Homeಸುದ್ದಿಗಳುಕವನಕವನ : ಅದೆಂತಹ ಹೆಸರನಿಟ್ಟೆ

ಕವನ : ಅದೆಂತಹ ಹೆಸರನಿಟ್ಟೆ

Published on

ಅದೆಂತಹ ಹೆಸರನಿಟ್ಟೆ

ಕಟು ಪದದಿ ಕುಟುಕಿ ಪ್ರೀತಿಯಿಂದ ನಗುವ ಹೂಮನದ ಸ್ನೇಹ ಗಾನಕೆ ಅದೆಂತಹ ಹೆಸರನಿಟ್ಟೆ
ಹಾಡಿ ಹರಸಿ ಹೃದಯದುಂಬಿ ಕುಣಿವ ಭಾವ ತಾನಕೆ ಅದೆಂತಹ ಹೆಸರನಿಟ್ಟೆ

ನೂರು ಸಲ ದೂರ ನೂಕಿದರೂ ಉಸಿರೆತ್ತದ ಹದುಳ ಜೀವ ಮಿಡಿದ ಮಧುರ ಗಾನವದು
ಮಾತಿನ ಚೂರಿಯಿಂದ ಇರಿದು ಕೊಂದು ಪವಿತ್ರ ನೇಹ ಪಾನಕೆ ಅದೆಂತಹ ಹೆಸರನಿಟ್ಟೆ

ಕಾವ್ಯಯಾನದ ಪಥಿಕ ಮೃದು ಮಧುರ ಎದೆಹಾಸ ತುಂಬೆಲ್ಲ ಮಾತಿನ ಮುಳ್ಳುಗಳ ನೇವರಿಕೆ
ಮಲ್ಲಿಗೆ ಮನದ ಮೌನ ದೋಣಿಯ ಪ್ರೀತಿ ಪಯಣ ಯಾನಕೆ ಅದೆಂತಹ ಹೆಸರನಿಟ್ಟೆ

ತೊಟ್ಟು ನೀನಿತ್ತ ಗಾಯಗಳ ಆಭರಣ ಮೈ ನೇವರಿಸಿ ಹೃದಯ ಭಿತ್ತಿಯಲ್ಲಿ ಕಾಪಿಟ್ಟು ಕೊಂಡಿರುವೆ.
ಕೊಟ್ಟ ನೋವುಗಳ ಸರಮಾಲೆ ಹೊತ್ತು ನಿನ್ನೆಡೆಗೆ ಬರುವ ಒಲವ ಹೆಜ್ಜೆ ಪಾದಕೆ ಅದೆಂತಹ ಹೆಸರನಿಟ್ಟೆ.

ಬೆಳದಿಂಗಳ ಕಸಿದು ಕಾರ್ಗತ್ತಲು ನೀವಿದ ಶಶಿಗೆ ಗೊತ್ತಿಲ್ಲವೇ ತಾನು ನೀಡಿದ ನೋವು
ಇಂದುವಿನ ಅಂತರಂಗದಿ ಅರಳಿದ ಹೂಗೆಜ್ಜೆ ನಾದಕೆ ಅದೆಂತಹ ಹೆಸರನಿಟ್ಟೆ

ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Latest articles

More like this