HomeUncategorizedಪ್ರಧಾನಿಯ ಮಾತು ದೇಶಹಿತದ ದೃಷ್ಟಿಯಿಂದ ಸ್ವೀಕರಿಸಬೇಕು

ಪ್ರಧಾನಿಯ ಮಾತು ದೇಶಹಿತದ ದೃಷ್ಟಿಯಿಂದ ಸ್ವೀಕರಿಸಬೇಕು

Published on

ಪ್ರಧಾನಿ ನರೇಂದ್ರ ಮೋದಿಯವರು ಸದ್ಯದ ಮಧ್ಯಪ್ರಾಚ್ಯ ಯುದ್ಧದ ಮೂಲಕ ನಿರ್ಮಾಣವಾದ ಪರಿಸ್ಥಿತಿಯನ್ನು ಹಿನ್ನೆಲೆಯಾಗಿರಿಸಿಕೊಂಡು ದೇಶದ ಪ್ರಜೆಗಳು ಒಂದು ವರ್ಷ ಕಾಲ ಅನುಸರಿಸಬೇಕಾದ ಕೆಲವು ಮಾರ್ಗದರ್ಶಿ ಸೂತ್ರಗಳ ಕುರಿತು ಹೇಳಿದ್ದಕ್ಕೆ ಕರ್ನಾಟಕದ ಮಹಾಮಹಾ ಕಾಂಗ್ರೆಸ್ ನಾಯಕರೆಲ್ಲ ಪ್ರತಿಕ್ರಿಯಿಸಿರುವ ವಿಚಾರಗಳನ್ನು ನೋಡಿದಾಗ ಈ ಬಗೆಯ ಕುತ್ಸಿತ ವಿಚಾರ ಹೊಂದಿದ ಈ ನಾಯಕರ ಕುರಿತಾಗಿಯೇ ಒಂದು ಬಗೆಯ ಅಸಹ್ಯ ಭಾವನೆ ಉಂಟಾದರೆ ಅಚ್ಚರಿಯಿಲ್ಲ. ಜನಸಾಮಾನ್ಯರಲ್ಲಿ ಅಂತಹ ಭಾವನೆ ಉಂಟಾಗಿರುವುದೂ ನಿಜ. ಏಕೆಂದರೆ ಪ್ರಧಾನಿ ಮಾತನ್ನು ಸಹಜವಾಗಿ ಸ್ವೀಕರಿಸುವ ಬದಲು ತಮ್ಮ ಮೋದಿವಿರೋಧಿ ಮತ್ತು ದೇಶವಿರೋಧಿ ಮನಸ್ಥಿತಿಗೆ ತಕ್ಕಂತೆ ಮಾತನಾಡಿ ಈ ನಾಯಕರು ತಮ್ಮ ವಿಕೃತ ಮನಸ್ಥಿತಿಯನ್ನೇ ಪ್ರದರ್ಶಿಸಿದ್ದಾರೆ.

ಪ್ರಧಾನಿ ಯಾವ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸಲಹೆ ಸೂಚನೆ ನೀಡಿದ್ದಲ್ಲ. ಅದು ಕೇವಲ ಅಂದರೆ ಕೇವಲ ಭಾರತದ ಸಮಗ್ರ ಹಿತದ ದೃಷ್ಟಿಯಿಂದ ನೀಡಿದ್ದು. ಅವರು ಹೇಳಿದ್ದಕ್ಕೆಲ್ಲ ಅಪಾರ್ಥ ಹಚ್ಚಿ ಅಪಹಾಸ್ಯ ಮಾಡುವ ಕಾಂಗ್ರೆಸ್ ನಾಯಕರ ಈ ಬಗೆಯ ಪ್ರವೃತ್ತಿ ಹೊಸದೇನಲ್ಲ. ಆದ್ದರಿಂದ ಜನರಿಗೆ ಅದರಿಂದ ಆಶ್ಚರ್ಯವೇನೂ ಆಗುತ್ತಿಲ್ಲ. ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಶಿವಕುಮಾರ, ಬಿಕೆ ಹರಿಪ್ರಸಾದರ ಸಹಿತ ಕೆಲವು ನಾಯಕರು ಆಡಿದ ಮಾತುಗಳಲ್ಲಿ ಮೋದಿ ವಿರುದ್ಧ ವಿಷ ಕಾರುವ ಹಳೆಯ ಚಾಳಿ ಮುಂದುವರಿದಿರುವುದು ಕಂಡುಬರುತ್ತಿರುವುದು ಸುಳ್ಳಲ್ಲ.

ಅಷ್ಟಕ್ಕೂ ಮೋದಿ‌ ನೀಡಿದ ಸಲಹೆಗಳಾದರೂ ಏನು? ಸ್ವಚ್ಛ ಮನಸ್ಸಿನಿಂದ ಯೋಚಿಸುವವರಿಗೆ ಅದರಲ್ಲಿ ಯಾವ ತಪ್ಪೂ ಕಂಡುಬರುವುದಿಲ್ಲ. ನಾಲಿಗೆ ಇದೆ ಎಂದು ಮನಸ್ಸಿಗೆ ಬಂದದ್ದು ಮಾತಾಡಲು ಹೋದರೆ ಮಾತಾಡಿದವರ ಮರ್ಯಾದೆಯೇ ಹೋಗುತ್ತದೆ ಹೊರತು ಬೇರೆಯವರದಲ್ಲ. ಜಗತ್ತಿನಲ್ಲಿ ಪ್ರಮುಖ ಯುದ್ಧಗಳು ನಡೆದಾಗೆಲ್ಲ ಅದರ ದುಷ್ಪರಿಣಾಮ ಒಂದಲ್ಲ ಒಂದು ರೀತಿ ಜಾಗತಿಕವಾಗಿ ಉಂಟಾಗುವುದಿದೆ. ಈಗಷ್ಟೇ ಅಲ್ಲ, ಹಿಂದೆ ನಡೆದ ಹಲವು ಯುದ್ಧಗಳ ಸಂದರ್ಭದಲ್ಲಿ ಇದನ್ನು ನಾವು ಕಂಡಿದ್ದೇವೆ, ಅನುಭವಿಸಿದ್ದೇವೆ.

ಚೀನಾ ಮತ್ತು ಪಾಕ್ ವಿರುದ್ಧದ ಯುದ್ಧಗಳ ಸಂದರ್ಭದಲ್ಲಂತೂ ನೇರವಾಗಿ ನಾವು ದೇಶಾದ್ಯಂತ ಎಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು ಎನ್ನುವುದನ್ನು ಕಂಡಿದ್ದೇವೆ ಮತ್ತು ಆ ಸಂದರ್ಭಗಳಲ್ಲಿ ಇಡೀ ರಾಷ್ಟ್ರ ಒಗ್ಗಟ್ಟಾಗಿ ನಿಂತು ಸ್ಪಂದಿಸಿದ್ದನ್ನೂ ನೋಡಿದ್ದೇವೆ. ಲಾಲಬಹಾದ್ದೂರ ಶಾಸ್ತ್ರಿಯವರು ದೇಶದಲ್ಲಿ ಆಹಾರ ಉಳಿತಾಯಕ್ಕಾಗಿ ಕರೆ ನೀಡಿದಾಗ ಮುದುಕರು ಮಕ್ಕಳು ಸಹಿತ ಸಮಗ್ರ ದೇಶ ಸೋಮವಾರ ರಾತ್ರಿಯ ಉಪವಾಸಕ್ಕೆ ತೊಡಗಿದ್ದನ್ನು ಎಂದಾದರೂ ಮರೆಯಲು ಸಾಧ್ಯವೇ? ಇಂದು ಪ್ರಧಾನಿ ಮೋದಿ ಸರಳ ಜೀವನ ನಡೆಸಲು ಹೇಳಿದರೆ ಈ ನಮ್ಮ ರಾಜಕಾರಣಿಗಳು ಮೊದಲು ಮೋದಿಯವರು ಹಾಗೆ ಮಾಡಿ ತೋರಿಸಲಿ ಎಂದಿದ್ದು ಎಷ್ಟೊಂದು ಹಾಸ್ಯಾಸ್ಪದ ಸಂಗತಿ ಎನ್ನುವುದು ಮೋದಿಯವರ ಜೀವನ ಶೈಲಿ ತಿಳಿದಿರುವವರಿಗೆಲ್ಲ ಗೊತ್ತು.

ದೇಶದ ಸಂಪತ್ತನ್ನ ಲೂಟಿ ಮಾಡಿ ರಾಜಮಹಾರಾಜರ ಹಾಗೆ ಐಷಾರಾಮಿ ಜೀವನ ನಡೆಸುವ ಈ ಕಾಂಗ್ರೆಸ್ ನಾಯಕರಿಗೆಂದಾದರೂ ಸರಳ ಜೀವನವೆಂದರೇನೆಂಬ ಅರ್ಥ ಗೊತ್ತಾಗಲು ಸಾಧ್ಯವೇ? ಮೋದಿ ಚಿನ್ನದ ಖರೀದಿ ಕಡಿಮೆ ಮಾಡಿ ಎಂದಿದ್ದು ಚಿನ್ನ ಆಮದು ಮೇಲಿನ ಸುಂಕದ ಮೊತ್ತ ಕಡಿಮೆ ಮಾಡಲೆಂದು ಹೊರತು ಯಾರೂ ಚಿನ್ನ ಬಳಸಬಾರದು ಎಂದಲ್ಲ. ಡಿಕೆಶಿಯಂತಹ ನಾಯಕರು ಈ ವಿಷಯದಲ್ಲಿ ಆಡಿದ ಬಾಲಿಶ ಮಾತುಗಳನ್ನು ಪ್ರಾಥಮಿಕ ಶಾಲಾ ಮಕ್ಕಳು ಸಹ ಮಾತಾಡಲಿಕ್ಕಿಲ್ಲ. ಇದೆಂತಹ ವಿಕೃತ ಮನಸ್ಸು ಯೋಚಿಸಿ. ಇಂತಹ ಹೇಳಿಕೆಗಳಿಂದ ಯಾರೂ ದೊಡ್ಡವರೆನಿಸಲು ಸಾಧ್ಯವಿಲ್ಲ.

ನಮಗಿಂತ ದೇಶ ದೊಡ್ಡದು . ದೇಶಹಿತ ಮೊದಲು, ನಂತರ ಸ್ವಹಿತ. ತಾನೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಎಂದು ಅಸತ್ಯದ ಮಾತನ್ನು ಹೇಳಿಕೊಂಡು ತನ್ನ ಬೆನ್ನು ತಾನೇ ಚಪ್ಪರಿಸಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಮೋದಿಯವರು ಹೇಳುವ ದೇಶಹಿತದ ಮಾತುಗಳೇ ಅಪಥ್ಯವೆನಿಸುವುದು ವಿಚಿತ್ರವಲ್ಲವೇ?

– ಎಲ್. ಎಸ್. ಶಾಸ್ತ್ರಿ

Latest articles

More like this