HomeUncategorizedಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು - ಡಾ.ಸ್ವಾತಿ

ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು – ಡಾ.ಸ್ವಾತಿ

Published on

ಬನವಾಸಿ: ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರದ ಮೇಲೆ ದುಷ್ಪರಿಣಾಮಗಳು ಬೀರುತ್ತಿರುವುದರಿಂದ ಪ್ರತಿಯೊಬ್ಬರು ಜಾಗೃತರಾಗಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಗುಡ್ನಾಪುರ ಆಯುಷ್ಮಾನ್ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿ ಡಾ. ಸ್ವಾತಿ ಹೇಳಿದರು.

ಅವರು ಸಮೀಪದ ಕಂತ್ರಾಜಿ ಗ್ರಾಮದ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ರಾಣಿ ಚೆನ್ನಮ್ಮ ಮಹಿಳಾ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡ ಜ್ವಲಂತ ಮಾಹಿತಿ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡುತ್ತಾ, ಪರಿಸರ ಸಂರಕ್ಷಣೆ ಮತ್ತು ಪರಿಸರದ ಸ್ವಚ್ಛತೆ ಆಗಬೇಕಾದರೆ ಪ್ಲಾಸ್ಟಿಕ್‌ ಸಂಪೂರ್ಣವಾಗಿ ನಿಷೇಧಿಸಲು ಸಾರ್ವಜನಿಕರು ಪಣ ತೊಡಬೇಕು. ಪ್ಲಾಸ್ಟಿಕ್‌ ಬಳಕೆಯಿಂದ ಮಣ್ಣು, ನೀರು, ನಮ್ಮ ನಮ್ಮ ಸುತ್ತ ಮುತ್ತಲಿನ ಜೀವ ಸಂಕುಲ ಮತ್ತು ಮಾನವನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತದೆ. ಪ್ಲಾಸ್ಟಿಕ್‌ನಲ್ಲಿರುವ ಹಾನಿಕಾರಕ ಅಂಶಗಳು ಮನುಷ್ಯನ ದೇಹಕ್ಕೆ ನಾನಾ ಹಂತಗಳಲ್ಲಿ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತವೆ. ಕ್ಯಾನ್ಸರ್, ಥೈರಾಯ್ಡ್‌, ಆಸ್ತಮಾ, ಹೃದಯ ಕಾಯಿಲೆಗಳು, ಕೂದಲು ಮತ್ತು ಚರ್ಮದ ಸಮಸ್ಯೆ, ನರಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೂಲ ಕರ್ತವ್ಯದ ಜೊತೆಗೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಎಲ್ಲರೂ ತಮ್ಮ ಮನೆಗಳ ಮುಂದೆ ಸಸಿ ನೆಡುವ ಮೂಲಕ ಪರಿಸರ ಕಾಳಜಿ ತೋರಬೇಕು. ಪ್ಲಾಸ್ಟಿಕ್‌ ಬಳಕೆ ಮಾಡುವುದನ್ನು ತಡೆಗಟ್ಟಬೇಕು
ಎಂದು ತಿಳಿಸಿದರು.

ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯ ಅಧಿಕಾರಿ ಮಲ್ಲಿಕಾ ಶೆಟ್ಟಿ ಮಾತನಾಡಿ, ಪ್ರತಿಯೊಬ್ಬರ ಮನೆಗಳಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಲು ಪಣತೊಡಬೇಕಾಗಿದೆ. ಅಡುಗೆ ಮನೆಯ ಸಾಮಾಗ್ರಿಗಳು ಪ್ಲಾಸ್ಟಿಕ್‌ಮಯವಾಗುವುದನ್ನು ನಿಲ್ಲಿಸಬೇಕು. ಮಾರುಕಟ್ಟೆಗೆ ತೆರಳಿದಾಗ ಪ್ಲಾಸ್ಟಿಕ್‌ ಕವರ್‌ಗಳನ್ನು ನೆಚ್ಚಿಕೊಂಡಿರಬಾರದು. ಪ್ಲಾಸ್ಟಿಕ್‌ ಬದಲಾಗಿ ಪರಿಸರಸ್ನೇಹಿ ಅನುಸರಿಸಿದರೆ ಪರಿಸರ ಸಂರಕ್ಷ ಣೆ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಯೋಜನೆಯ ವಲಯ ಮೇಲ್ವಿಚಾರಕಿ ಸುನಂದಾ ನಾಯ್ಕ್ ಮಾತನಾಡಿದರು. ರಾಣಿ ಚೆನ್ನಮ್ಮ ಮಹಿಳಾ ಜ್ಞಾನ ಕೇಂದ್ರದ ಸದಸ್ಯೆ ಸುಮಿತ್ರ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಶಿವಾಜಿ ಸೇರಿದಂತೆ ರಾಣಿ ಚೆನ್ನಮ್ಮ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

Latest articles

More like this