ್ನಡಂ ಬಾಳ್ಗೆ!
ಸರ್ವರಿಗೂ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಡಾ. ಮೇಘನ. ಜಿ
ಉಪನ್ಯಾಸಕರು ಮತ್ತು ಸಂಯೋಜಕರು
ಸಮಾಜಶಾಸ್ತ್ರ ಅಧ್ಯಯನ ವಿಭಾಗ
ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯ, ರಾಯಚೂರು.

Latest articles

More like this