Homeಸುದ್ದಿಗಳುಪರಿಪಕ್ವ ಮನಸ್ಸು ಮೋಕ್ಷಕ್ಕೆ ಮಾರ್ಗ: ಹಿರೇಮಠ

ಪರಿಪಕ್ವ ಮನಸ್ಸು ಮೋಕ್ಷಕ್ಕೆ ಮಾರ್ಗ: ಹಿರೇಮಠ

Published on

ಬಾಗಲಕೋಟೆ: ಮನಸ್ಸನ್ನು ಪಕ್ವಗೊಳಿಸಿಕೊಂಡಾಗ ಮಾತ್ರ ಭಕ್ತಿಸ್ಥಲಕ್ಕೆ ಮಾರ್ಗ ದಕ್ಕುತ್ತದೆ ಎಂದು ಪ್ರಾಧ್ಯಾಪಕ ಪ್ರೊ ಜಿ ಜಿ ಹಿರೇಮಠ ಅಭಿಪ್ರಾಯಪಟ್ಟರು.

ಅವರು ನಗರದ ಪದ್ಮನಯನ ಬಡಾವಣೆಯ ಶಿಕ್ಷಕ ರಮೇಶ ಬಳ್ಳಾ ಅವರ ಮನೆಯಲ್ಲಿ ಬಾಗಲಕೋಟೆ ದೇವಾಂಗ ಸಮಾಜದ ವತಿಯಿಂದ ಹಮ್ಮಿಕೊಂಡ ಮನೆ-ಮನೆಗಳಲ್ಲಿ ದಾಸಿಮಯ್ಯ ವಚನ-ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಜ್ಞಾನ ಮಾರ್ಗದಲ್ಲಿ ಹಲವು ಸಂದಿಗ್ಧತೆಗಳನ್ನು ದಾಟಿ ಭಕ್ತಿಮಾರ್ಗಕ್ಕೆ ಪ್ರವೇಶ ಪಡೆಯುತ್ತೇವೆ. ಭಕ್ತಿಯು ನಿಷ್ಕಲ್ಮಶವಾಗಿದ್ದು ನಿರಪೇಕ್ಷ ಭಾವನೆಯಿಂದ ಕೂಡಿರಬೇಕು. ಹಲವು ಅಪೇಕ್ಷೆಗಳನ್ನಿಟ್ಟುಕೊಂಡು ಆಡಂಬರ ತೋರುವುದರಿಂದ ದೈವದ ಒಲುಮೆ ದಕ್ಕುವುದಿಲ್ಲ; ಬದಲಾಗಿ ದೇವರ ಬಗ್ಗೆ ಅಪನಂಬಿಕೆ ಉಂಟಾಗುತ್ತದೆ. ಬಲವಾದ ಕಾಯುವಿಕೆಯ ತರುವಾಯ ಮನಸ್ಸು ಪರಿಪಕ್ವಗೊಂಡು ಐಕ್ಯಸ್ಥಲದತ್ತ ಸಾಗಿ ಬದುಕು ಪರಿಪೂರ್ಣ ಗೊಳ್ಳುತ್ತದೆ ಎಂದರು.

ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಉಪನ್ಯಾಸಕ ಎಸ್ ವಿ ಚೌಡಾಪೂರ ಮಾತನಾಡುತ್ತ ಬಾಗಲಕೋಟೆ ದೇವಾಂಗ ಸಮಾಜದ ವಚನಗೋಷ್ಠಿ ಸಾಗಿಬಂದ ಹಾದಿಯನ್ನು ವಿವರಿಸಿದರು. ದಾಸಿಮಯ್ಯನವರು ನಮ್ಮ ಸಮಾಜದ ಹೆಮ್ಮೆ. ಅವರ ವಚನಗಳನ್ನು ಮನೆ-ಮನಗಳಿಗೆ ಮುಟ್ಟಿಸುವ ಕಾರ್ಯವನ್ನು ಕಳೆದೆರಡು ವರ್ಷದಿಂದ ಮಾಡಿಕೊಂಡು ಬಂದಿದ್ದೇವೆ ಎಂದರು.

ಸಾನಿಧ್ಯವಹಿಸಿದ್ದ ಪ್ರದೀಪ ಗುರೂಜಿ ಮಾತನಾಡಿ, ಆದ್ಯ ವಚನಕಾರ ದೇವರ ದಾಸಿಮಯ್ಯನವರು ಸರಳ ಮಾರ್ಗದ ಮೂಲಕ ಬದುಕಿನ ತತ್ವವನ್ನು ಬೋಧಿಸಿದ್ದಾರೆ. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವ ದಾಸಿಮಯ್ಯ ಕಾಟಾಚಾರದ ಭಕ್ತಿಯ ಕುರಿತು ಅವರು ನೇರ ನಿಷ್ಠುರ ಮಾತುಗಳ ಮೂಲಕ ಖಂಡಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಹೆಚ್ಚುವರಿ ಅಪರ ನಿಬಂಧಕ ಎಚ್ ವೈ ಗದ್ದನಕೇರಿ, ಉಪನ್ಯಾಸಕ ಶಿವಶಂಕರ ಮುತ್ತಗಿ, ಸುರೇಶ್ ಉಕ್ಕಲಿ ಉಪಸ್ಥಿತರಿದ್ದರು.

ಅಶೋಕ ಬಳ್ಳಾ ಪ್ರಾಸ್ತಾವಿಕ ಮಾತಗಳನ್ನಾಡಿದರು. ರಮೇಶ ಬಳ್ಳಾ ಸ್ವಾಗತಿಸಿದರು. ಸುರೇಶ್ ದಡ್ಡಿ ನಿರೂಪಿಸಿದರು.

Latest articles

More like this